ಸಾರಾಂಶ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ ಸಾಗಡೆ ಗ್ರಾಮದಲ್ಲಿ ಬಸವ, ಅಂಬೇಡ್ಕರ್ ವಸತಿ ಯೋಜನೆಯಡಿ ೨೫೩ ಫಲಾನುಭವಿಗಳಿಗೆ ವಸತಿ ಮಂಜೂರಾತಿ ಪತ್ರವನ್ನು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ವಿತರಿಸಿದರು. ತಾಲೂಕಿನ ಸಾಗಡೆ ಗ್ರಾಪಂ ಆವರಣದಲ್ಲಿ ಸಾಗಡೆ ಗ್ರಾಪಂ ವ್ಯಾಪ್ತಿಯ ಬೆಟ್ಟದಪುರ, ಕೂಟೇಗೌಡನಹುಂಡಿ, ಕೆಂಗಾಕಿ, ಕುಮಚಹಳ್ಳಿ ಗ್ರಾಮದ ಫಲಾನುಭವಿಗಳಿಗೆ ವಸತಿ ಮಂಜೂರಾತಿ ಪತ್ರ ಹಸ್ತಾಂತರಿಸಿದರು.ಬಸವ ವಸತಿ ಯೋಜನೆಯಡಿ ೧೨೧ ಹಾಗೂ ಅಂಬೇಡ್ಕರ್ ವಸತಿ ಯೋಜನೆಯಲ್ಲಿ ೧೩೨ ವಸತಿಯ ಮಂಜೂರಾತಿ ಪತ್ರ ವಿತರಿಸಿದ ಶಾಸಕರು ಫಲಾನುಭವಿಗಳಿಗೆ ಶುಭ ಕೋರಿದರು. ನಂತರ ಸಭೆಯಲ್ಲಿ ಮಾತನಾಡಿ, ಗ್ರಾಮಗಳ ಅಭಿವೃದ್ಧಿ ನನಗೆ ಮುಖ್ಯವೇ ಹೊರತು, ರಾಜಕೀಯ ದ್ವೇಷಕ್ಕಿಂತ ಅಭಿವೃದ್ಧಿ ರಾಜಕಾರಣ ನನ್ನ ಬದ್ಧತೆಯಾಗಿದೆ. ಕ್ಷೇತ್ರದ ಅಭಿವೃದ್ಧಿಯೇ ನನ್ನ ಮೂಲ ಮಂತ್ರ ಎಂದರು. ಸಿಎಂ ವಿಶೇಷ ಅನುದಾನಲ್ಲಿ ಕ್ಷೇತ್ರದ ೬೩ ಗ್ರಾಮಗಳ ಸಿಸಿ ರಸ್ತೆ, ಚರಂಡಿ ಕಾಮಗಾರಿಗೆ ಅನುದಾನ ಮೀಸಲಿಡಲಾಗಿದೆ. ಸಾಗಡೆ ಗ್ರಾಪಂನ ಬೆಟ್ಟದಪುರ, ಸಾಗಡೆಗೆ 50 ಲಕ್ಷ ರು. ಹಣ ನೀಡಲಾಗಿದೆ ಎಂದರು. ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವದಲ್ಲಿ ನೀಡಿದ್ದ 5 ಗ್ಯಾರಂಟಿಗಳು ಅನುಷ್ಠಾನಕ್ಕೆ ತರುವ ಸಮಯದಲ್ಲಿ ಅಭಿವೃದ್ಧಿ ಕೆಲಸಕ್ಕೆ ಅನುದಾನ ನೀಡುವುದು ಸ್ವಲ್ಪ ವಿಳಂಬವಾಗಿತ್ತು. ಈಗ ಅಭಿವೃದ್ಧಿಗೆ ಅನುದಾನ ಸರ್ಕಾರ ಬಿಡುಗಡೆ ಮಾಡಿದೆ ಎಂದರು. ಸಾಗಡೆಗೆ ಪಶು ಆಸ್ಪತ್ರೆಯ ಬೇಡಿಕೆ ಇಟ್ಟಿದ್ದೀರಾ ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಪಶು ಆಸ್ಪತ್ರೆ ಮಂಜೂರು ಮಾಡಿಸಲು ಪ್ರಮಾಣಿಕವಾಗಿ ಪ್ರಯತ್ನ ಮಾಡುವೆ ಎಂದು ಭರವಸೆ ನೀಡಿದರು.ಸೊಪ್ಪು ಹಾಕಬೇಡಿ:
ವಿಪಕ್ಷಗಳು ಇರುವುದೇ ಟೀಕಿಸೋದಕ್ಕೆ. ವಿಪಕ್ಷಗಳ ಟೀಕೆಗೆ ತಲೆ ಕೆಡಿಸಿಕೊಳ್ಳದೆ ಕ್ಷೇತ್ರದ ಅಭಿವೃದ್ಧಿಗೆ ಇರುವ ಸಮಯದಲ್ಲಿ ಕೆಲಸ ಮಾಡುವ ಕೆಲಸ ನನ್ನದಾಗಿದೆ ಎಂದು ಬಿಜೆಪಿಗರಿಗೆ ಟಾಂಗ್ ನೀಡಿದರು. ಹರವೆ ಜಿಪಂ ಕ್ಷೇತ್ರದ ಮಾಜಿ ಸದಸ್ಯ ಕೆರಹಳ್ಳಿ ನವೀನ್ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಶಿವಕುಮಾರ್, ಉಪಾಧ್ಯಕ್ಷೆ ಮಂಜುಳ, ಗ್ರಾಪಂ ಸದಸ್ಯರಾದ ಬಂಗಾರು, ನಂಜುಂಡನಾಯಕ, ಕೃಷ್ಣಶೆಟ್ಟಿ, ದೀಪು, ವೆಂಕಟರಮಣನಾಯಕ, ನಾಗಪ್ಪ,ಪರಮೇಶ್, ಮುಖಂಡರಾದ ನಂಜನಾಯಕ, ಕುಮಚಹಳ್ಳಿ ಸ್ವಾಮಿ, ಪಟೇಲ್ ಸುರೇಶ್, ನಟರಾಜು, ಪಿಡಿಒ ರಂಗಸ್ವಾಮಿ ಹಾಗೂ ಫಲಾನುಭವಿಗಳಿದ್ದರು.