ಸಾರಾಂಶ
ಕನ್ನಡಪ್ರಭ ವಾರ್ತೆ ಗುಬ್ಬಿ
41 ವರ್ಷಗಳ ಹಿಂದಿನ ಗುರು ಮತ್ತು ಶಿಷ್ಯರ ಸಂಬಂಧ ಮತ್ತೆ ಕೂಡಿ ಬಂದಿರುವುದು ಅತ್ಯಂತ ಹೆಚ್ಚು ಸಂತೋಷ ತಂದಿದೆ ಎಂದು ನಿವೃತ್ತ ಶಿಕ್ಷಕ ಎಸ್ ಆರ್ ಪಂಚಾಕ್ಷರಯ್ಯ ತಿಳಿಸಿದರು.ತಾಲೂಕಿನ ನಿಟ್ಟೂರು ಹೋಬಳಿ ಎಂ ಎನ್ ಕೋಟೆ ಗ್ರಾಮದಲ್ಲಿ ಶ್ರೀ ಶಾರದಾ ಪ್ರೌಢಶಾಲೆಯಲ್ಲಿ ಭಾನುವಾರ 1984/85 ನೇ ಸಾಲಿನ ಗುರುವಂದನ ಮತ್ತು ಹಳೆ ವಿದ್ಯಾರ್ಥಿಗಳ ಸ್ನೇಹಕೂಟ ಸಮಾರಂಭದಲ್ಲಿ ಮಾತನಾಡಿದ ಅವರು ನಾವು ಶಿಕ್ಷಕರಾಗಿ ಅಂದು ಕಲಿಸಿದಂತಹ ಪಾಠ ಇಂದು ನಿಮ್ಮ ಜೀವನಕ್ಕೆ ಅನುಕೂಲವಾಗಿದ್ದರೆ ಖಂಡಿತವಾಗಿಯೂ ನಾವು ಮಾಡಿದ ಶಿಕ್ಷಣ ಸೇವೆ ಸಾರ್ಥಕವಾಗುತ್ತದೆ. ಪ್ರತಿಯೊಬ್ಬ ಗುರುಗಳು ಆಸೆ ಪಡುವುದು ಎಂದರೆ ನಾವು ಪಾಠ ಕಲಿಸಿದಂತಹ ವಿದ್ಯಾರ್ಥಿಗಳು ನಮ್ಮಗಿಂತ ಹೆಚ್ಚು ಬೆಳೆಯಬೇಕು ಎಂಬುದು. ಇಂದು 40ವರ್ಷದ ನಂತರ ನೀವೆಲ್ಲರೂ ಒಟ್ಟುಗೂಡಿ ನಮ್ಮನ್ನ ಹುಡುಕಿ ಗುರುತಿಸುತ್ತಿರುವುದು ನಿಜವಾಗಿಯೂ ಖುಷಿ ನೀಡಿದೆ ಎಂದು ತಿಳಿದರು.
ನಿವೃತ್ತ ಶಿಕ್ಷಕ ವೀರಾಚಾರ್ ಮಾತನಾಡಿ ನಮ್ಮ ಕಾಲದಲ್ಲಿ ಇದ್ದಂತಹ ಪಾಠ ಪ್ರವಚನಗಳಿಗೂ ಅಂದಿನ ವಿದ್ಯಾರ್ಥಿಗಳಿಗೂ ಇಂದಿನ ವಿದ್ಯಾರ್ಥಿಗಳಿಗೂ ಇಂದಿನ ವಿಚಾರ ಧಾರೆಗಳಿಗೆ ಸಾಕಷ್ಟು ವ್ಯತ್ಯಾಸವನ್ನು ಕಾಣುತ್ತಿದ್ದೇವೆ. ಅಂದು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪಾಸಾದರೆ ಸಾಕು ಇಡೀ ಊರಿಗೆ ಹಬ್ಬದ ವಾತಾವರಣದ ಸೃಷ್ಟಿಯಾಗುತ್ತಿತ್ತು. ಅದರಲ್ಲೂ ಹೆಣ್ಣು ಮಕ್ಕಳು ಶಾಲೆಗಳಿಗೆ ಹೋಗಿ ಓದುವುದು ಅಪರೂಪದ ಸ್ಥಿತಿಯಾಗಿತ್ತು. ಆಗಿನ ಪೋಷಕರು ಸಹ ತಮ್ಮ ಮಕ್ಕಳಿಗೆ ಶಿಕ್ಷಕರು ಶಿಕ್ಷೆಯನ್ನು ನೀಡಿ ಪಾಠವನ್ನು ಕಲಿಸಿ ಅನ್ನುವ ಮನೋಭಾವದಲ್ಲಿತ್ತು. ಆದರೆ ಇಂದಿನ ಪೋಷಕರು ಒಂದು ಏಟು ಶಿಕ್ಷಕರು ಕೊಟ್ಟರೆ ಶಾಲೆಯ ಮುಂದೆ ಗಲಾಟೆ ಮಾಡುವ ಸ್ಥಿತಿಗೆ ನಾವು ಬಂದು ಬಿಟ್ಟಿದ್ದೇವೆ. ನೀವು ಓದಿರುವಂತಹ ಶಾಲೆಗೆ ಮತ್ತೆ ಬಂದು ಒಟ್ಟಾಗಿ ಗೌರವಿಸುತ್ತಿರುವುದು ಶಾಲೆಯ ಬಗ್ಗೆ ಕಾಳಜಿ ತೋರಿಸುತ್ತಿರುವುದು ಇನ್ನಿತರರಿಗೆ ಸ್ಫೂರ್ತಿಯಾಗಲಿ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಹಲವು ಶಿಕ್ಷಕರು ಮಾತನಾಡಿದರು.
