ಸೋಮರಡ್ಡಿ ಅಳವಂಡಿ ಕೊಪ್ಪಳ
ಇಸ್ರೇಲ್, ಅಮೇರಿಕಾ ಹಾಗೂ ಇರಾನ್ ನಡುವೆ ನಡೆಯುತ್ತಿರುವ ಯುದ್ಧದಿಂದ ಗಲ್ಫ್ ರಾಷ್ಟ್ರಗಳಿಗೆ ಕೊಪ್ಪಳ ಸೇರಿದಂತೆ ರಾಜ್ಯದ ಕುಕ್ಕುಟೋಧ್ಯಮಕ್ಕೆ ಕುತ್ತು ಬಂದಿದ್ದು, ಮೊಟ್ಟೆ ಮಾರಾಟವೂ ಆಗುತ್ತಿಲ್ಲ ಮತ್ತು ದರವೂ ಅರ್ಧಕರ್ಧ ಕುಸಿದ ಹಿನ್ನೆಲೆ ಕೋಳಿ ಫಾರ್ಮ್ ಮಾಲಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.ಹೌದು, ಕೊಪ್ಪಳ ಜಿಲ್ಲೆಯಲ್ಲಿ ನಿತ್ಯವೂ 10-15 ಲಕ್ಷ ಕೋಳಿ ಮೊಟ್ಟೆ ಪಕ್ಕದ ಗೋವಾ ಮತ್ತು ಮಹಾರಾಷ್ಟ್ರ ಮೂಲಕ ಗಲ್ಫ್ ರಾಷ್ಟ್ರಗಳಿಗೆ ರಫ್ತಾಗುತ್ತಿತ್ತು. ಆದರೆ, ಈಗ ಯುದ್ಧದಿಂದ ಒಂದೇ ಒಂದು ಮೊಟ್ಟೆ ರಫ್ತಾಗದಂತೆ ಆಗಿದ್ದು, ಮೊಟ್ಟೆಗಳನ್ನು ಕೇಳುವವರೇ ಇಲ್ಲದಂತಾಗಿದೆ. ದರ ಕುಸಿದಿರುವುದು ಒಂದು ಕಡೆಯಾದರೆ ಉತ್ಪಾದನೆಯಾಗಿರುವ ಮೊಟ್ಟೆ ಕೋಳಿಫಾರ್ಮ್ ನಲ್ಲಿಯೇ ಇರುವಂತಾಗಿದೆ.
ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಬಹುದು. ಈಗಿನ್ನೂ ಕೋಳಿ ಮೊಟ್ಟೆ ಕೆಟ್ಟಿಲ್ಲ.ಆದರೆ, ಇನ್ನೊಂದು ವಾರ ಗತಿಸಿದರೆ ಕೆಡುವ ಸಾಧ್ಯತೆ ಇದೆ ಎನ್ನುತ್ತಾರೆ ಕೋಳಿ ಫಾರ್ಮ್ ಮಾಲಿಕರು.ಕೊಪ್ಪಳ ಜಿಲ್ಲೆಯಲ್ಲಿ ಬರೋಬ್ಬರಿ 28 ಕೋಳಿ ಫಾರ್ಮ್ ಇದ್ದು, 40 ಲಕ್ಷಕ್ಕೂ ಅಧಿಕ ಕೋಳಿ ಇವೆ.ಇದರಿಂದ ನಿತ್ಯವೂ ಹತ್ತು ಹದಿನೈದು ಲಕ್ಷ ಮೊಟ್ಟೆ ಉತ್ಪಾದನೆಯಾಗುತ್ತದೆ. ಹೀಗಿರುವಾಗ ಸ್ಥಳೀಯವಾಗಿಯೇ ಇಷ್ಟೆಲ್ಲ ಮೊಟ್ಟೆ ಮಾರಾಟ ಮಾಡುವುದು ಕಷ್ಟವಾಗುತ್ತದೆ. ಕೋಳಿಫಾರ್ಮ್ ವ್ಯಾಪ್ತಿಯಲ್ಲಿ ಇಲ್ಲದೆಯೂ ಜಿಲ್ಲೆಯಲ್ಲಿ ಐದಾರು ಲಕ್ಷ ಮೊಟ್ಟೆ ಉತ್ಪಾದನೆಯಾಗುತ್ತದೆ. ಅದೆಲ್ಲವೂ ಸ್ಥಳೀಯವಾಗಿಯೇ ಮಾರಾಟ ಮಾಡುವುದು ಸಾಧ್ಯವೇ ಇಲ್ಲ ಎಂದು ಹೇಳುತ್ತಾರೆ.
