ಇ-ಆಸ್ತಿ ಸಂಬಂಧ ನಾಗರಿಕರಿಗೆ ಕರಡು ಪ್ರತಿ ನೀಡಿ

| Published : Mar 05 2025, 12:30 AM IST

ಸಾರಾಂಶ

ಶಿವಮೊಗ್ಗ: ನಗರದಲ್ಲಿ ಇ- ಆಸ್ತಿಗೆ ಸಂಬಂಧಿಸಿದಂತೆ ಈಗಾಗಲೇ ಸಾಕಷ್ಟು ಗೊಂದಲ ಉಂಟಾಗಿದ್ದು, ನಾಗರಿಕರು ರಜೆ ದಿನವೂ ಪಾಲಿಕೆಗೆ ಅಲೆದಾಡುವಂತಾಗಿದೆ. ಜೊತೆಗೆ ಬ್ರೋಕರ್ ಹಾಗೂ ಕೆಲ ಅಧಿಕಾರಿಗಳ ಶೋಷಣೆ ಒಳಗಾಗಿದ್ದಾರೆ. ಇದನ್ನು ತಪ್ಪಿಸಲು ನಾಗರಿಕರಿಗೆ ಮೊದಲೇ ಇ-ಆಸ್ತಿಯ ಕರಡು ಪ್ರತಿಯನ್ನು ನೀಡುಬೇಕೆಂದು ಒತ್ತಾಯಿಸಿ ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಯ ಒಕ್ಕೂಟದಿಂದ ಮಹಾನಗರ ಪಾಲಿಕೆ ಎದುರು ಪ್ರತಿಭಟನೆ ನಡೆಸಿ, ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.

ಶಿವಮೊಗ್ಗ: ನಗರದಲ್ಲಿ ಇ- ಆಸ್ತಿಗೆ ಸಂಬಂಧಿಸಿದಂತೆ ಈಗಾಗಲೇ ಸಾಕಷ್ಟು ಗೊಂದಲ ಉಂಟಾಗಿದ್ದು, ನಾಗರಿಕರು ರಜೆ ದಿನವೂ ಪಾಲಿಕೆಗೆ ಅಲೆದಾಡುವಂತಾಗಿದೆ. ಜೊತೆಗೆ ಬ್ರೋಕರ್ ಹಾಗೂ ಕೆಲ ಅಧಿಕಾರಿಗಳ ಶೋಷಣೆ ಒಳಗಾಗಿದ್ದಾರೆ. ಇದನ್ನು ತಪ್ಪಿಸಲು ನಾಗರಿಕರಿಗೆ ಮೊದಲೇ ಇ-ಆಸ್ತಿಯ ಕರಡು ಪ್ರತಿಯನ್ನು ನೀಡುಬೇಕೆಂದು ಒತ್ತಾಯಿಸಿ ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಯ ಒಕ್ಕೂಟದಿಂದ ಮಹಾನಗರ ಪಾಲಿಕೆ ಎದುರು ಪ್ರತಿಭಟನೆ ನಡೆಸಿ, ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಕೆಎಂಡಿಎಸ್‌ ಸಾಫ್ಟ್‌ವೇರ್‌ನಲ್ಲಿ ನೀಡಬೇಕಾದ ಕರಡು ಇ-ಆಸ್ತಿ ಪ್ರತಿ ಕಳೆದ ಫೆಬ್ರವರಿ 25ರಿಂದ ಲಭ್ಯವಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಈವರೆಗೆ ಇ-ಆಸ್ತಿಯ ಒಂದೇ ಒಂದು ಕರಡು ಪ್ರತಿಯನ್ನು ನೀಡಿಲ್ಲ. ವಾಸ್ತವಾಗಿ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ನಗರದ ಮಹಾನಗರ ಪಾಲಿಕೆ ಮೂರು ವರ್ಷಗಳ ಹಿಂದೆ ಕರಡು ಪ್ರತಿಯನ್ನು ನೀಡಬೇಕಾಗುತ್ತದೆ. ಪಾಲಿಕೆಯ ಕಂದಾಯ ಅಧಿಕಾರಗಳ ಈ ವೈಫಲ್ಯವು ತೆರಿಗೆ ಪಾವತಿದಾರ ದಿನನಿತ್ಯದ ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ಆರೋಪಿಸಿದರು.

