ಸಾರಾಂಶ
ಬಳ್ಳಾರಿ ಜಿಲ್ಲಾ ಮಟ್ಟದ ದಿಶಾ ಸಮಿತಿ ಸಭೆ । ಅಕ್ರಮ ಮದ್ಯ ಮಾರಾಟ ತಡೆಗೆ ಕ್ರಮಕೈಗೊಳ್ಳಲು
ಕನ್ನಡಪ್ರಭ ವಾರ್ತೆ ಸಂಡೂರುತಾಲೂಕಿನ ನಂದಿಹಳ್ಳಿಯಲ್ಲಿರುವ ಸ್ನಾತಕೋತ್ತರ ಕೇಂದ್ರದ ಸಭಾಂಗಣದಲ್ಲಿ ಸೋಮವಾರ ನಡೆದ ಸಂಸದ ಈ. ತುಕಾರಾಂ ಅವರ ಅಧ್ಯಕ್ಷತೆಯಲ್ಲಿ ನಡೆದ ಬಳ್ಳಾರಿ ಜಿಲ್ಲಾ ಮಟ್ಟದ ದಿಶಾ ಸಮಿತಿ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಕುರಿತು ಚರ್ಚಿಸಲಾಯಿತು.
ಸಂಸದ ಈ. ತುಕಾರಾಂ ಮಾತನಾಡಿ, ಜಿಲ್ಲೆಯಲ್ಲಿ ಇಸ್ಪೀಟ್, ಮಟ್ಕಾ ದಂಧೆ ತಡೆಗಟ್ಟಬೇಕು. ಆಂಧ್ರಪ್ರದೇಶದಿಂದ ಸಂಡೂರು ತಾಲೂಕಿನ ಗಡಿ ಭಾಗದ ಗ್ರಾಮಗಳಿಗೆ ಅಕ್ರಮವಾಗಿ ಸರಾಯಿ ರೀತಿಯ ಮದ್ಯ ತಯಾರಿಕೆಗೆ ಬಳಸುವ ಸಿಎಚ್ ಪೌಡರ್ ಅನ್ನು ತಂದು ಮಾರಾಟ ಮಾಡಲಾಗುತ್ತಿದೆ. ಹಾಗೆಯೇ ಅಧಿಕೃತ ಶಾಪ್ ಬಿಟ್ಟು ಬೇರೆಡೆ ಅಕ್ರಮವಾಗಿ ಮದ್ಯ ಮಾರಾಟ ತಡೆಗೆ ಕ್ರಮಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿಯವರಿಗೆ ಸೂಚಿಸಿದರು.ಶಾಸಕಿ ಈ. ಅನ್ನಪೂರ್ಣ ತುಕಾರಾಂ ಅವರು ಸಂಸದರ ಮಾತಿಗೆ ಧ್ವನಿಗೂಡಿಸಿ, ಆಂಧ್ರದಿಂದ ತರುವ ಸಿಎಚ್ ಪೌಡರ್ ಬಳಸಿ ಮಧ್ಯ ತಯಾರಿಸಿ, ಬಾಟಲಿಗಲ್ಲಿ ತುಂಬಿ ಹೆಚ್ಚಿನ ಬೆಲೆಗೆ ಅದನ್ನು ರಾಜಾರೋಷವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಮಾರಾಟ ಮಾಡುತ್ತಾರೆ. ಇದನ್ನು ನಿಯಂತ್ರಿಸಲು ಕ್ರಮಕೈಗೊಳ್ಳಬೇಕೆಂದರು.
ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹ:ಸಂಸದರು ಮಾತನಾಡಿ, ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಬಡ ಜನತೆಗೆ ಹತ್ತು ಕೆಜಿ ಅಕ್ಕಿ ನೀಡಲಾಗುತ್ತಿದೆ. ಆದರೆ, ಅಕ್ಕಿ ವಿತರಣೆಯಾದ ದಿನವೇ ಕೆಲವರು ಅದನ್ನು ಜನರಿಂದ ಖರೀದಿಸಿ, ಅಕ್ಕಿ ಗಿರಣಿಗೆ ಸಾಗಿಸಿ ಪಾಲಿಸ್ ಮಾಡಿಸಿ ಹೆಚ್ಚಿನ ಬೆಲೆಗೆ ಜನತೆಗೆ ಮಾರಾಟ ಮಾಡುವ ದಂಧೆ ನಡೆಯುತ್ತಿದೆ. ದಂಧೆಕೋರರು ತಮ್ಮ ಕೃತ್ಯಕ್ಕೆ ಸಂಸದರು, ಶಾಸಕರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಮಾಹಿತಿಯು ಇದೆ. ಆದ್ದರಿಂದ ಅಂತಹ ಅಕ್ರಮವಾಗಿ ಅಕ್ಕಿ ಸಂಗ್ರಹಿಸಿ, ಮಾರಾಟ ಮಾಡುವುದು ಕಂಡು ಬಂದರೆ, ಕೂಡಲೆ ಅಕ್ಕಿಯನ್ನು ವಶಕ್ಕೆ ಪಡೆದು, ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಿ ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
೧೦ ಲಕ್ಷ ಲೀ.ನೀರು ಸಂಗ್ರಹಕ್ಕೆ 2 ಓವರ್ ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಸೂಚನೆ:ಬಳ್ಳಾರಿ ಗ್ರಾಮಾಂತರ ಪ್ರದೇಶಕ್ಕೆ ಸರ್ಫೇಸ್ ನೀರಿನ ಮೂಲಗಳಿಲ್ಲ. ಆದ್ದರಿಂದ ಸಮೀಪದ ಹಗರಿ ಮತ್ತು ತುಂಗಭದ್ರಾ ನದಿ ನೀರಿನಿಂದ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಜನತೆಗೆ ಕುಡಿಯುವ ನೀರು ಒದಗಿಸಲು ಯೋಜನೆ ರೂಪಿಸಿ ಕಾರ್ಯಗತಗೊಳಿಸಬೇಕು. ಸಂಡೂರು ಪಟ್ಟಣದಲ್ಲಿನ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ತುರ್ತಾಗಿ ೧೦ ಲಕ್ಷ ಲೀಟರ್ ನೀರು ಸಂಗ್ರಹ ಸಾಮರ್ಥ್ಯದ ಎರಡು ನೀರಿನ ಟ್ಯಾಂಕ್‌ಗಳ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕು ಎಂದು ಸಂಸದರು ಸೂಚಿಸಿದರು.
