ದೇವಾಜಮ್ಮಣ್ಣಿ ನೆನಪಿನ ವಿಶೇಷ ಅಂಚೆ ಕಾರ್ಡ್ ಬಿಡುಗಡೆ

| Published : May 21 2024, 12:35 AM IST

ದೇವಾಜಮ್ಮಣ್ಣಿ ನೆನಪಿನ ವಿಶೇಷ ಅಂಚೆ ಕಾರ್ಡ್ ಬಿಡುಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದಲ್ಲಿ ಮಹಾರಾಜರ ರೀತಿಯಲ್ಲಿಯೇ ಮಹಾರಾಣಿಯರು ಕೂಡಾ ಉತ್ತಮ ಕೆಲಸ ಮಾಡಿದ್ದಾರೆ. ಹೀಗಾಗಿ ಅವರ ಇತಿಹಾಸ ತಿಳಿಸುವ ಕೆಲಸ ಆಗಬೇಕು

ಕನ್ನಡಪ್ರಭ ವಾರ್ತೆ ಮೈಸೂರು

ಅಂಚೆ ಇಲಾಖೆ ನಗರದ ಅನ್ವೇಷಣಾ ಸೇವಾ ಟ್ರಸ್ಟ್ ಸಹಯೋಗದಲ್ಲಿ ಮಹಾರಾಣಿ ದೇವಾಜಮ್ಮಣ್ಣಿ ಅವರ ನೆನಪಿನಲ್ಲಿ ಹೊರ ತಂದಿರುವ ವಿಶೇಷ ಅಂಚೆ ಕಾರ್ಡನ್ನು ಸೋಮವಾರ ಬಿಡುಗಡೆಗೊಳಿಸಲಾಯಿತು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕುವೆಂಪು ಭಾಷಾ ಭಾರತಿ ಸಂಸ್ಥೆಯ ಮಾಜಿ ಅಧ್ಯಕ್ಷ ಡಾ. ಪ್ರಧಾನ ಗುರುದತ್ ಕಾರ್ಯಕ್ರಮ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ದೇಶದಲ್ಲಿ ಮಹಾರಾಜರ ರೀತಿಯಲ್ಲಿಯೇ ಮಹಾರಾಣಿಯರು ಕೂಡಾ ಉತ್ತಮ ಕೆಲಸ ಮಾಡಿದ್ದಾರೆ. ಹೀಗಾಗಿ ಅವರ ಇತಿಹಾಸ ತಿಳಿಸುವ ಕೆಲಸ ಆಗಬೇಕು ಎಂದರು.

ಮೈಸೂರು ಅಂಚೆ ವಿಭಾಗದ ಹಿರಿಯ ಅಧೀಕ್ಷಕಿ ಡಾ. ಏಂಜೆಲ್ ರಾಜ್ ಮಾತನಾಡಿ, ಮೈಸೂರು ಮಹಾರಾಜರ ಇತಿಹಾಸ ಕುರಿತು ಓದುವಾಗ ದೇವಾಜಮ್ಮಣ್ಣಿ ಅವರ ಬಗ್ಗೆ ತಿಳಿಯಿತು. ಈ ಭಾಗದಲ್ಲಿ ಸಿಡುಬು ಕಾಣಿಸಿಕೊಂಡಾಗ ಜನತೆ ಲಸಿಕೆ ಹಾಕಿಕೊಳ್ಳಲು ಹೆದರಿದ್ದ ವೇಳೆ ದೇವಾಜಮ್ಮಣ್ಣಿ ಅವರೇ ಮೊದಲ ಲಸಿಕೆ ಹಾಕಿಸಿಕೊಂಡು ಜನರಲ್ಲಿ ಧೈರ್ಯ ತುಂಬಿದುದು ತಿಳಿಯಿತು. ಹೀಗಾಗಿ ಇವರ ಬಗ್ಗೆ ಜನತೆಗೂ ಮಾಹಿತಿ ದೊರೆಯಲಿ ಎಂಬ ಕಾರಣದಿಂದ ಇವರ ನೆನಪಿನಲ್ಲಿ ಈ ವಿಶೇಷ ಅಂಚೆ ಕಾರ್ಡ್ ನ್ನು ಇಲಾಖೆ ಹೊರ ತಂದಿದೆ ಎಂದರು.

ಟ್ರಸ್ಟ್ ಅಧ್ಯಕ್ಷ ಡಾ.ಎಂ.ಜಿ.ಆರ್. ಅರಸ್ ಮಾತನಾಡಿ, ಮೈಸೂರು ಅರಮನೆಯ ಮಹಾರಾಣಿಯರು ಮಾಡಿರುವ ಸಾಧನೆ ಕುರಿತಂತೆ ಸುಮಾರು 600 ಪುಟಗಳ ಬೃಹತ್ ಗ್ರಂಥ ಸದ್ಯದಲ್ಲೇ ಹೊರ ಬರಲಿದೆ ಎಂದರು.

ಟ್ರಸ್ಟ್ ಉಪಾಧ್ಯಕ್ಷ ಎಚ್ಎಂಟಿ ಲಿಂಗರಾಜೇ ಅರಸ್, ಅಮರ್ನಾಥ್ರಾಜೇ ಅರಸ್, ಅಂಚೆ ಇಲಾಖೆ ಮಾರುಕಟ್ಟೆ ಅಧಿಕಾರಿ ಡಾ. ಸುರೇಶ್ ಕುಮಾರ್ ಮೊದಲಾದವರು ಇದ್ದರು.