ಇಸ್ಮಾಯಿಲ್‌ಗೆ ತಪ್ಪಿದ ವಿಪ ಸ್ಥಾನ: ಶಾಸಕ ವಿನಯ ಮನೆ ಎದುರು ಪ್ರತಿಭಟನೆ

| Published : Jun 04 2024, 12:34 AM IST / Updated: Jun 04 2024, 12:12 PM IST

ಇಸ್ಮಾಯಿಲ್‌ಗೆ ತಪ್ಪಿದ ವಿಪ ಸ್ಥಾನ: ಶಾಸಕ ವಿನಯ ಮನೆ ಎದುರು ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ತಮಟಗಾರ ಅವರಿಗೆ ಕೈ ತಪ್ಪಲು ವಿನಯ ಕುಲಕರ್ಣಿ ಕಾರಣ ಎಂದು ಮುಸ್ಲಿಂ ಬಂಧುಗಳು ವಿನಯ ಮನೆಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು. ಆದರೆ, ಉಪ ನಗರ ಪೊಲೀಸರು ತಡೆದು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಇದ್ದು ಯಾವುದೇ ಕಾರಣಕ್ಕೂ ಪ್ರತಿಭಟನೆ ಮಾಡುವಂತಿಲ್ಲ ಎಂದು ತಾಕೀತು ಮಾಡಿದರು.

ಧಾರವಾಡ:  ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಟಗಾರ ಅವರಿಗೆ ವಿಧಾನಪರಿಷತ್ ಸದಸ್ಯ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಅಂಜುಮನ್ ಇಸ್ಲಾಂ ಸಂಸ್ಥೆ ಪದಾಧಿಕಾರಿಗಳು ಶಾಸಕ ವಿನಯ ಕುಲಕರ್ಣಿ ಮನೆ ಎದುರು ಪ್ರತಿಭಟನೆಗೆ ಮುಂದಾದ ಘಟನೆ ನಡೆಯಿತು.

ತಮಟಗಾರ ಅವರಿಗೆ ಕೈ ತಪ್ಪಲು ವಿನಯ ಕುಲಕರ್ಣಿ ಕಾರಣ ಎಂದು ಮುಸ್ಲಿಂ ಬಂಧುಗಳು ವಿನಯ ಮನೆಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು. ಆದರೆ, ಉಪ ನಗರ ಪೊಲೀಸರು ತಡೆದು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಇದ್ದು ಯಾವುದೇ ಕಾರಣಕ್ಕೂ ಪ್ರತಿಭಟನೆ ಮಾಡುವಂತಿಲ್ಲ ಎಂದು ತಾಕೀತು ಮಾಡಿದರು. ನಮ್ಮ ನಾಯಕರ ಎದುರು ನಮ್ಮ ಸಂಕಷ್ಟ ತೋಡಿಕೊಳ್ಳಲು ಬಂದಿದ್ದೇವೆ ಎಂದು ವಾದ ಮಾಡಿದರೂ ಕೇಳದ ಪೊಲೀಸರು ಪ್ರತಿಭಟನಾಕಾರರನ್ನು ಕಳುಹಿಸಿದರು.

ಇದಕ್ಕೂ ಮುಂಚೆ ಸಂಸ್ಥೆಯ ಆವರಣದಲ್ಲಿ ಇಸ್ಮಾಯಿಲ್ ತಮಟಗಾರ ಬೆಂಬಲಿಗರು ಪ್ರತಿಭಟನೆ ನಡೆಸಿ, ನಗರದ ಕಲಾ ಭವನದ ಎದುರು ಇರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಸಾಮಾಜಿಕ ನ್ಯಾಯದ ತಳಹದಿಯಲ್ಲಿ ಮುಸ್ಲಿಂ ಸಮುದಾಯದ ಮುಂಚೂಣಿಯಲ್ಲಿರುವ ನಾಯಕ ಇಸ್ಮಾಯಿಲ್ ತಮಟಗಾರ ಅವರಿಗೆ ವಿಧಾನಪರಿಷತ್ ಸದಸ್ಯ ಸ್ಥಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಕೊಡಬೇಕು. ಇಲ್ಲದೇ ಹೋದಲ್ಲಿ ಸಮಾಜದಿಂದ ಉಗ್ರ ಹೋರಾಟ ನಡೆಸಬೇಕಾಗುತ್ತದೆ. ಕಾಂಗ್ರೆಸ್ ಪಕ್ಷಕ್ಕೆ ಮುಸ್ಲಿಂ ಸಮುದಾಯದ ಬೆಂಬಲ ನೀಡುತ್ತಲೇ ಬಂದಿದೆ. ಆದರೆ, ಕಾಂಗ್ರೆಸ್ ನೇತೃತ್ವದ ಸರ್ಕಾರ ಉತ್ತರ ಕರ್ನಾಟಕ ಭಾಗದ ಮುಸ್ಲಿಂ ಮುಖಂಡ ಇಸ್ಮಾಯಿಲ್ ತಮಟಗಾರ ಕಡೆಗಣನೆ ಮಾಡುವುದು ಸರಿಯಲ್ಲ ಎಂದು ತಮಟಗಾರ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಅಂಜುಮನ್‌ ಇಸ್ಲಾಂ ಸಂಸ್ಥೆಯ ಪದಾಧಿಕಾರಿಗಳು, ಬೆಂಬಲಿಗರು ಇದ್ದರು.