ಹಳೆಯ ವಿದ್ಯಾರ್ಥಿ ರಾಜೇಶ್ ಮಾತನಾಡಿ ಗುರು ವಂದನಾ ಕಾರ್ಯಕ್ರಮ ಒಂದೇಡೆಯಾದರೆ ಇಷ್ಟು ವರ್ಷಗಳ ನಂತರ ನಮ್ಮೆಲ್ಲಾ ಸ್ನೇಹಿತರು ಒಟ್ಟುಗೂಡಿ ನಮ್ಮ ಕುಟುಂಬವನ್ನು ಪರಿಚಯಿಸಿ ನಮ್ಮ ಸ್ಥಿತಿಗತಿಗಳ ಬಗ್ಗೆ ಮುಂದಿನ ಆಲೋಚನೆಗಳ ಬಗ್ಗೆ ಚರ್ಚಿಸಿದ್ದು, ಮತ್ತೆ ನಮ್ಮನ್ನು ಹಳೆಯ ವಿದ್ಯಾರ್ಥಿಗಳನ್ನಾಗಿ ಮಾಡಿತು ಕೇವಲ ಕಾರ್ಯಕ್ರಮವನ್ನು ಮಾಡುವುದೇ ಅಲ್ಲದೆ ಶಾಲೆಗೆ ಏನಾದರೂ ಕೊಡುಗೆ ನೀಡಬೇಕು ಎಂಬುದನ್ನು ನಿಶ್ಚಯಿಸಿ ಶಾಲೆಗೆ ವಿದ್ಯುತ್ತಿನ ಸಮಸ್ಯೆ ಆಗದಂತೆ ಯುಪಿಎಸ್ ಕೊಡುಗೆಯಾಗಿ ನೀಡುತ್ತಿದ್ದೇವೆ. ಮುಂದಿನ ದಿನದಲ್ಲಿಯೂ ಸಹ ಶಾಲೆಯ ಜೊತೆ ಉತ್ತಮ ನಂಟು ಇಟ್ಟುಕೊಂಡು ಹಳ್ಳಿಯ ಮಕ್ಕಳಿಗೆ ಅನುಕೂಲ ಕಲ್ಪಿಸುತ್ತೇವೆ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಶಾಲೆಯ ವತಿಯಿಂದ ಹಿರಿಯ ಶಿಕ್ಷಕರನ್ನ ಹಳೆಯ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.ನಿವೃತ್ತ ಶಿಕ್ಷಕರಾದ ರಂಗನಾಥ್, ಕರಿಬಸವಯ್ಯ, ನಾಗಭೂಷಣ್, ಸಿದ್ದಲಿಂಗ ಸ್ವಾಮಿ, ಗುರಪ್ಪ,ಎಲ್ಲಪ್ಪ, ಗಂಗಾಧರಯ್ಯ, ಪಾಲನೆತ್ರಯ್ಯ, ಶಿವಣ್ಣ, ಸಿದ್ದಲಿಂಗ ಸ್ವಾಮಿ ಎಂ, ಡಿ ಸುಧಾಕರ್ ಬಸವರಾಜು ಟಿಆರ್, ಅವರನ್ನ ಗೌರವಿಸಲಾಯಿತು ವಿದ್ಯಾರ್ಥಿ ಮಿತ್ರರಾದ ವಸಂತಕುಮಾರ್, ವಿಷ್ಣುವರ್ಧನ್, ನಂಜಮಣಿ, ಮಮತಾ, ಮಂಜುನಾಥ ಸೇರಿದಂತೆ 50ಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳು ಭಾಗಿಯಾಗಿದ್ದರು.