ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಕ್ಷೇತ್ರವನ್ನು ಇನ್ನಷ್ಟು ಅಭಿವೃದ್ಧಿ ಮಾಡುವ ಕನಸು ನನಸಾಗೆ ಉಳಿಯುತ್ತಿದೆ. ಸರ್ಕಾರ ಶಾಸಕರಿಗೆ ನೀಡುವ ಅನುದಾನದ ಜೊತೆಗೆ ನಾನು ಕಾಡಿಬೇಡಿ ವಿವಿಧ ಇಲಾಖೆಗಳಿಂದ ಅಲ್ಪಸ್ವಲ್ಪ ಅನುದಾನ ತಂದು ಅಭಿವೃದ್ಧಿಗೆ ಪ್ರಯತ್ನಿಸುತ್ತಿದ್ದೇನೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಬರುವುದು ನೂರಕ್ಕೆ ನೂರರಷ್ಟು ಸತ್ಯ. ಇದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ಶಾಸಕ ಎಚ್.ಟಿ.ಮಂಜು ಹೇಳಿದರು.

ತಾಲೂಕಿನ ಬಿ.ಬಿ.ಕಾವಲು ಗ್ರಾಮದ ಬಳಿ ಸಣ್ಣ ನೀರಾವರಿ ಇಲಾಖೆ ಅನುದಾನದಡಿ ಕಾಲುವೆ ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ರಚನೆಯಾಗಿ ಮೂರು ವರ್ಷವಾಗುತ್ತಿದೆ. ಆದರೆ, ಈ ಸರ್ಕಾರದಿಂದ ಅಭಿವೃದ್ಧಿ ಕೆಲಸಗಳಿಗೆ ಅನುದಾನ ನಿರೀಕ್ಷೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ಹೊರ ಹಾಕಿದರು.

ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಕ್ಷೇತ್ರವನ್ನು ಇನ್ನಷ್ಟು ಅಭಿವೃದ್ಧಿ ಮಾಡುವ ಕನಸು ನನಸಾಗೆ ಉಳಿಯುತ್ತಿದೆ. ಸರ್ಕಾರ ಶಾಸಕರಿಗೆ ನೀಡುವ ಅನುದಾನದ ಜೊತೆಗೆ ನಾನು ಕಾಡಿಬೇಡಿ ವಿವಿಧ ಇಲಾಖೆಗಳಿಂದ ಅಲ್ಪಸ್ವಲ್ಪ ಅನುದಾನ ತಂದು ಅಭಿವೃದ್ಧಿಗೆ ಪ್ರಯತ್ನಿಸುತ್ತಿದ್ದೇನೆ ಎಂದರು.

ಗುತ್ತಿಗೆದಾರರು ಕೆಲಸ ಮಾಡುವ ವೇಳೆ ಗುಣಮಟ್ಟಕ್ಕೆ ಆದ್ಯತೆ ನೀಡಿ ಕಾಮಗಾರಿಗಳು ಬಹುದಿನಗಳ ಕಾಲ ಬಾಳಿಕೆ ಬರುವಂತೆ ನೋಡಿಕೊಳ್ಳಬೇಕು. ಈ ಕಾಮಗಾರಿಗೆ ಸುಮಾರು 4 ರಿಂದ 5 ಕೋಟಿ ರು. ಅನುದಾನ ಬೇಕಾಗಿದೆ. ಆದರೆ, ಈಗ ಲಭ್ಯವಿರುವ ಒಂದೂವರೆ ಕೋಟಿ ಅನುದಾನದಲ್ಲಿ ಕಾಮಗಾರಿ ಪ್ರಾರಂಭಿಸಲಾಗುತ್ತಿದೆ ಎಂದರು.

ಮುಂದಿನ ದಿನಗಳಲ್ಲಿ ಸಣ್ಣ ನೀರಾವರಿ ಸಚಿವರೊಂದಿಗೆ ಚರ್ಚಿಸಿ ಉಳಿಕೆ ಅನುದಾನ ತಂದು ಕಾಮಗಾರಿಯನ್ನು ಪೂರ್ಣಗೊಳಿಸಿ ಈ ಭಾಗದ ರೈತರಿಗೆ ಅನುಕೂಲವಾಗುವಂತೆ ನೋಡಿಕೊಳ್ಳುತ್ತೇನೆ. ಮತ್ತೊಮ್ಮೆ ನನಗೆ ಅವಕಾಶ ಕಲ್ಪಿಸಿದರೆ ನಾನು ಕ್ಷೇತ್ರದ ಅಭಿವೃದ್ಧಿ ಬಗ್ಗೆ ಏನು ಯೋಜನೆಗಳನ್ನು ರೂಪಿಸಿಕೊಂಡಿದ್ದೇನೆಯೋ ಅದನ್ನು ಪೂರ್ಣಗೊಳಿಸಿ ನಿಮ್ಮ ಋಣ ತೀರಿಸುತ್ತೇನೆ ಎಂದರು.

ಈ ವೇಳೆ ಶೀಳನೆರೆ ಹೋಬಳಿ ಜೆಡಿಎಸ್ ಅಧ್ಯಕ್ಷ ಸ್ವಾಮಿಗೌಡ, ಗ್ರಾಪಂ ಸದಸ್ಯರಾದ ಮೋಹನ್, ಅಂಚೆಮುದ್ದನಹಳ್ಳಿ ಶಿವಲಿಂಗ, ಮುಖಂಡರಾದ ಬಂಡಿಹೊಳೆ ಕಾಯಿ ಮಂಜೇಗೌಡ, ಮದ್ದಿಕ್ಯಾಚಮಾನಹಳ್ಳಿ ಸಂದೇಶ್, ಬಿ.ಬಿ.ಕಾವಲು ನಂಜುಂಡ, ಮಡುವಿನಕೋಡಿ ಕಾಂತರಾಜು, ದಿಲೀಪ್, ಸಣ್ಣ ನೀರಾವರಿ ಇಲಾಖೆಯ ಎಇಇ ನಿರ್ಮಲೇಶ್, ಶಾಸಕರ ಆಪ್ತ ಸಹಾಯಕರಾದ ಧ್ರುವಕುಮಾರ್, ಕುಮಾರಸ್ವಾಮಿ ಸೇರಿದಂತೆ ಹಲವರಿದ್ದರು.