ಇಂದು ಪಾಲಿಕೆ ಸದಸ್ಯೆ ರಾಜೀನಾಮೆ: 

ಕಾಂಗ್ರೆಸ್‌ ಮುಖಂಡ ಇಸ್ಮಾಯಿಲ್‌ ತಮಟಗಾರಗೆ ವಿಧಾನಪರಿಷತ್‌ ಟಿಕೆಟ್‌ ಸಿಗದಿರುವುದಕ್ಕೆ ಬೆಂಬಲಿಗರ ಆಕ್ರೋಶ ತೀವ್ರವಾಗಿದೆ. ಇದನ್ನು ಖಂಡಿಸಿ ಪಾಲಿಕೆ ಸದಸ್ಯೆ ದಿಲಶಾದ್‌ಬೇಗಂ ನದಾಫ್‌ ಪಾಲಿಕೆ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಲು ಮುಂದಾಗಿದ್ದಾರೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿರುವ ಅವರ ಪುತ್ರ ಮೈನುದ್ದೀನ ನದಾಫ್‌, ಜೂ. 4ರಂದು ಮಧ್ಯಾಹ್ನ 1 ಗಂಟೆಗೆ ಪಾಲಿಕೆ ಆಯುಕ್ತರಿಗೆ ನಮ್ಮ ತಾಯಿ ರಾಜೀನಾಮೆ ಸಲ್ಲಿಸಲಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಕಾಂಗ್ರೆಸ್ಸಿನ ಪಾಲಿಕೆಯ ಹಲವು ಸದಸ್ಯರು ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ ಎಂದರು.

ಧಾರವಾಡ ಅಂಜುಮನ್‌ ಇಸ್ಲಾಂ ಸಂಸ್ಥೆ ಅಧ್ಯಕ್ಷ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್‌ ತಮಟಗಾರ ಅವರಿಗೆ ಈ ಬಾರಿ ಪರಿಷತ್‌ ಟಿಕೆಟ್‌ ಸಿಗುತ್ತದೆ ಎಂಬ ಭರವಸೆ ಇತ್ತು. ಇಸ್ಮಾಯಿಲ್ ಅವರನ್ನು ಹೈಕಮಾಂಡ್ ದೆಹಲಿಗೆ ಕರೆಸಿಕೊಂಡು ಟಿಕೆಟ್‌ ನೀಡುವುದಾಗಿ ಹೇಳಿತ್ತು. ಈಗ ಟಿಕೆಟ್‌ ನೀಡದೇ ವಂಚಿಸಿರುವುದು ಉತ್ತರ ಕರ್ನಾಟಕ ಭಾಗದ ಮುಸ್ಲಿಂಮರಿಗೆ ಕಾಂಗ್ರೆಸ್‌ ಮಾಡಿರುವ ಅನ್ಯಾಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ವೇಳೆ ಪಾಲಿಕೆ ಮಾಜಿ ಸದಸ್ಯ ಯಾಸೀನ ಹಾವೇರಿಪೇಟ, ಹನೀಫ್‌ ಮುನವಳ್ಳಿ, ಶಫಿ ಕಳ್ಳಿಮನಿ, ಸೈಫುದ್ದೀನ ಹಾಳಬಾವಿ, ಅಸ್ಕರ ಮುಲ್ಲಾ ಸೇರಿದಂತೆ ಹಲವರಿದ್ದರು.