ಇಸ್ರೋ ಸ್ಪೇಸ್‌ಶಿಪ್‌ ಲ್ಯಾಂಡಿಂಗ್‌ ಪ್ರಯೋಗ ಯಶಸ್ವಿ

| Published : Mar 23 2024, 01:01 AM IST / Updated: Mar 23 2024, 07:59 AM IST

ಇಸ್ರೋ ಸ್ಪೇಸ್‌ಶಿಪ್‌ ಲ್ಯಾಂಡಿಂಗ್‌ ಪ್ರಯೋಗ ಯಶಸ್ವಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಕೆಟ್‌ಗಳನ್ನು ಮರು ಬಳಕೆ ಮಾಡುವ ನಿಟ್ಟಿನಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ನಡೆಸುತ್ತಿರುವ ‘ಮರುಬಳಕೆಯ ಉಡಾವಣೆ ವಾಹಕ’ದ ಪ್ರಯೋಗ ಸತತ 2ನೇ ಬಾರಿಗೂ ಯಶಸ್ವಿಯಾಗಿದೆ.

ಪಿಟಿಐ ಬೆಂಗಳೂರು

ರಾಕೆಟ್‌ಗಳನ್ನು ಮರು ಬಳಕೆ ಮಾಡುವ ನಿಟ್ಟಿನಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ನಡೆಸುತ್ತಿರುವ ‘ಮರುಬಳಕೆಯ ಉಡಾವಣೆ ವಾಹಕ’ದ ಪ್ರಯೋಗ ಸತತ 2ನೇ ಬಾರಿಗೂ ಯಶಸ್ವಿಯಾಗಿದೆ. 

ಶುಕ್ರವಾರ ಬೆಳಗ್ಗೆ 7.10ಕ್ಕೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ನಡೆದ ಈ ಪ್ರಯೋಗ ಯಶಸ್ವಿಯಾಗಿದ್ದು, ಇಸ್ರೋ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದಂತಾಗಿದೆ.

‘ಪುಷ್ಪಕ್‌’ ಹೆಸರಿನ ರೆಕ್ಕೆಗಳುಳ್ಳ ವಾಹಕವನ್ನು ಭಾರತೀಯ ವಾಯುಪಡೆಯ ಚಿನೂಕ್‌ ಹೆಲಿಕಾಪ್ಟರ್‌ನಲ್ಲಿ ಆಗಸಕ್ಕೆ ಒಯ್ದು, 4.5 ಕಿ.ಮೀ. ದೂರದಿಂದ ಭೂಮಿಗೆ ಬಿಡಲಾಯಿತು. 

ರನ್‌ ವೇ ಇನ್ನೂ 4 ಕಿ.ಮೀ. ದೂರ ಇರುವಾಗಲೇ, ಮಾರ್ಗಮಧ್ಯೆ ಬದಲಾವಣೆಗಳನ್ನು ಪುಷ್ಪಕ್‌ ಸ್ವಯಂಚಾಲಿತವಾಗಿ ಮಾಡಿಕೊಂಡಿತು. ರನ್‌ ವೇ ಮೇಲೆ ಸುಸೂತ್ರವಾಗಿ ಲ್ಯಾಂಡ್‌ ಆಯಿತು. 

ಕೂಡಲೇ ಬ್ರೇಕ್‌ ಪ್ಯಾರಾಶೂಟ್‌, ಲ್ಯಾಂಡಿಂಗ್‌ ಗೇರ್‌ ಬ್ರೇಕ್‌ ಹಾಗೂ ನೋಸ್‌ ವ್ಹೀಲ್‌ ಸ್ಟೀರಿಂಗ್ ವ್ಯವಸ್ಥೆಯ ಮೂಲಕ ನಿಲುಗಡೆಯಾಯಿತು ಎಂದು ಇಸ್ರೋ ತಿಳಿಸಿದೆ.

ಕಳೆದ ವರ್ಷ ಇದೇ ರೀತಿ ನೌಕೆಯನ್ನು ಪ್ರಯೋಗಕ್ಕೆ ಒಳಪಡಿಸಲಾಗಿತ್ತು. ಅದು ಯಶಸ್ವಿಯಾಗಿತ್ತು. ಅದರ ಬೆನ್ನಲ್ಲೇ ಮತ್ತೊಂದು ಯಶಸ್ಸು ಇಸ್ರೋಗೆ ಲಭಿಸಿದಂತಾಗಿದೆ.

ಗಮನಾರ್ಹ ಎಂದರೆ, ಕಳೆದ ವರ್ಷ ಪ್ರಯೋಗಕ್ಕೆ ಒಳಪಟ್ಟ ನೌಕೆ ಹಾಗೂ ಅದರ ಎಲ್ಲ ವ್ಯವಸ್ಥೆಗಳನ್ನು ಈ ಬಾರಿಯೂ ಬಳಸಿಕೊಳ್ಳಲಾಗಿದೆ.

ಪ್ರಯೋಗ ಯಶಸ್ವಿಯಾದ ಹಿನ್ನೆಲೆಯಲ್ಲಿ ವಿಜ್ಞಾನಿಗಳನ್ನು ಇಸ್ರೋ ಅಧ್ಯಕ್ಷ ಎಸ್‌.ಸೋಮನಾಥ್‌ ಅವರು ಅಭಿನಂದಿಸಿದ್ದಾರೆ.

ಲಾಭ ಏನು?
ಈ ಸ್ಪೇಸ್‌ಶಿಪ್‌ ನಿಜ ರೂಪ ಪಡೆದುಕೊಂಡು ಉಡ್ಡಯನ ಆರಂಭಿಸಿದರೆ ಉಪಗ್ರಹ ಉಡ್ಡಯನ ವೆಚ್ಚ ಭಾರೀ ಪ್ರಮಾಣದಲ್ಲಿ ಇಳಿಯಲಿದೆ.

ಏಕೆಂದರೆ ಭವಿಷ್ಯದಲ್ಲಿ ಉಪಗ್ರಹಗಳನ್ನು ನಿಗದಿತ ಕಕ್ಷೆಗೆ ಸೇರಿಸಿ ಅಲ್ಲಿಂದ ಭೂಮಿಗೆ ಈ ಪುಷ್ಪಕ್‌ ರಾಕೆಟ್‌ ಅಥವಾ ಸ್ಪೇಸ್‌ಶಿಪ್‌ ಮರಳುತ್ತದೆ. 

ಆಗ ಮತ್ತೆ ಅದನ್ನೇ ಬಳಸಿ ಇನ್ನೊಂದು ಉಪಗ್ರಹ ಹಾರಿಸಬಹುದು. ಹೊಸ ವಾಹಕ ನಿರ್ಮಿಸಬೇಕಿಲ್ಲ.