ಸಾರಾಂಶ
* ಅಧಿಕಾರಿಗಳ ಸಭೆಯಲ್ಲಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ಭರವಸೆ । ಜಮೀನು ರಹಿತ ರೈತರು ಬಗರ್ ಹುಕುಂನಡಿ ಅರ್ಜಿ ಸಲ್ಲಿಸಲು ಅವಕಾಶ
ಕನ್ನಡಪ್ರಭ ವಾರ್ತೆ ದಾವಣಗೆರೆರಾಜ್ಯದ ಭೂ ರಹಿತ ಬಡವರಿಗೆ ಮುಂದಿನ ವರ್ಷದೊಳಗಾಗಿ ಹಕ್ಕುಪತ್ರ ನೀಡಲು 10 ದಿನದೊಳಗೆ ಬಗರ್ ಹುಕುಂ ಸಮಿತಿ ರಚಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಭರವಸೆ ನೀಡಿದ್ದಾರೆ.
ನಗರದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಪಂ, ಕಂದಾಯ, ಭೂ ಮಾಪನ ಇಲಾಖೆ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಜಿಲ್ಲೆಯಲ್ಲಿ ನಮೂನೆ 57ರಲ್ಲಿ 37005, ಫಾರಂ 50ರಡಿ 33256, ಫಾರಂ 53ರಡಿ 36324 ಅರ್ಜಿ ಸ್ವೀಕೃತವಾಗಿವೆ. ಬಗರ್ ಹುಕುಂನಡಿ 380 ಅರ್ಜಿ ಮಾತ್ರ ವಿಲೇವಾರಿಯಾಗಿದೆ. ರಾಜ್ಯದಲ್ಲಿ ಇಂತಹ ಸುಮಾರು 10 ಲಕ್ಷ ಅರ್ಜಿ ಇವೆ. ಬಗರ್ ಹುಕುಂ ಅರ್ಜಿ ಸಲ್ಲಿಸಲು 5 ಎಕರೆಗಿಂತ ಕಡಿಮೆ, ಬಡವರಾಗಿದ್ದು, ಜಮೀನು ರಹಿತ ರೈತರು ಬಗರ್ ಹುಕುಂನಡಿ ಅರ್ಜಿ ಸಲ್ಲಿಸಲು ಅವಕಾಶ ಇದೆ ಎಂದು ತಿಳಿಸಿದರು.ರಾಜ್ಯದಲ್ಲಿ 2004ರ ಹಿಂದೆ ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಮಾಡುತ್ತಿದ್ದಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು. ಅಂದಿಗೆ 18 ವರ್ಷ ವಯಸ್ಸಾಗಿರಬೇಕು. ಜಂಟಿ ಕುಟುಂಬದ ಎಲ್ಲಾ ಆಸ್ತಿ ಸೇರಿ, 5 ಎಕರೆಗಿಂತ ಕಡಿಮೆ ಇರಬೇಕು. ಈ ಅರ್ಜಿಗಳನ್ನು ತ್ವರಿತ ಇತ್ಯರ್ಥಕ್ಕೆ ಒಂದು ವಾರದಲ್ಲಿ ಬಗರ್ ಹುಕುಂ ಆ್ಯಪ್ ಅಧಿಕಾರಿಗಳ ಕೈ ಸೇರಲಿದೆ. ಎಲ್ಲಾ ಆನ್ ಲೈನ್ ಪರಿಶೀಲನೆಗೆ ಅವಕಾಶ ಕಲ್ಪಿಸಲಾಗುವುದು. ಬಗರ್ ಹುಕುಂ ಅರ್ಜಿ ಹಾಕಿ, ಹಿಂದೆ ಜಮೀನು ಮಂಜೂರಿ ಮಾಡಿದ್ದರೂ ಅನರ್ಹರಾಗಿದ್ದಲ್ಲಿ ಮರು ವಶಕ್ಕೆ ಪಡೆಯಬಹುದು ಎಂದು ಸ್ಪಷ್ಟಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಶಾಸಕರಾದ ಡಿ.ಜಿ.ಶಾಂತನಗೌಡ, ಕೆ.ಎಸ್.ಬಸವಂತಪ್ಪ, ಬಿ.ದೇವೇಂದ್ರಪ್ಪ, ಕಂದಾಯ ಇಲಾಖೆ ಆಯುಕ್ತ ಪಿ. ಸುನೀಲಕುಮಾರ, ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ, ಜಿಪಂ ಸಿಇಓ ಸುರೇಶ ಬಿ.ಇಟ್ನಾಳ್ ಸೇರಿ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು.ಡಿಜಿಟಲ್ ಸಾಗುವಳಿ ಚೀಟಿ ವಿತರಣೆ
ಬಗರ್ ಹುಕುಂನಡಿ ದುರ್ಬಳಕೆ ತಡೆಗೆ ಮಂಜೂರಾತಿಗೆ ಡಿಜಿಟಲ್ ಸಹಿಗೆ ಅವಕಾಶ ಮಾಡಿಕೊಟ್ಟು, ಡಿಜಿಟಲ್ ಸಾಗುವಳಿ ಚೀಟಿ ನೀಡಲಾಗುವುದು. ಹಿಂದೆ ಸಾಗುವಳಿ ಚೀಟಿ ನೀಡಿದ ನೈಜತೆ ಬಗ್ಗೆ ರಾಜ್ಯದಲ್ಲಿ ಲಕ್ಷಾಂತರ ಪ್ರಕರಣ ನ್ಯಾಯಾಲಯದಲ್ಲಿವೆ. ಮುಂದಿನ ದಿನಗಳಲ್ಲಿ ಇಂತಹದ್ದು ಮರುಕಳಿಸದಂತೆ ತಡೆಯಲು ಡಿಜಿಟಲೀಕರಣ ಮಾಡಲಾಗುತ್ತಿದೆ.ಕೃಷ್ಣ ಭೈರೇಗೌಡ, ಕಂದಾಯ ಸಚಿವಸರ್ಕಾರಿ ಜಮೀನು ರಕ್ಷಣೆಗೆ ಆ್ಯಪ್
ಸರ್ಕಾರಿ ಜಮೀನುಗಳ ರಕ್ಷಣೆಗೆ ಆ್ಯಪ್ ಸಿದ್ಧಪಡಿಸುತ್ತಿದ್ದು, ಇನ್ನೊಂದು ವಾರದಲ್ಲಿ ಇದು ಅಸ್ತಿತ್ವಕ್ಕೆ ಬರಲಿದೆ. ಸರ್ಕಾರಿ ಜಮೀನುಗಳಲ್ಲಿ ಆ್ಯಪ್ ಮೂಲಕ ಡಾಟಾ ಬೇಸ್‌ನ್ನು ಸಿದ್ಧಪಡಿಸಿ, ಪ್ರತಿ 3 ತಿಂಗಳಿಗೊಮ್ಮೆ ಸ್ಥಳಕ್ಕೆ ಗ್ರಾಮ ಲೆಕ್ಕಿಗರು ಭೇಟಿ ನೀಡಿ, ಜಾಗ ಒತ್ತುವರಿ ಆಗಿದೆಯೋ ಅಥವಾ ಇಲ್ಲವೋ ಎಂಬುದನ್ನು ಆ್ಯಪ್ ಮೂಲಕ ಆಯಾ ಸ್ಥಳದಿಂದ ದೃಢೀಕರಿಸಿ, ಅಪ್‌ಲೋಡ್ ಮಾಡಬೇಕು. ಸರ್ಕಾರಿ ಜಮೀನು ಒಂದು ವೇಳೆ ಒತ್ತುವರಿಯಾಗಿದ್ದರೆ ಆನ್ ಲೈನ್ ಮೂಲಕವೇ ತಹಸೀಲ್ದಾರರಿಗೆ ವರದಿ ನೀಡಬೇಕು. ಇದರಿಂದ ಸರ್ಕಾರಿ ಭೂ ಕಬಳಿಕೆ ತಪ್ಪಲಿದೆ ಎಂದು ಸಚಿವ ಕೃಷ್ಣ ಭೈರೇಗೌಡ ಹೇಳಿದರು.