ಸಾರಾಂಶ
ಅಂಕೋಲಾ: ಸಾಲ ಮರುಪಾವತಿ ಮಾಡಿದರೂ ಸಾಲಕ್ಕೆ ಅಡವಾಗಿ ಇಟ್ಟ ದಾಖಲೆಗಳನ್ನು ಹಿಂದಿರುಗಿಸಲು ಸತಾಯಿಸುತ್ತಿದ್ದ ಇಲ್ಲಿನ ಕೆನರಾ(ಸಿಂಡಿಕೇಟ್) ಬ್ಯಾಂಕ್‌ನ ವಿರುದ್ಧ ಪ್ರತಿಭಟನೆ ನಡೆಸಿ, ಘೇರಾವ್ ಹಾಕಿದ ಘಟನೆ ಗುರುವಾರ ನಡೆದಿದೆ.
ಹಾರವಾಡದ ಇಳಿ ವಯಸ್ಸಿನ ಇಂದು ಚಂದ್ರು ತಾಂಡೇಲ ಅವರ ಓಂ ನಮಃ ಶಿವಾಯ ಬೋಟ್ ಮಾ. ೪ರಂದು ತಾಲೂಕಿನ ಕುಕ್ಕಡಗುಡ್ಡದ ಲೆವೆಲ್ ಸರ್ವೆ ವ್ಯಾಪ್ತಿಯಲ್ಲಿ ಆಳ ಸಮುದ್ರ ಪ್ರದೇಶದಲ್ಲಿ ಮೀನುಗಾರಿಕೆ ಮಾಡುತ್ತಿದ್ದಾಗ ಹವಾಮಾನ ವೈಪರೀತ್ಯಕ್ಕೆ ಸಿಲುಕಿ ಸಂಪೂರ್ಣ ಮುಳುಗಿತ್ತು. ಹೀಗಾಗಿ ಈ ಕುಟುಂಬದವರು ಅತಂತ್ರ ಸ್ಥಿತಿಗೆ ತಲುಪಿದ್ದರು.ಈ ಬೋಟ್‌ನ ಮೇಲೆ ಮಾಡಿದ ಸಾಲವನ್ನು ಖಾಸಗಿ ಬ್ಯಾಂಕ್ ಹಾಗೂ ಕೈಗಡ ಸಾಲ ಮಾಡಿಕೊಂಡು ಸಾಲವನ್ನು ಬ್ಯಾಂಕಿಗೆ ಮರುಪಾವತಿ ಮಾಡಿದ್ದರು. ಬ್ಯಾಂಕ್‌ನಲ್ಲಿ ಸಾಲ ಮಾಡುವ ಸಂದರ್ಭದಲ್ಲಿ ಇಟ್ಟ ಬೋಟ್‌ನ ಆರ್‌ಸಿ ಮತ್ತು ಇತರೆ ದಾಖಲೆಗಳನ್ನು ಬ್ಯಾಂಕಿನ ವ್ಯವಸ್ಥಾಪಕಿ ಪ್ರತೀಕ್ಷಾ ಕಾರೆ ನೀಡದೆ ಸತಾಯಿಸುತ್ತಿದ್ದರು.
ತಾಂಡೇಲ ಅವರು ಬ್ಯಾಂಕ್‌ಗೆ ಎರಡು ಬಾರಿ ಬಂದು ದಾಖಲೆಗಳನ್ನು ಹಿಂದಿರುಗಿಸಲು ಪರಿಪರಿಯಾಗಿ ಕೇಳಿಕೊಂಡರೂ ಕ್ಯಾರೆ ಎನ್ನದೆ ವ್ಯವಸ್ಥಾಪಕರು ಇಂದು ಬಾ, ನಾಳೆ ಬಾ ಎನ್ನುತ್ತಲೆ ಕಾಲ ಕಳೆದಿದ್ದರು.ಬ್ಯಾಂಕ್‌ನ ಅಮಾನವೀಯ ವರ್ತನೆಯಿಂದ ರೋಸಿ ಹೋದ ನಾಗರಿಕರು ಬ್ಯಾಂಕ್‌ಗೆ ಘೇರಾವ ಹಾಕಿ ಪ್ರತಿಭಟನೆ ನಡೆಸಿದರು. ಆಗ, ನನಗೆ ಕನ್ನಡ ಬರೋದಿಲ್ಲ. ನಿಮ್ಮ ಹತ್ತಿರ ಮಾತನಾಡುವುದಿಲ್ಲ ಎಂದು ಹೇಳಿ ಬ್ಯಾಂಕ್‌ನ ಒಳಕೊಠಡಿಯಲ್ಲಿ ಬ್ಯಾಂಕಿನ ವ್ಯವಸ್ಥಾಪಕಿ ಹೋಗಿ ಕುಳಿತುಕೊಂಡು ಬಿಟ್ಟರು. ಬ್ಯಾಂಕ್‌ನಲ್ಲಿ ಪ್ರತಿಭಟನೆಯ ಕಾವು ಜಾಸ್ತಿಯಾದ್ದಂತೆ ಪಿಎಸ್‌ಐಗಳಾದ ಸುನೀಲ ಹುಲ್ಲೊಳ್ಳಿ ಮತ್ತು ಜಯಶ್ರೀ ಪ್ರಭಾಕರ ಅವರು ಬ್ಯಾಂಕ್‌ಗೆ ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ದೀಪಕ ಚಂದ್ರು ತಾಂಡೇಲ ಮಾತನಾಡಿ, ನನ್ನ ತಾಯಿಯ ಹೆಸರಿನಲ್ಲಿದ್ದ ಸಾಲ ಮರುಪಾವತಿ ಆಗಿದೆ. ನಾವು ಬಹಳ ಕಷ್ಟದ ಪರಿಸ್ಥಿಯಲ್ಲಿ ಇದ್ದೇನೆ. ಸುಖಾಸುಮ್ಮನೆ ನಮಗೆ ತೊಂದರೆ ಕೊಡದೆ, ನಮ್ಮ ದಾಖಲೆಗಳನ್ನು ವಾಪಸ್ ಕೊಡಿ ಎಂದು ಕೇಳಿಕೊಂಡರು.ವ್ಯವಸ್ಥಾಪಕಿ ಪ್ರತೀಕ್ಷಾ ಕಾರೆ ಮಾತನಾಡಿ, ದಾಖಲೆಗಳನ್ನು ವಾಪಸ್ ನೀಡಲು ಬಹಳಷ್ಟು ಸಮಯ ಬೇಕಾಗುತ್ತದೆ. ಇಷ್ಟೇ ದಿನ ಅಂತಾ ಹೇಳೊಕೆ ಆಗಲ್ಲ. ಹುಡುಕಿ ಕೊಡುತ್ತೇನೆ ಎಂದು ಬೇಜವಾಬ್ದಾರಿ ಮಾತಿನಿಂದ ಕೋಪಗೊಂಡ ನಾಗರಿಕರು ವ್ಯವಸ್ಥಾಪಕಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಪಿಎಸೈಗಳಾದ ಸುನೀಲ ಹುಲ್ಲೊಳ್ಳಿ ಮತ್ತು ಜಯಶ್ರೀ ಪ್ರಭಾಕರ ಮಾತನಾಡಿ, ನೋಡಿ ನೀವು ಹೀಗೆ ಹೇಳೊಕೆ ಆಗಲ್ಲ. ಸಾಲ ಮರುಪಾವತಿ ಆಗಿದ್ದು ನಿಜ. ಹಾಗಿರುವಾಗ ಅವರ ದಾಖಲೆಗಳನ್ನು ವಾಪಸ್ ನೀಡಲು ಕಾನೂನಿನಲ್ಲಿ ತೊಂದರೆ ಇಲ್ಲ. ಇಲ್ಲದಿದ್ದರೆ ನಮ್ಮ ಭಾಷೆಯಲ್ಲೆ ಕಾನೂನು ಕ್ರಮ ಕೈಗೊಳ್ಳಬೇಕಾಗತ್ತೆ ಎಂದು ಎಚ್ಚರಿಸಿದ ಬೆನ್ನಲ್ಲೆ ಕಸಿವಿಸಿಗೊಂಡ ವ್ಯವಸ್ಥಾಪಕಿ ಪ್ರತೀಕ್ಷಾ ಕಾರೆ, ನಾನು ಈಗಲೇ ದಾಖಲೆಗಳನ್ನು ವಾಪಸ್ ಕೊಡುತ್ತೇನೆ. ಕನ್ನಡ ಸರಿಯಾಗಿ ಬಾರದೆ ಇರುವುದರಿಂದ ತೊಂದರೆ ಆಗಿದೆ. ವಿಷಾದಿಸಿ, ದಾಖಲೆ ನೀಡಲು ಒಪ್ಪಿದರು.ಅಂತೂ ಪಿಎಸ್‌ಐ ಸುನೀಲ ಹುಲ್ಲೊಳ್ಳಿ ಮತ್ತು ಜಯಶ್ರೀ ಪ್ರಭಾಕರ, ಅಪರಾಧ ದಳದ ಸಿಬ್ಬಂದಿಗಳಾದ ಆಸೀಫ ಕುಂಕುರ, ರೋಹಿದಾಸ ದೇವಾಡಿಗ ಅವರ ಸಹಕಾರದಲ್ಲಿ ಪ್ರತಿಭಟನಾಕಾರರನ್ನು ಮನವೊಲಿಸಿ, ಪ್ರಕರಣವನ್ನು ಇತ್ಯರ್ಥಪಡಿಸಿದರು. ಸಹಾಯಕ ವ್ಯವಸ್ಥಾಪಕಿ ಶೀಲಾ ಎಚ್.ಎಸ್. ಇದ್ದರು.
ಈ ಸಂದರ್ಭದಲ್ಲಿ ವಿಘ್ನೇಶ ನಾಯ್ಕ, ಚಂದು ನಾಯ್ಕ, ಲಕ್ಷ್ಮಿದಾಸ ನಾಯ್ಕ, ಯಶಕುಮಾರ ನಾಯಕ, ಪ್ರವೀಣ ತಾಂಡೇಲ, ಬಾಳು ನಾಯ್ಕ, ರೋಹಿತ್ ತಾಂಡೇಲ, ಮೋಹನ ದುರ್ಗೆಕರ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.