ಯುದ್ಧ ಪ್ರಾರಂಭದಿಂದ ಕೋಳಿ ಮೊಟ್ಟೆ ರಫ್ತು ಸಹ ನಿಂತು ಹೋಗಿದೆ. ಈಗ ರಫ್ತು ಮಾಡಲು ಆಗದಂತೆ ಆಗಿರುವುದರಿಂದಲೇ ಕೋಳಿ ಮೊಟ್ಟೆಯ ದರ ₹6.50ಗೆ ಹೋಗಿದ್ದು, ಈಗ ಕೇವಲ ₹3 ಗೂ ಕೇಳುವವರು ಇಲ್ಲದಂತಾಗಿದೆ ಎನ್ನುತ್ತಾರೆ ಕೋಳಿ ಫಾರ್ಮ್ ಮಾಲಿಕರು.
ಬಸಾಪುರ ಬಳಿ ಇರುವ ಕೋಳಿಫಾರ್ಮ್ ಒಂದರಲ್ಲಿಯೇ ಸುಮಾರು ಮೂರುವರೆ ಲಕ್ಷ ಮೊಟ್ಟೆ ಸಂಗ್ರಹವಾಗಿದ್ದು, ಅವುಗಳನ್ನು ಎಲ್ಲಿ ಸಾಗಿಸಬೇಕು, ಹೇಗೆ ಮಾರಬೇಕು ಎನ್ನುವ ಚಿಂತೆಯಲ್ಲಿದ್ದಾರೆ ಮಾಲೀಕರಾದ ಸ್ವರೂಪರೆಡ್ಡಿ ಅವರು.
ಬಹುತೇಕ ಎಲ್ಲ ಕೋಳಿಫಾರ್ಮ್ ಮಾಲಿಕರ ಕತೆಯೂ ಒಂದೇ ಆಗಿದೆ. ಇನ್ನೂ ಈಗ ಕೋಳಿ ಮೊಟ್ಟೆಗಳು ಕೆಟ್ಟಿಲ್ಲ. ಆದರೆ, ಇನ್ನು ಕೆಲದಿನಗಳು ಹೋದರೆ ಸಮಸ್ಯೆ ಇನ್ನಷ್ಟು ಬಿಗಡಾಯಿಸುತ್ತದೆ ಎನ್ನುತ್ತಾರೆ.ಯುದ್ಧದಿಂದ ಕೋಳಿ ಮೊಟ್ಟೆ ರಫ್ತು ನಿಂತಿದೆ. ಇದರಿಂದ ತೀವ್ರ ಸಮಸ್ಯೆಯಾಗಿದ್ದು, ಸ್ಥಳೀಯ ಮಾರುಕಟ್ಟೆಯಲ್ಲಿ ಅಷ್ಟೊಂದು ಮೊಟ್ಟೆ ಮಾರಾಟವಾಗುವುದಿಲ್ಲ. ಹೀಗಾಗಿ, ₹6.50 ಪೈಸೆ ಇದ್ದ ದರ ಈಗ ₹3 ಗೆ ಕುಸಿದಿದೆ ಎಂದು ಕೋಳಿಫಾರ್ಮ್ ಮಾಲಿಕ ಸ್ವರೂಪರೆಡ್ಡಿ ತಿಳಿಸಿದ್ದಾರೆ.