ದಾವಣಗೆರೆಯಲ್ಲಿ 84 ಹೊಸ ಕಂದಾಯ ಗ್ರಾಮದಾವಣಗೆರೆ: ರಾಜ್ಯ ಸರ್ಕಾರ 2017ರಿಂದಲೇ ರಾಜ್ಯದ ತಾಂಡಾ, ಗೊಲ್ಲರಹಟ್ಟಿ, ಕುರುಬರ ಹಟ್ಟಿ, ಹಾಡಿಯಂತಹ ಜನವಸತಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲು ಕಾನೂನು ಜಾರಿಗೆ ತಂದಿದ್ದು, ಹೊಸ ಕಂದಾಯ ಗ್ರಾಮಗಳ ರಚನೆಯಲ್ಲಿ ಜಿಲ್ಲೆಯ ದಾವಣಗೆರೆ ತಾಲೂಕಿನ 22, ಹರಿಹರದ 2, ಹೊನ್ನಾಳಿಯ 4, ಚನ್ನಗಿರಿಯ 29, ನ್ಯಾಮತಿಯ 4, ಜಗಳೂರಿನ 29 ಗ್ರಾಮ ಒಳಗೊಂಡಂತೆ ಒಟ್ಟು 84 ಗ್ರಾಮ ಗುರುತಿಸಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು. ಗುರುತಿಸಲಾದ ಗ್ರಾಮಗಳ ಪೈಕಿ 48 ಗ್ರಾಮಗಳನ್ನು ಕಂದಾಯ ಗ್ರಾಮಗಳಾಗಿ ಅಂತಿಮವಾಗಿದ್ದು, 3703 ಹಕ್ಕುಪತ್ರ ವಿತರಿಸಿದೆ. ಉಳಿದ ಗ್ರಾಮಗಳ ಸಮೀಕ್ಷೆ ನಡೆಸಿ, ಶೀಘ್ರವೇ ಹಕ್ಕುಪತ್ರ ವಿತರಿಸಬೇಕು. ಸೆಪ್ಟಂಬರ್‌ನಿಂದಲೇ 28 ಗ್ರಾಮಗಳ ಪ್ರಾಥಮಿಕ ಅಧಿಸೂಚನೆಗಾಗಿ ಸರ್ಕಾರಕ್ಕೆ 36 ಗ್ರಾಮಗಳ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರಸ್ತಾವನೆ ಸಲ್ಲಿಸದ 8 ಗ್ರಾಮಗಳ ಪ್ರಕರಣಗಳಲ್ಲಿ 4 ಗ್ರಾಮ ಖಾಸಗಿ ಜಮೀನುಗಳಲ್ಲಿ, ಉಳಿದ 4 ಗ್ರಾಮಗಳು ಅರಣ್ಯ ಜಮೀನಿನಲ್ಲಿ ಸ್ಥಾಪನೆಯಾಗಿವೆ. ಅರಣ್ಯ ಹಕ್ಕು ಸಮಿತಿಯಲ್ಲಿ ಪ್ರಸ್ತಾವನೆ ಸಲ್ಲಿಸಿ, ಮುಂದಿನ ಕ್ರಮ ಕೈಗೊಳ್ಳಬೇಕು. ಜನವರಿ 2024ರ ವೇಳೆಗೆ ಗುರುತಿಸಲ್ಪಟ್ಟ ಎಲ್ಲಾ ಬಾಕಿ ಉಳಿದ ಗ್ರಾಮಗಳನ್ನು ಕಂದಾಯ ಗ್ರಾಮಗಳಾಗಿ ಮಾಡಬೇಕು ಎಂದು ಆದೇಶಿಸಿದರು.