ಜಿಲ್ಲಾ ವೈದ್ಯಾಧಿಕಾರಿ ಡಾ. ರಮೇಶ್ ಬಾಬು ಮಾತನಾಡಿ, ಸಂಡೂರು ಪಟ್ಟಣಕ್ಕೆ ೨೫೦ ಹಾಸಿಗೆಯ ಆಸ್ಪತ್ರೆ ಮಂಜೂರಾಗಿದೆ. ಕೆಎಂಇಆರ್‌ಸಿ ಅನುದಾನ ₹೧೯೯ ಕೋಟಿ ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಚೋರುನೂರು ಹಾಗೂ ಕುಡುತಿನಿಗೆ ಸಮುದಾಯ ಆರೋಗ್ಯ ಕೇಂದ್ರಗಳು, ಕ್ಷೇತ್ರ ವ್ಯಾಪ್ತಿಯಲ್ಲಿ ನಾಲ್ಕು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮಂಜೂರಾಗಿವೆ ಎಂದರು.ಸಂಸದರು ಮಾತನಾಡಿ, ಸಿಎಸ್‌ಆರ್ ಯೋಜನೆ ಅಡಿಯಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಕ್ಲೀನಿಕ್ ಆನ್ ವೀಲ್ ವ್ಯವಸ್ಥೆಯನ್ನು ಜಾರಿಗೆ ತರಲು ಕ್ರಮಕೈಗೊಳ್ಳುವಂತೆ ಮತ್ತು ಜೋಳದರಾಶಿ ಹಾಗೂ ಸ್ವಾಮಿಹಳ್ಳಿಯ ಆಸ್ಪತ್ರೆಗಳಿಗೆ ವೈದ್ಯರನ್ನು ನಿಯೋಜಿಸುವಂತೆ ಜಿಲ್ಲಾ ವೈದ್ಯಾಧಿಕಾರಿಗಳಿಗೆ ತಿಳಿಸಿದರು.
ಜಿಲ್ಲೆಯಲ್ಲಿ ಗುಣಾತ್ಮಕ ಹಾಗೂ ಮೌಲ್ಯಯುತ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಕ್ರಮಕೈಗೊಳ್ಳಬೇಕು. ಅಪೂರ್ಣವಾಗಿರುವ ಸಿದ್ದಮ್ಮನಹಳ್ಳಿ, ಬಳ್ಳಾರಿ ಮುಂತಾದಡೆಯ ರೈಲ್ವೆ ಬ್ರಿಡ್ಜ್‌ಗಳ ನಿರ್ಮಾಣವನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು, ವಿವಿಧ ಬೆಳೆಯನ್ನು ಬೆಳೆಯಲು ಉತ್ತೇಜಿಸುವುದು, ಎಲ್ಲಾ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಕುರಿತು ಆಯಾ ಕ್ಷೇತ್ರದ ಶಾಸಕರಿಗೆ ಮಾಹಿತಿ ನೀಡುವುದು ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಲಾಯಿತು.ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಶಾಂತ್‌ಕುಮಾರ್ ಮಿಶ್ರಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ, ಜಿಪಂ ಸಿಇಒ ಮಹಮ್ಮದ್ ಹ್ಯಾರಿಸ್ ಸುಮೈರ್, ಡಿಸಿಎಫ್ ಸಂದೀಪ್ ಸೂರ್ಯವಂಶಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಚಿದಾನಂದಪ್ಪ, ಪುರಸಭೆ ಅಧ್ಯಕ್ಷ ಎಸ್. ಸಿರಾಜ್ ಹುಸೇನ್, ಕುರೆಕುಪ್ಪ ಪುರಸಭೆ ಅಧ್ಯಕ್ಷ ಕಲ್ಗುಡೆಪ್ಪ, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
)
;Resize=(128,128))
;Resize=(128,128))