ಈರುಳ್ಳಿ ಆಮದಿನಿಂದಾಗಿ ಈರುಳ್ಳಿ ದರ ಕುಸಿತ

| Published : Mar 15 2024, 01:19 AM IST

ಸಾರಾಂಶ

ಮೆಣಸಿನಕಾಯಿ ದರ ಕುಸಿತದ ಪರಿಣಾಮವಾಗಿ ಬ್ಯಾಡಗಿಯಲ್ಲಿ ರೈತರು ಎಪಿಎಂಸಿಗೆ ಬೆಂಕಿ ಹಚ್ಚಿದರು. ದರ ಕುಸಿತ ರೈತರಿಗೆ ನೋವು ಆಗುವುದು ಸಹಜ. ಈರುಳ್ಳಿ ಬೆಲೆ ಉತ್ತಮ ಇರುವಾಗ ಕೇಂದ್ರ ಸರ್ಕಾರ ೫ ಲಕ್ಷ ಟನ್ ಈರುಳ್ಳಿಯನ್ನು ಬೇರೆ ದೇಶದಿಂದ ಆಮದು ಮಾಡಿಕೊಂಡ ಪರಿಣಾಮ ಈರುಳ್ಳಿ ದರ ಕುಸಿಯಿತು. ಇದು ರೈತರು ಬೆಳೆದ ಈರುಳ್ಳಿ ಮೇಲೆ ಪರಿಣಾಮ ಉಂಟಾಗುತ್ತದೆ ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಮೆಣಸಿನಕಾಯಿ ದರ ಕುಸಿತದ ಪರಿಣಾಮವಾಗಿ ಬ್ಯಾಡಗಿಯಲ್ಲಿ ರೈತರು ಎಪಿಎಂಸಿಗೆ ಬೆಂಕಿ ಹಚ್ಚಿದರು. ದರ ಕುಸಿತ ರೈತರಿಗೆ ನೋವು ಆಗುವುದು ಸಹಜ. ಈರುಳ್ಳಿ ಬೆಲೆ ಉತ್ತಮ ಇರುವಾಗ ಕೇಂದ್ರ ಸರ್ಕಾರ ೫ ಲಕ್ಷ ಟನ್ ಈರುಳ್ಳಿಯನ್ನು ಬೇರೆ ದೇಶದಿಂದ ಆಮದು ಮಾಡಿಕೊಂಡ ಪರಿಣಾಮ ಈರುಳ್ಳಿ ದರ ಕುಸಿಯಿತು. ಇದು ರೈತರು ಬೆಳೆದ ಈರುಳ್ಳಿ ಮೇಲೆ ಪರಿಣಾಮ ಉಂಟಾಗುತ್ತದೆ ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.

ಪಟ್ಟಣದ ಹಳೆ ಸಂತೆಕಟ್ಟೆ ಆವರಣದಲ್ಲಿ ಸ್ಥಳೀಯ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಪಿಕೆಪಿಎಸ್ ಮೆಡಿಕಲ್ ಮತ್ತು ಜನರಲ್ ಸ್ಟೋರ್ಸ್‌ ಉದ್ಘಾಟನೆ ಅಂಗವಾಗಿ ಹಮ್ಮಿಕೊಂಡಿದ್ದ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಒಂದೊಂದು ವರ್ಷ ಒಂದೊಂದು ಬೆಳೆಗೆ ಉತ್ತಮ ಬೆಲೆ ಸಿಗುತ್ತಿದೆ. ಯಾವ ಬೆಳೆಗೂ ಸ್ಥಿರ ಬೆಲೆ ಸಿಗುತ್ತಿಲ್ಲ. ಇದರಿಂದಾಗಿ ರೈತರು ಆರ್ಥಿಕ ಸಂಕಷ್ಟ ಎದುರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರೈತರ ಬೆಳೆಗಳಿಗೆ ಯೋಗ್ಯ ಬೆಲೆ ನೀಡಬೇಕು. ದೇಶಕ್ಕೆ ಉತ್ತಮ ಪ್ರಧಾನಿ ಸಿಗುವವರೆಗೂ ರೈತರು ಸಂದಿಗ್ಧ ಪರಿಸ್ಥಿತಿಯಲ್ಲಿರುತ್ತಾರೆ ಎಂದ ಅವರು, ದೇಶದ ಜಿಡಿಪಿಯಲ್ಲಿ ಮೊದಲು ಶೇ.೪.೫ ರಿಂದ ೫ ರವರೆಗೆ ರೈತರ ಪಾಲು ಇರುತ್ತಿತ್ತು. ಇದು ಈಗ ಶೇ.೨.೫ ರಿಂದ ೩ ಪಾಲು ಬಂದಿದೆ. ಜಿಡಿಪಿಯಲ್ಲಿ ರೈತರ ಪಾಲು ಕ್ರಮೇಣ ಕಡಿಮೆಯಾಗಿರುವುದೇ ರೈತರ ಈ ದುಃಸ್ಥಿತಿಗೆ ಬರಲು ಕಾರಣವಾಗಿದೆ ಎಂದರು.