ಹೀಗಾಗಿ ಇ- ಆಸ್ತಿಗೆ ಸಂಬಂಧಿಸಿದಂತೆ ಇ-ಆಸ್ತಿ ನಾಗರಿಕರ ಕರಡು ಪ್ರತಿಗಳನ್ನು (ಸಿಟಿಜನ್ ಕಾಪಿ) ನಮೂನೆ 2-3 ನೀಡುವ ಪ್ರಕ್ರಿಯೆಯನ್ನು ತಕ್ಷಣ ಪ್ರಾರಂಭಿಸಬೇಕು. ನಂತರ ಸರ್ಕಾರ ನಿರ್ದಿಷ್ಟಪಡಿಸಿರುವ 6 ದಾಖಲೆಗಳನ್ನು ಖಾತೆದಾರರಿಂದ ಪಡೆಯಬೇಕು. ನಂತರ ಇ-ಆಸ್ತಿಗೆ ಪೂರಕವಾದ ನಮೂನೆ 2/3 ಅನ್ನು ಪಾಲಿಕೆ 100 ರು. ಶುಲ್ಕ ಪಡೆದು ಖಾತೆದಾರರಿಗೆ ನೀಡಬೇಕು. ಕೆ.ಎಂ.ಡಿ.ಎಸ್. ಸಾಫ್ಟ್‌ವೇರ್‌ನಲ್ಲಿ ಇ-ಆಸ್ತಿಗೆ ಪೂರಕವಾದ ನಮೂನೆ 2/3ರ ಕರಡು ಪ್ರತಿಯನ್ನು ಪಾಲಿಕೆಯಲ್ಲಿ ಹಾಲಿ ಇರುವ 1.7 ಲಕ್ಷ ಖಾತೆದಾರರಿಗೆ ಪಾಲಿಕೆ ಮೊದಲು ನೀಡಬೇಕು ಎಂದು ಆಗ್ರಹಿಸಿದರು.

ಪಾಲಿಕೆ ಆಯುಕ್ತರ ವಿರುದ್ಧ ಘೊಷಣೆ:

ಮನವಿ ನೀಡುವ ಸಂದರ್ಭದಲ್ಲಿ ಪಾಲಿಕೆ ಆಯುಕ್ತರು ಮತ್ತು ವೇದಿಕೆ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಬಗ್ಗೆಯೇ ಸಭೆ ಕರೆದಿದ್ದಾರೆ. ಸರ್ಕಾರಕ್ಕೆ ನಾನು ನಿಮ್ಮ ಮನವಿಯನ್ನು ತಿಳಿಸಿದ್ದೇನೆ ಎಂದು ಆಯುಕ್ತೆ ಕವಿತಾ ಯೋಗಪ್ಪನವರು ತಿಳಿಸಿ ಅಲ್ಲಿಂದ ತೆರೆಳಿದರು. ಇದರಿಂದ ಆಕ್ರೋಶಗೊಂಡ ವೇದಿಕೆ ಸದಸ್ಯರು ನಮ್ಮ ಮನವಿಗೆ ಸ್ಪಂದಿಸದ ಆಯುಕ್ತರು ನಮಗೆ ಬೇಡ ಎಂದು ಘೋಷಣೆ ಕೂಗಿದರು. ಪ್ರತಿಭಟನೆಯಲ್ಲಿ ವೇದಿಕೆ ಸಂಚಾಲಕ ಕೆ.ವಿ.ವಸಂತಕುಮಾರ್, ಪ್ರಮುಖರಾದ ಡಾ.ಸತೀಶ್ ಕುಮಾರ್ ಶೆಟ್ಟಿ, ಜನಾರ್ದನ ಪೈ.ಶಿವಕುಮಾರ್ ಕಸೆಟ್ಟಿ, ನಾರಾಯಣ ಮೂರ್ತಿ, ವಾಣಿಜ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಗೋಪಿನಾಥ್, ವಿಜಯಕುಮಾರ್, ಸುರೇಶ್, ಮೊದಲಾದವರಿದ್ದರು.

ಆಯುಕ್ತರ ವಿರುದ್ಧ ದೂರು

ಪಾಲಿಕೆಯಲ್ಲಿ ನಾಗರಿಕರ ಹಿತರಕ್ಷಣಾ ವೇದಿಕೆಯ ಮನವಿಯನ್ನು ಆಯುಕ್ತರು ಸ್ವೀಕರಿಸದೇ ಉದ್ಧಟತನವನ್ನು ಪ್ರದರ್ಶಿಸಿದ್ದಾರೆ ಎಂದು ಆರೋಪಿಸಿ ವೇದಿಕೆ ಸದಸ್ಯರು ಡಿಸಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗೆ ಆಯುಕ್ತರ ವಿರುದ್ಧ ದೂರು ಸಲ್ಲಿಸಿದರು.ನಾಗರಿಕರಿಗೆ ಇ-ಸ್ವತ್ತು ನೀಡುವಲ್ಲಿ ಶೀಘ್ರಗತಿಯಲ್ಲಿ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದರು.