ಕನ್ನಡಪ್ರಭ ವಾರ್ತೆ ಪಾಂಡವಪುರ
ಪ್ರಶಸ್ತಿಗಳ ಅರ್ಥ ಕಳೆದುಕೊಳ್ಳುತ್ತಿರುವ ಇಂದಿನ ದಿನಮಾನಗಳಲ್ಲಿ ಆದಿಚುಂಚನಗಿರಿ ಮಠವು ಚುಂಚಶ್ರೀ ಪ್ರಶಸ್ತಿ ನೀಡಿ ಗೌರವಿಸಿರುವುದು ನನಗೆ ಅತೀವ ಸಂತಸ ತಂದಿದೆ ಎಂದು ನೇಗಿಲಯೋಗಿ ಸಮಾಜಸೇವಾ ಟ್ರಸ್ಟ್ ರಾಜ್ಯಾಧ್ಯಕ್ಷ ಡಿ.ರವಿಕುಮಾರ್ ಹೇಳಿದರು.ಆದಿಚುಂಚನಗಿರಿ ಮಠದಿಂದ ಚುಂಚಶ್ರಿ ಪ್ರಶಸ್ತಿಗೆ ಪುರಸ್ಕೃತರಾದ ಹಿನ್ನೆಲೆಯಲ್ಲಿ ಟ್ರಸ್ಟ್ ವತಿಯಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಶ್ರೀಮಠದ ಪ್ರಶಸ್ತಿ ತನ್ನದೇ ಆದ ಗತ ವೈಭವ ಹೊಂದಿದೆ. ರಾಷ್ಟ್ರ ಮಟ್ಟದ ಪದ್ಮಶ್ರೀ ಮಾದರಿಯಲ್ಲಿ ಆದಿಚುಂಚನಗಿರಿ ಮಠವು ಸೇವಾ ಕಾರ್ಯವನ್ನು ಪರಿಗಣಿಸಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಚುಂಚಶ್ರೀ ಪ್ರಶಸ್ತಿ ನೀಡಿ ಗೌರವಿಸಿರುವುದು ಶ್ಲಾಘನೀಯ ಎಂದರು.
ಇತ್ತೀಚಿನ ದಿನಗಳಲ್ಲಿ ಪ್ರಶಸ್ತಿ ನೀಡುವುದಕ್ಕಾಗಿಯೇ ಹಲವಾರು ಸಂಸ್ಥೆಗಳು ಹುಟ್ಟಿಕೊಂಡಿವೆ. ಜತೆಗೆ ಪ್ರಶಸ್ತಿ ತೆಗೆದುಕೊಳ್ಳುವುದಕ್ಕೂ ಜನರು ಹುಟ್ಟಿಕೊಂಡಿದ್ದಾರೆ. ಚುಂಚಶ್ರೀ ಪ್ರಶಸ್ತಿಯಿಂದ ನನಗೆ ಜವಾಬ್ದಾರಿ ಹೆಚ್ಚಾಗಿದೆ. ಮಠದ ಸೇವಕನಾಗಿ ಮತ್ತಷ್ಟು ಕೆಲಸ ಕಾರ್ಯಗಳನ್ನು ಮಾಡುವ ಮೂಲಕ ಶ್ರೀಮಠದ ಪ್ರಶಸ್ತಿಯ ಬೆಲೆಯನ್ನು ಹೆಚ್ಚಿಸುತ್ತೇನೆ ಎಂದರು.ಟ್ರಸ್ಟ್ ತಾಲೂಕು ಅಧ್ಯಕ್ಷ ಎಚ್.ಆರ್.ಧನ್ಯಕುಮಾರ್ ಮಾತನಾಡಿ, ಡಿ.ರವಿಕುಮಾರ್ ಅವರು ಕನಕನಪುರ, ಬೆಂಗಳೂರು, ಮೈಸೂರು, ರಾಮನಗರ, ಮಂಡ್ಯ ಸೇರಿದಂತೆ ರಾಜ್ಯದೆಲ್ಲೆಡೆ ನೇಗಿಲಯೋಗಿ ಸಮಾಜವನ್ನು ಸಂಘಟಿಸುತ್ತಿರುವುದಲ್ಲದೇ ದೇಶ ವ್ಯಾಪ್ತಿ ಸಮಾಜ ಸಂಘಟನೆಗೆ ಮುಂದಾಗಿದ್ದಾರೆ. ಇವರನ್ನು ಶ್ರೀಮಠ ಗುರುತಿಸಿ ಚುಂಚಶ್ರೀ ಪ್ರಶಸ್ತಿ ನೀಡಿರುವುದು ಮೆಚ್ಚುಗೆಯ ವಿಚಾರ ಎಂದರು.
ಈ ವೇಳೆ ಟ್ರಸ್ಟ್ ನ ಅಧ್ಯಕ್ಷ ಎಚ್.ಆರ್.ಧನ್ಯಕುಮಾರ್, ಪದಾಧಿಕಾರಿಗಳಾದ ಬಿ.ಎಸ್.ಜಯರಾಂ, ಎಂ.ರಾಜೀವ್, ಚಂದ್ರಶೇಖರಯ್ಯ, ಎಚ್.ಕೆ.ಜನಾರ್ಧನ್, ಸಿ.ಎ.ಶಾಂತರಾಮು, ಅನಿತಾ ಲೋಕೇಶ್, ಮಂಜುಳಾ ಶಂಕರ್ ನಾಗ್, ಸುಪ್ರೀಯ, ಮೈಸೂರು ಹಾಗೂ ಬನ್ನೂರು ಶಾಖೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.