ಜಿಲ್ಲೆಯಲ್ಲಿ ತಿಕೋಟಾ ಪಿಕೆಪಿಎಸ್ ನಂತರ ಇಲ್ಲಿನ ಪಿಕೆಪಿಎಸ್ ಸಂಘವು ₹೬೦ ಕೋಟಿ ವ್ಯವಹಾರ ಮಾಡುವ ಮೂಲಕ ಉತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ಎರಡನೇ ಸ್ಥಾನದಲ್ಲಿರುವುದು ಶ್ಲಾಘನೀಯ. ಬಸವನಬಾಗೇವಾಡಿ ಪಿಕೆಪಿಎಸ್ ಸಂಘವು ರೈತರ ಬಾಂಧವರಿಗೆ ಅಲ್ಪಾವಧಿ, ದೀರ್ಘಾವಧಿ ಸಾಲ ಸೇರಿದಂತೆ ಇತರೇ ಸಾಲ ನೀಡುವ ಮೂಲಕ ಅವರಿಗೆ ನೆರವಾಗುವ ಜೊತೆಗೆ ಅವರಿಗೆ ವಿವಿಧ ಸೇವೆಗಳನ್ನು ನೀಡುತ್ತಿರುವುದು ಇಲ್ಲಿನ ಆಡಳಿತ ಮಂಡಳಿ, ಸಿಬ್ಬಂದಿಗಳ ನ್ಯಾಯಸಮ್ಮತವಾಗಿ ಕಾರ್ಯನಿರ್ವಹಿಸುತ್ತಿರುವದಕ್ಕೆ ಹಿಡಿದ ಕೈಗನ್ನಡಿ ಎಂದರೆ ತಪ್ಪಾಗಲಾರದು. ಜಿಲ್ಲೆಯಲ್ಲಿಯೇ ಪ್ರಥಮವಾಗಿ ರೈತರಿಗೆ ರಿಯಾಯತಿ ದರದಲ್ಲಿ ಔಷಧಿಗಳನ್ನು ನೀಡಲು ಮೆಡಿಕಲ್ ಸ್ಟೋರ್ಸ್‌ ಆರಂಭಿಸುತ್ತಿರುವುದು ಹೆಮ್ಮೆಯ ಸಂಗತಿ. ಇದರಿಂದ ರೈತರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.

ವ್ಯಾಜ್ಯ ಬಗೆಹರಿದರೆ ಸಂಪೂರ್ಣ ನೀರಾವರಿ:

ಈ ವರ್ಷ ೧೯೭೨ರ ಬರಗಾಲವಿದ್ದಂತೆ ನಾಡಿನಲ್ಲಿ ಬರಗಾಲ ಆವರಿಸಿದೆ. ಆಲಮಟ್ಟಿ ಜಲಾಶಯದಲ್ಲಿ ನೀರು ಇರುವುದರಿಂದಾಗಿ ಬಸವನಬಾಗೇವಾಡಿ ಮತಕ್ಷೇತ್ರದಲ್ಲಿ ನೀರಿನ ಸಮಸ್ಯೆ ಉಂಟಾಗಿಲ್ಲ. ಜಿಲ್ಲೆಯಲ್ಲಿಯೇ ೧೨ ತಿಂಗಳು ಜನರಿಗೆ ನೀರು ಸಿಗುವ ಕ್ಷೇತ್ರ ನಮ್ಮದು. ಇದುವರೆಗೂ ನಮ್ಮ ಕ್ಷೇತ್ರದಲ್ಲಿ ಯಾವ ಗ್ರಾಮಕ್ಕೂ ಟ್ಯಾಂಕರ್ ಹಚ್ಚುವ ಪ್ರಮೇಯ ಬಂದಿಲ್ಲ. ಸುಪ್ರೀಂಕೋರ್ಟ್‌ನಲ್ಲಿರುವ ವ್ಯಾಜ್ಯ ಬಗೆಹರಿದರೆ ಬಸವನಬಾಗೇವಾಡಿ ಇಡೀ ಮತಕ್ಷೇತ್ರ ಸಂಪೂರ್ಣ ನೀರಾವರಿಯಾಗಲಿದೆ ಎಂದರು.

