ಕನ್ನಡಪ್ರಭ ವಾರ್ತೆ ಮಂಡ್ಯ
ರೋಗಿಗಳ ಆರೋಗ್ಯದ ತುರ್ತು ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ವೈದ್ಯಕೀಯ ವರದಿಗಳನ್ನು ವಿಳಂಬವಿಲ್ಲದೆ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.ಗುರುವಾರ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿ, ಮಿಮ್ಸ್ ಆಸ್ಪತ್ರೆಯ ವೈದ್ಯರು-ಸಿಬ್ಬಂದಿ ಸರಿಯಾದ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗಬೇಕು. ಒಪಿಡಿ ಸೇವೆ ಬೆಳಗಿನ ಅವಧಿಯಲ್ಲಿ ರೋಗಿಗಳಿಗೆ ವಿಳಂಬವಿಲ್ಲದೆ ತಪಾಸಣೆ ಆರಂಭಿಸಬೇಕು ಎಂದರು.
ವೈದ್ಯರು ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಕರ್ತವ್ಯದ ಸಮಯದಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳಲು ಮಿಮ್ಸ್ ನಿರ್ದೇಶಕರು ಮತ್ತು ಆಡಳಿತಾಧಿಕಾರಿ ನಿಯಮಿತವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಈ ಸಂಬಂಧ ಆಸ್ಪತ್ರೆಗೆ ಬರುವ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ತೊಂದರೆಯಾಗದಂತೆ ಕ್ರಮ ವಹಿಸಬೇಕು ಎಂದು ಸೂಚಿಸಿದರು.ರೋಗಿಗಳ ಸಂಬಂಧಿಕರಿಗೆ ಕೈಗೆಟುಕುವ ದರದಲ್ಲಿ ವಸತಿ ಒದಗಿಸುವ ಆರೋಗ್ಯ ಧಾಮ ಸೌಲಭ್ಯಗಳ ಪರಿಣಾಮಕಾರಿ ನಿರ್ವಹಣೆ ಮತ್ತು ಪಾರದರ್ಶಕತೆ ಕಾಪಾಡಿಕೊಳ್ಳಬೇಕು ಎಂದರು.
ಬಡ ಮತ್ತು ಮಧ್ಯಮ ವರ್ಗದ ರೋಗಿಗಳಿಗೆ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೂಲಕ ಉಚಿತ ಹಾಗೂ ಗುಣಮಟ್ಟದ ಚಿಕಿತ್ಸೆ ಲಭ್ಯವಿರುತ್ತದೆ. ಈ ಯೋಜನೆಯಡಿ ಸೌಲಭ್ಯ ನೀಡುವಂತೆ ಅಗತ್ಯ ಕ್ರಮ ವಹಿಸಬೇಕು. ಮಿಮ್ಸ್‌ನಲ್ಲಿ ಆಡಳಿತಾತ್ಮಕ ಸುಧಾರಣೆ, ಮೂಲಸೌಕರ್ಯ ಅಭಿವೃದ್ಧಿ, ಮತ್ತು ರೋಗಿಗಳಿಗೆ ದೊರೆಯುವ ಚಿಕಿತ್ಸೆಯ ಗುಣಮಟ್ಟ ಚೆನ್ನಾಗಿರಬೇಕು ಎಂದರು.
ಮಿಮ್ಸ್ ಆವರಣದಲ್ಲಿ ನಡೆಯುತ್ತಿರುವ ಬಾಕಿ ಉಳಿದಿರುವ ಸಿವಿಲ್ ಕಾಮಗಾರಿಗಳನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸಲು ಮತ್ತು ರೋಗಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಮೂಲಸೌಕರ್ಯ ಬಲಪಡಿಸಲು ಅಧಿಕಾರಿಗಳಿಗೆ ಸೂಚಿಸಿದರಲ್ಲದೇ, ಮಿಮ್ಸ್‌ನಲ್ಲಿ ಪ್ರಸ್ತಾವಿತ ಕ್ಯಾನ್ಸರ್ ಕೇರ್ ಸೆಂಟರ್‌ನ್ನು ಶೀಘ್ರ ಆರಂಭಿಸಲು ಅಗತ್ಯ ಕ್ರಮವಹಿಸುವಂತೆ ತಿಳಿಸಿದರು.
