ಹುಬ್ಬಳ್ಳಿ:

ಇಲ್ಲಿನ ರಾಯಾಪುರದಲ್ಲಿರುವ ಇಸ್ಕಾನ್‌ನಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀರಾಧಾ ಗೋವಿಂದ ದೇವಜಿ ಮಂದಿರದಲ್ಲಿ ಪವಿತ್ರ ಪ್ರಾಣ ಪ್ರತಿಷ್ಠಾ ಮಹೋತ್ಸವ ಸಮಾರಂಭ ಶ್ರದ್ಧಾ- ಭಕ್ತಿಯಿಂದ ನಡೆಯಿತು.

ಸೋಮವಾರ ಸಂಜೆ ೪ ಗಂಟೆಗೆ ಶ್ರೀರಾಧಾ ಗೋವಿಂದ ದೇವಜಿಯವರು ಭಕ್ತರಿಗೆ ತಮ್ಮ ಪ್ರಥಮ ಸಾರ್ವಜನಿಕ ದರ್ಶನವನ್ನು ಅನುಗ್ರಹಿಸಿದರು. ವೈದಿಕ ಮಂತ್ರೋಚ್ಚಾರಣೆ, ಭಕ್ತಿಪೂರ್ಣ ಕೀರ್ತನೆಗಳು ಹಾಗೂ ಪೂಜ್ಯ ಆಧ್ಯಾತ್ಮಿಕ ನಾಯಕರು, ಗಣ್ಯರು, ಭಕ್ತರು ಮತ್ತು ವಿವಿಧ ಭಾಗಗಳಿಂದ ಆಗಮಿಸಿದ ಶುಭ ಚಿಂತಕರ ಸಮ್ಮುಖದಲ್ಲಿ ದೇವರ ಪ್ರತಿಷ್ಠಾಪನಾ ವಿಧಿ-ವಿಧಾನಗಳ ಮೂಲಕ ಅತ್ಯಂತ ವೈಭವದಿಂದ ನೆರವೇರಿದವು.

ಶ್ರೀರಾಧಾ ಗೋವಿಂದ ದೇವಜಿಯವರ ಪ್ರಥಮ ದರ್ಶನವು ಅನೇಕ ವರ್ಷಗಳ ನಿಸ್ವಾರ್ಥ ಸೇವೆ, ತ್ಯಾಗ ಹಾಗೂ ಅಚಲ ಭಕ್ತಿಯ ಪರಿಪಾಕವಾಗಿ ಮೂಡಿ ಬಂದ ಒಂದು ಐತಿಹಾಸಿಕ ಕ್ಷಣವಾಗಿತ್ತು. ಉದ್ಯಮಿಗಳಾದ ಆನಂದ ಕಲಾಲ್, ಡಾ. ಚಿ. ವಿ.ಎಸ್.ವಿ. ಪ್ರಸಾದ್, ಮೋಹನದಾಸ್ ಪೈ ಸೇರಿದಂತೆ ಹಲವರು ಈ ಭವ್ಯ ಆಧ್ಯಾತ್ಮಿಕ ಕೇಂದ್ರ ನಿರ್ಮಾಣಕ್ಕೆ ಮಹತ್ವದ ಕೊಡುಗೆ ನೀಡಿದ್ದರಿಂದ ಅಭಿನಂದಿಸಲಾಯಿತು.

ಈ ಮಂದಿರವು ಆಧ್ಯಾತ್ಮಿಕ ಶಿಕ್ಷಣ, ಸಾಂಸ್ಕೃತಿಕ ಸಂರಕ್ಷಣೆ, ಸಮುದಾಯ ಕಲ್ಯಾಣ ಹಾಗೂ ಭಗವದ್ಗೀತೆಯ ಶಾಶ್ವತ ಸಂದೇಶಗಳ ಪ್ರಸಾರದ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ. ಮುಂದಿನ ಪೀಳಿಗೆಗಳಿಗೂ ಇದು ಭಕ್ತಿ, ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಪ್ರೇರಣೆಯ ದೀಪಸ್ತಂಭವಾಗಲಿದೆ ಎಂಬ ನಿರೀಕ್ಷೆಯಿದೆ.


ಶ್ರೀರಾಧಾ ಗೋವಿಂದ ದೇವಜಿಯವರ ಪ್ರಥಮ ದರ್ಶನಕ್ಕಾಗಿ ಸಾವಿರಾರು ಭಕ್ತರು ಆಗಮಿಸಿದ್ದರು.