ಡಾ.ಎನ್.ಬಿ.ವಜೀರಕರ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಪಿಕೆಪಿಎಸ್ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಾನ್ನಿಧ್ಯ ವಹಿಸಿದ್ದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ಸಿದ್ದಲಿಂಗ ಸ್ವಾಮೀಜಿ, ಮುಖಂಡರಾದ ಈರಣ್ಣ ಪಟ್ಟಣಶೆಟ್ಟಿ, ಶಂಕರಗೌಡ ಬಿರಾದಾರ ಮಾತನಾಡಿದರು. ವೇದಿಕೆಯಲ್ಲಿ ಶಿವಾನಂದ ಈರಕಾರಮುತ್ಯಾ, ಡಿಸಿಸಿ ಬ್ಯಾಂಕಿನ ನಿರ್ದೇಶಕ ಚಂದ್ರಶೇಖರಗೌಡ ಪಾಟೀಲ, ವಿವಿಧ ಸಮಾಜದ ಮುಖಂಡರಾದ ಪ್ರೇಮಕುಮಾರ ಮ್ಯಾಗೇರಿ, ಬಸಣ್ಣ ದೇಸಾಯಿ, ಸುರೇಶ ಹಾರಿವಾಳ, ಶೇಖರ ಗೊಳಸಂಗಿ, ನೀಲಪ್ಪ ನಾಯಕ, ಬಸವರಾಜ ಹಾರಿವಾಳ, ಬಸವರಾಜ ಗೊಳಸಂಗಿ, ಸಂಗಪ್ಪ ವಾಡೇದ, ಪ್ರವೀಣ ಪವಾರ, ಸಂಗಮೇಶ ಓಲೇಕಾರ, ಬಸವರಾಜ ಬಿಜಾಪುರ, ರುದ್ರಮುನಿ ಸಾರಂಗಮಠ, ಕೆ.ಬಿ.ಕಡೆಮನಿ, ಕಾಶಿನಾಥ ಹಿಂಗೋಲಿ, ಎಸ್.ಎ.ದೇಗಿನಾಳ, ಸಿದ್ದನಗೌಡ ಪಾಟೀಲ, ನಿಂಗು ಗುಂಡಳ್ಳಿ, ಅಶೋಕ ಬಾಗೇವಾಡಿ, ಮುತ್ತು ಕಿಣಗಿ, ಪರಶುರಾಮ ಜಮಖಂಡಿ, ಸುಭಾಸ ಚಕ್ರಮನಿ, ಡಾ.ಶಬ್ಬೀರ ನದಾಫ, ಮೈಬೂಬಬಾಷಾ ನಾಯ್ಕೋಡಿ, ಸಹಕಾರಿ ಇಲಾಖೆಯ ಅಧಿಕಾರಿಗಳಾದ ಚೇತನ ಭಾವಿಕಟ್ಟಿ, ರವಿ ಬಣಗಾರ, ಶ್ರೀಶೈರ ಹಂಗರಗಿ, ಪಿಕೆಪಿಎಸ್ ಉಪಾಧ್ಯಕ್ಷ ಮಲ್ಲೇಶಿ ಕಡಕೋಳ, ನಿರ್ದೇಶಕರಾದ ನಿಂಗಪ್ಪ ಅವಟಿ, ಮಹಾಂತೇಶ ಹಾರಿವಾಳ, ನಿಂಗಪ್ಪ ಕುಳಗೇರಿ, ಶ್ರೀಶೈಲ ಪರಮಗೊಂಡ, ಈರಣ್ಣ ವಂದಾಲ, ಸುರೇಶ ನಾಯಕ, ಗಂಗಾಬಾಯಿ ಕಡ್ಲಿಮಟ್ಟಿ, ಮಹಾದೇವಿ ಮೈಲೇಶ್ವರ, ಕ್ಷೇತ್ರಾಧಿಕಾರಿ ಎಸ್.ವ್ಹಿ.ರಾಜಗಿರಿ ಇತರರು ಇದ್ದರು. ಶರಣು ಬಸ್ತಾಳ ಪ್ರಾರ್ಥಿಸಿ, ರೈತಗೀತೆ ಹಾಡಿದರು. ಪಿಕೆಪಿಎಸ್ ಸಿಇಒ ಪ್ರವೀಣ ಚಿಕ್ಕೊಂಡ ಸ್ವಾಗತಿಸಿದರು. ಎಚ್.ಬಿ.ಬಾರಿಕಾಯಿ, ಕೊಟ್ರೇಶ ಹೆಗಡ್ಯಾಳ ನಿರೂಪಿಸಿದರು. ಚಂದ್ರು ಹದಿಮೂರ ವಂದಿಸಿದರು. ಕಾರ್ಯಕ್ರಮಕ್ಕೂ ಮುನ್ನ ಪಿಕೆಪಿಎಸ್ ನಿರ್ದೇಶಕರಾಗಿದ್ದ ಮುದುಕಪ್ಪ ಬಾರಿಗಿಡದ(ಅಸ್ಕಿ) ಅವರು ನಿಧನರಾದ ಹಿನ್ನೆಲೆಯಲ್ಲಿ ಅವರ ಆತ್ಮಕ್ಕೆ ಚಿರಶಾಂತಿ ಕೋರಿ ಒಂದು ನಿಮಿಷ ಮೌನಾಚರಣೆ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.