ಆಸ್ಪತ್ರೆಯ ತಾಂತ್ರಿಕ ಉನ್ನತೀಕರಣದ ಭಾಗವಾಗಿ ವಿದ್ಯುತ್ ಲೋಡ್ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ ಎಂದು ಸಭೆಯಲ್ಲಿ ತಿಳಿದ ಅವರು, ಆಸ್ಪತ್ರೆಯಲ್ಲಿ ಔಷಧಗಳು, ತುರ್ತು ಚಿಕಿತ್ಸಾ ಉಪಕರಣಗಳು ಹಾಗೂ ರೋಗ ಪತ್ತೆ ಪರೀಕ್ಷೆಗಳು (ಲ್ಯಾಬ್ ಟೆಸ್ಟ್) ರೋಗಿಗಳಿಗೆ ಸಿಗುವಂತಾಗಬೇಕು ಎಂದರು.ಮಿಮ್ಸ್ ನಿರ್ದೇಶಕ ಡಾ.ಪಿ.ನರಸಿಂಹಸ್ವಾಮಿ, ಮಿಮ್ಸ್ ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿ ಕೃಷ್ಣಕುಮಾರ್, ನಿರ್ಮಿತಿ ಕೇಂದ್ರದ ಯೋಜನಾಧಿಕಾರಿ ಜಯಪ್ರಕಾಶ್ ಹಾಗೂ ಮಿಮ್ಸ್ ಅಧಿಕಾರಿಗಳು ಉಪಸ್ಥಿತರಿದ್ದರು.ಇಂದು ಉಚಿತ ದೂರದರ್ಶಕ ನಿರ್ಮಾಣ ತರಬೇತಿ ಶಿಬಿರ: ಎಂ.ಜಿ.ದಿವ್ಯಶ್ರೀ
ಕನ್ನಡಪ್ರಭ ವಾರ್ತೆ ಮಂಡ್ಯಪಾಂಡವಪುರ ಟಿಎಪಿಎಸಿಎಂಎಸ್ ಸಭಾಂಗಣದಲ್ಲಿ ಜೂ.19ರಂದು ದಿನದ ಉಚಿತ ದೂರದರ್ಶಕ ನಿರ್ಮಾಣ ತರಬೇತಿ ಶಿಬಿರ ಆಯೋಜಿಸಲಾಗಿದೆ ಎಂದು ಅಧ್ಯಾಪನ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್‌ನ ವ್ಯವಸ್ಥಾಪಕ ನಿರ್ದೇಶಕಿ ಎಂ.ಜಿ.ದಿವ್ಯಶ್ರೀ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುಟ್ಟಣ್ಣಯ್ಯ ಫೌಂಡೇಶನ್, ಅಧ್ಯಾಪನ ಪಬ್ಲಿಕ್ ಚಾರಿಟೇಬಲ್ ಟ್ರಸ್ ಹಾಗೂ ಆರ್ಯಭಟ ಪ್ಲಾನೆಟೋರಿಯಂ ಸಂಯುಕ್ತಾಶ್ರಯದಲ್ಲಿ ನಡೆಯುವ ತರಬೇತಿ ಶಿಬಿರದಲ್ಲಿ ಇಸ್ರೋದ ಚಟುವಟಿಕೆಗಳಗಳಲ್ಲಿ ಒಂದಾದ ದೂರದರ್ಶಕ ನಿರ್ಮಾಣ ಕಾರ್ಯವನ್ನು ಮಕ್ಕಳಿಗೆ ಚಟುವಟಿಕೆ ರೂಪದಲ್ಲಿ ಅಧ್ಯಯನ ಮಾಡುವಂತೆ ರೂಪಿಸಲಾಗಿದೆ ಎಂದರು.ಪಾಂಡವಪುರ ತಾಲೂಕಿನ ಶಾಲೆಗಳಿಂದ ತಲಾ 10 ಮಂದಿಯಂತೆ 100 ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ತಾವೇ ದೂರದರ್ಶಕ ನಿರ್ಮಿಸುವ ವಿಧಾನವನ್ನು ಕಲಿಯುವುದು ಮತ್ತು ಅದರ ಬಳಕೆ ಅರ್ಥೈಸಿಕೊಳ್ಳುವುದು ಸಹಾಯಕವಾಗಲಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಅಂತರಿಕ್ಷ ವಿಜ್ಞಾನ ಬಗ್ಗೆ ಆಸಕ್ತಿ ಹೆಚ್ಚಾಗಿ ಮತ್ತವರ ವೈಜ್ಞಾನಿಕ ಚಿಂತನೆಗೆ ಉತ್ತೇಜನ ನೀಡುವುದು ಮುಖ್ಯ ಗುರಿಯಾಗಿದೆ ಎಂದರು.
ಶಿಬಿರದಲ್ಲಿ ತಜ್ಞರು ಮಾರ್ಗದರ್ಶನ ನೀಡಿ, ದೂರದರ್ಶಕ ಭಾಗಗಳು, ಅದರ ಕಾರ್ಯವಿಧಾನ ಮತ್ತು ಆಕಾಶ ವೀಕ್ಷಣೆಯ ಪ್ರಾಯೋಗಿಕ ಅನುಭವ ವಿದ್ಯಾರ್ಥಿಗಳಿಗೆ ನೀಡಲಿದ್ದಾರೆ. ವಿದ್ಯಾರ್ಥಿಗಳಿಗೆ ಅಂತರಿಕ್ಷದ ಬಗ್ಗೆ ತಿಳಿವಳಿಕೆ ಹಾಗೂ ಹೊಸ ಅನ್ವೇಷಣೆಯ ಚೈತನ್ಯ ಬೆಳೆಯಲಿದೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್‌ನ ಕಾರ್ಯದರ್ಶಿ ಜಿ.ಟಿ.ಪ್ರವೀಣ್‌ಕುಮಾರ್, ಪುಟ್ಟಣ್ಣಯ್ಯ ಫೌಂಡೇಶನ್‌ನ ಪ್ರತಿನಿಧಿ ಪ್ರೀತಿ ಮಹದೇವ್ ಇದ್ದರು.