ಜೀವ ವಿಮೆ ಮಾದರಿಯಲ್ಲೆ ಬೆಳೆವಿಮೆ ಬಾಂಡ್ ವಿತರಿಸಿ: ರೈತ ಸಂಘ

| Published : May 17 2024, 12:37 AM IST

ಸಾರಾಂಶ

ಎಲ್‌ಐಸಿಯಲ್ಲಿ ವಿಮೆ ಮಾದರಿಯಲ್ಲಿ ಬೆಳೆ ವಿಮೆಗೂ ಬಾಂಡ್ ವಿತರಣೆ ಪದ್ದತಿ ಜಾರಿಗೆ ತರುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ಗುರುವಾರ ಮೊಳಕಾಲ್ಮುರುವಿನಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು

ಎಲ್ಐಸಿಯಲ್ಲಿ ವಿಮೆ ಮಾಡಿಸಿದರೆ ಗ್ಯಾರಂಟಿ ರೂಪದಲ್ಲಿ ಬಾಂಡ್ ನೀಡುತ್ತಾರೆ. ಆದೇ ಮಾದರಿಯಲ್ಲಿ ಬೆಳೆ ವಿಮೆಗೂ ಬಾಂಡ್ ವಿತರಣೆ ಪದ್ಧತಿ ಜಾರಿಗೆ ತರುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘದ ನೇತೃತ್ವದಲ್ಲಿ ಗುರುವಾರ ಮೊಳಕಾಲ್ಮುರುವಿನಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.

ನಗರದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಿದ ರೈತ ಸಂಘದ ಕಾರ್ಯಕರ್ತರು ನಂತರ ತಹಸಿಲ್ದಾರ್ ಕಚೇರಿ ಬಳಿ ಸಭೆ ಮಾಡಿದರು. ಈ ವೇಳೆ ಮಾತನಾಡಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಬೆಳೆ ವಿಮೆ ಕಂತು ಪಾವತಿ ಹಾಗೂ ವಿಮಾ ಪರಿಹಾರದ ಸಂಗತಿ ಪ್ರತಿ ವರ್ಷ ಸಮಸ್ಯೆಯಾಗಿದೆ. ವಿಮೆಗಾಗಿ ನಿಗಧಿ ಪಡಿಸಿದ ಖಾಸಗಿ ಕಂಪನಿಗಳು ರೈತರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಸಮಸ್ಯೆಗಳು ಉಲ್ಬಣಗೊಳ್ಳುತ್ತಿವೆ. ಹಾಗಾಗಿ ಬೆಳೆ ವಿಮೆ ಪದ್ದತಿಯ ಸರ್ಕಾರಿ ಸ್ವಾಮ್ಯದ ಕಂಪನಿಗಳಿಗೆ ನೀಡಬೇಕೆಂದು ಆಗ್ರಹಿಸಿದರು.

ಬೆಳೆ ನಷ್ಟಕ್ಕೆ ವಿಮಾ ಪರಿಹಾರವನ್ನು ಪಂಚಾಯಿತಿ ವ್ಯಾಪ್ತಿಯಲ್ಲಿ ಆಗಿರುವ ನಷ್ಟದ ಪ್ರಮಾಣವ ಪರಿಗಣಿಸಿ ವಿತರಿಸಲಾಗುತ್ತಿದೆ. ಇದು ಅವೈಜ್ಞಾನಿಕ ಕ್ರಮವಾಗಿದೆ. ಇತ್ತೀಚೆಗಿನ ವರ್ಷಗಳಲ್ಲಿ ಸುರಿಯುತ್ತಿರುವ ಮಳೆ ಸೋಜಿಗವೆನಿಸುತ್ತಿದೆ. ಈ ಬದುವಿನಲ್ಲಿ ಬಂದರೆ ಪಕ್ಕದ ಬದುವಿನಲ್ಲಿ ಮಾಯವಾಗಿರುತ್ತದೆ. ವಾಸ್ತವಾಂಶ ಹೀಗಿರುವಾಗ ಪಂಚಾಯಿತಿ ವ್ಯಾಪ್ತಿಯನ್ನು ಬೆಳೆ ವಿಮೆಗೆ ಪರಿಗಣಿಸುವುದು ಎಷ್ಟರಮಟ್ಟಿಗೆ ಸೂಕ್ತ. ಬೆಳೆ ನಷ್ಟದ ವಿಮೆ ನೀಡುವಾಗಿ ಸರ್ವೆ ನಂಬರ್‌ವಾರು ಪರಿಗಣಿಸಬೇಕೆಂದು ಒತ್ತಾಯಿಸಿದರು.

ವಿಮಾ ಪರಿಹಾರ ನೀಡುವಾಗಲೂ ಏಳು ವರ್ಷದ ಸರಾಸರಿ ಪರಿಗಣಿಸಲಾಗುತ್ತಿರುವುದು ಅವೈಜ್ಞಾನಿಕ. ಪ್ರತಿ ವರ್ಷದ ಬೆಳೆ ನಷ್ಟ ಪರಿಗಣಿಸಿ ವಿಮೆ ನೀಡಬೇಕು. ಯಾವ ವರ್ಷ ಬೆಳೆ ನಷ್ಟವಾಗಿದೆಯೋ ಅದೇ ವರ್ಷ ವಿಮೆ ನೀಡಲು ಮುಂದಾಗಬೇಕು. ಬೆಳೆ ನಷ್ಟ ನಿಗದಿ ಮಾಡುವಾಗ ಆಯಾ ತಾಲೂಕಿನ ಬಿತ್ತನೆ ಅವಧಿ ಗಮನಿಸಬೇಕು. ಬಿತ್ತನೆ ಮಾಡುವ ಹಾಗೂ ಕಟಾವು ಮಾಡುವ ಸರಿಯಾದ ದಿನಾಂಕಗಳು ನಮೂದಾಗಬೇಕು. ಆದರೆ ವಿಮಾ ಕಂಪನಿಗಳು ಇಂತಹ ತಿಂಗಳಲ್ಲಿಯೇ ಬಿತ್ತನೆ ಮಾಡಿ, ಕಟಾವು ಮಾಡಬೇಕೆಂಬ ನಿಬಂಧನೆ ವಿಧಿಸುವುದು ಸರಿಯಲ್ಲ. ಆಯಾ ಕಾಲಕ್ಕೆ ತಕ್ಕಂತೆ ಬೆಳೆ ಸಮೀಕ್ಷೆ ನಡೆಸಿ ನಷ್ಟದ ಪ್ರಮಾಣ ಗುರುತಿಸಿ ಪರಿಹಾರ ನೀಡಬೇಕೆಂದು ಬಸವರೆಡ್ಡಿ ಒತ್ತಾಯಿಸಿದರು.

ಪ್ರಕೃತಿಯಿಂದ ಹಾನಿಯಾಗುವ ವಸ್ತುಗಳಿಗೆ ಸರ್ಕಾರ ಪರಿಹಾರ ನೀಡುತ್ತದೆ. ಅದೇ ರೀತಿ ಕೃಷಿ ಉತ್ಪನ್ನಗಳು ಬೆಂಕಿಗೆ ಆಹುತಿಯಾದಲ್ಲಿ, ಇತರ ಅವಘಡ ಸಂಭವಿಸಿದಾಗಲೂ ಬೆಳೆ ನಷ್ಟಪರಿಹಾರ ನೀಡಲು ನಿಯಮಾವಳಿ ರೂಪಿಸಬೇಕು. ಈ ಬಾರಿ ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮಾ ಕಂತು ಪಾವತಿಸುವಾಗ ಈ ನಿಬಂಧನೆಗಳ ಅಳವಡಿಸಬೇಕೆಂದರು.

ಮಳೆ ಬಾರದ ತೀವ್ರ ಬರ ಪರಿಸ್ಥಿತಿ ಎದುರಿಸಿದ ರೈತರಿಗೆ ನೀಡಲಾದ ಇನ್‌ಪುಟ್ ಸಬ್ಸಿಡಿ ಕೂಡ ಸರಿಯಾಗಿ ವಿತರಣೆಯಾಗಿಲ್ಲ. ಕೆಲ ಲೋಪದೋಷಗಳಾಗಿದ್ದು, ಅವುಗಳನ್ನು ಸರಿಪಡಿಸಿ ರೈತರಿಗೆ ನೆರವಿಗೆ ಧಾವಿಸಬೇಕೆಂದು ತಹಸೀಲ್ದಾರರಿಗೆ ಸಲ್ಲಿಸಲಾದ ಮನವಿಯಲ್ಲಿ ಆಗ್ರಹಿಸಲಾಗಿದೆ. ರೈತ ಸಂಘದ ಮುಖಂಡರಾದ ಕೆ.ಚಂದ್ರಣ್ಣ, ಎಸ್.ಮಂಜುನಾಥ್, ಮೇಸ್ತ್ರಿ ಪಾಪಯ್ಯ, ಕನಕ ಶಿವಮೂರ್ತಿ, ನಾಗರಾಜ್, ರಾಯಾಪುರ ಬಸವರಾಜ್, ಕೋನಸಾಗರ ಮಂಜಣ್ಣ, ಕೋಟೆ ಬಡಾವಣೆ ವೀರಣ್ಣ, ಟಿ.ಸಣ್ಣಪ್ಪ, ಡಿ.ಬಿ.ಕೃಷ್ಣಮೂರ್ತಿ, ಗೌತಮ್, ಈರಬೊಮ್ಮಣ್ಣ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.