ವಿಧಾನಸಭಾಧ್ಯಕ್ಷರು ಮತ್ತು ವಿಧಾನಪರಿಷತ್ತಿನ ಸಭಾಪತಿ ಇಬ್ಬರೂ ನಮ್ಮ ಉತ್ತರ ಕರ್ನಾಟಕ ಹಾಗೂ ಗದಗ-ಮುಂಡರಗಿ ಭಾಗದೊಂದಿಗೆ ನೇರ ಸಂಬಂಧ ಹೊಂದಿರುವವರು ಹಾಗೂ ನಮ್ಮನ್ನು ಪ್ರತಿನಿಧಿಸುವವರಾಗಿರುವುದು ನಮಗೆಲ್ಲರಿಗೂ ಅತ್ಯಂತ ಹೆಮ್ಮೆಯ ಸಂಗತಿ.

ಕನ್ನಡಪ್ರಭ ವಾರ್ತೆ ಮುಂಡರಗಿ

ವಿಧಾನಸಭಾಧ್ಯಕ್ಷರು ಮತ್ತು ವಿಧಾನಪರಿಷತ್ತಿನ ಸಭಾಪತಿ ಇಬ್ಬರೂ ನಮ್ಮ ಉತ್ತರ ಕರ್ನಾಟಕ ಹಾಗೂ ಗದಗ-ಮುಂಡರಗಿ ಭಾಗದೊಂದಿಗೆ ನೇರ ಸಂಬಂಧ ಹೊಂದಿರುವವರು ಹಾಗೂ ನಮ್ಮನ್ನು ಪ್ರತಿನಿಧಿಸುವವರಾಗಿರುವುದು ನಮಗೆಲ್ಲರಿಗೂ ಅತ್ಯಂತ ಹೆಮ್ಮೆಯ ಸಂಗತಿ ಎಂದು ಗದಗ ಶಾಸಕ ಹಾಗೂ ಮಾಜಿ ಸಚಿವ ಡಾ. ಎಚ್. ಕೆ. ಪಾಟೀಲ ಹೇಳಿದರು.

ಮುಂಡರಗಿ ತಾಲೂಕಾ ನಾಗರಿಕ ವೇದಿಕೆಯಿಂದ ಗುರುವಾರ ಸಂಜೆ ವಿಧಾನಪರಿಷತ್ ಸಭಾಪತಿ ಸಲೀಂ ಅಹ್ಮದ್ ಹಾಗೂ ವಿಧಾನಸಭಾದ್ಯಕ್ಷ ಜಿ.ಎಸ್. ಪಾಟೀಲ ಅವರಿಗೆ ಆಯೋಜಿಸಲಾಗಿದ್ದ ಗೌರವ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸಲೀಂ ಅಹ್ಮದ್ ವಿದ್ಯಾರ್ಥಿ ದೆಸೆಯಿಂದಲೇ ಹೋರಾಟದ ಮೂಲಕ ಬೆಳೆದು, ಇಂದು ಮೂರು ಜಿಲ್ಲೆಗಳ ಪ್ರತಿನಿಧಿಯಾಗಿ ಆಯ್ಕೆಯಾಗುವ ಮೂಲಕ ವಿಧಾನಪರಿಷತ್ ಸಭಾಪತಿ ಹುದ್ದೆಯನ್ನು ಅಲಂಕರಿಸಿದ್ದಾರೆ. ಅದೇ ರೀತಿ, ಜಿ.ಎಸ್. ಪಾಟೀಲ ಸಹಕಾರಿ ಕ್ಷೇತ್ರ, ಶಾಸಕರಾಗಿ ಹಾಗೂ ವಿವಿಧ ನಿಗಮದ ಅಧ್ಯಕ್ಷರಾಗಿ ಜಿಲ್ಲೆಗೆ ವಿಶಿಷ್ಟ ಕೊಡುಗೆ ನೀಡಿದ್ದಾರೆ. ಇದೀಗ ಅವರೂ ಸಹ ವಿಧಾನಸಭಾಧ್ಯಕ್ಷರಾಗಿರುವುದು ನಮಗೆಲ್ಲ ಹೆಮ್ಮೆ ಎಂದರು.

ಗೌರವ ಸನ್ಮಾನ ಸ್ವೀಕರಿಸಿದ ವಿಧಾನಸಭಾಧ್ಯಕ್ಷ ಜಿ.ಎಸ್. ಪಾಟೀಲ ಮಾತನಾಡಿ, ಮುಂಡರಗಿ ತಾಲೂಕಿಗೆ ತೋಟಗಾರಿಕೆ ಮಹಾವಿದ್ಯಾಲಯ ಮಂಜೂರಾಗಿದ್ದು, ಸುಮಾರು ₹145 ಕೋಟಿ ವೆಚ್ಚದಲ್ಲಿ ಈ ಕಾಲೇಜು ನಿರ್ಮಾಣವಾಗಲಿದೆ. ಮುಂಬರುವ ದಿನಗಳಲ್ಲಿ ಬೆಂಗಳೂರಿನಲ್ಲಿ ಕಾಮನ್‌ವೆಲ್ತ್ ಪಾರ್ಲಿಮೆಂಟರಿ ಮಹಿಳಾ ಸಮ್ಮೇಳನವನ್ನು ಆಯೋಜಿಸಲಾಗುತ್ತಿದ್ದು, ಇದರಲ್ಲಿ ದೇಶದ 237 ಮಹಿಳಾ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದ ಅವರು, ಇತ್ತೀಚೆಗೆ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಜ.ನಾಡೋಜ ಡಾ.ಅನ್ನದಾನೀಶ್ವರ ಸ್ವಾಮಿಜಿಯವರ ಸಾಹಿತ್ಯಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಕೊಡುಗೆಗಳನ್ನು ಸ್ಮರಿಸಿದ ಪಾಟೀಲರು, 168ಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿರುವ ಪೂಜ್ಯರು ಪ್ರಸ್ತುತ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿರುವುದರಿಂದ ಪ್ರಶಸ್ತಿಯ ಗೌರವವೇ ಹೆಚ್ಚಾಗಿದೆ ಎಂದರು.

ಸಭಾಪತಿ ಸಲೀಂ ಅಹಮ್ಮದ್ ಮಾತನಾಡಿ, ವಿಧಾನಪರಿಷತ್ ಸಭಾಪತಿ ಸ್ಥಾನವು ಕೇವಲ ಅಧಿಕಾರವಲ್ಲ, ಅದೊಂದು ದೊಡ್ಡ ಜವಾಬ್ದಾರಿಯಾಗಿದೆ. ನನ್ನ 45 ವರ್ಷಗಳ ರಾಜಕೀಯ ಜೀವನದ ಅನುಭವದೊಂದಿಗೆ, ಸದನದ ಗೌರವವನ್ನು ಎತ್ತಿ ಹಿಡಿಯುವ ಹಾಗೂ ರಾಜ್ಯದ ಜನರ ಸಮಸ್ಯೆಗಳಿಗೆ ನ್ಯಾಯ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಸಭಾಪತಿಯಾಗಿ ಆಯ್ಕೆಯಾದ ತಕ್ಷಣವೇ ನಾನು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ. ಸದನದ ಪೀಠದಲ್ಲಿ ಕುಳಿತ ಮೇಲೆ ಆಡಳಿತ ಮತ್ತು ವಿರೋಧ ಪಕ್ಷಗಳೆರಡನ್ನೂ ಸಮಾನವಾಗಿ ಕಾಣುವುದು ನನ್ನ ಧರ್ಮ. ವಿರೋಧ ಪಕ್ಷದವರು ಕೇವಲ ವಿರೋಧಕ್ಕಾಗಿ ವಿರೋಧ ಮಾಡದೆ, ಸರ್ಕಾರದ ತಪ್ಪುಗಳನ್ನು ತಿದ್ದುವ ಕೆಲಸ ಮಾಡಬೇಕು ಹಾಗೂ ಒಳ್ಳೆಯ ಕೆಲಸಗಳಿಗೆ ಬೆನ್ನು ತಟ್ಟಬೇಕು ಎಂದು ಸಲಹೆ ನೀಡಿದರು.ಸಾನಿಧ್ಯ ವಹಿಸಿದ್ದ ತೋಂಟದಾರ್ಯ ಮಠದ ಜ.ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮಿಜಿ ಮಾತನಾಡಿ, ರಾಜ್ಯಪಾಲರ ನಂತರ ಅತ್ಯಂತ ದೊಡ್ಡ ಮತ್ತು ಜವಾಬ್ದಾರಿಯುತ ಸಂವಿಧಾನಾತ್ಮಕ ಹುದ್ದೆಗಳೆಂದರೆ ವಿಧಾನಸಭಾಧ್ಯಕ್ಷ ಮತ್ತು ವಿಧಾನ ಪರಿಷತ್ ಸಭಾಪತಿ ಸ್ಥಾನಗಳು. ಸಭಾಪತಿ ಸ್ಥಾನವೆಂದರೆ ಅದು ಸಾಕ್ಷಾತ್ ಸಂವಿಧಾನವಿದ್ದಂತೆ. ಇಂತಹ ಮಹೋನ್ನತ ಸ್ಥಾನಗಳಿಗೆ ಉತ್ತರ ಕರ್ನಾಟಕದವರಾದ ಜಿ.ಎಸ್. ಪಾಟೀಲ ಮತ್ತು ಸಲೀಂ ಅಹ್ಮದ್ ಅವರು ಆಯ್ಕೆಯಾಗಿರುವುದು ಈ ಭಾಗಕ್ಕೆ ಸಂದ ಕಿರೀಟವಾಗಿದೆ ಎಂದ‌ರು.

ಸಾನಿಧ್ಯವಹಿಸಿದ್ದ ಜ.ನಾಡೋಜ ಡಾ.ಅನ್ನದಾನೀಶ್ವರ ಮಹಾಶಿವಯೋಗಿಗಳವರು ಮಾತನಾಡಿ, 12ನೇ ಶತಮಾನದಲ್ಲಿ ಮಹಾತ್ಮ ಬಸವಣ್ಣನವರು ಧಾರ್ಮಿಕ ಸಂವಿಧಾನವನ್ನು ಕಟ್ಟಿ ಎಲ್ಲರಿಗೂ ಸಮಾನ ಅರ್ಹತೆ ಮತ್ತು ವಾಕ್ ಸ್ವಾತಂತ್ರ್ಯವನ್ನು ನೀಡಿದರು. ಅದೇ ಹಾದಿಯಲ್ಲಿ ಇಂದಿನ ಜನಪ್ರತಿನಿಧಿಗಳು ನಾಡಿನ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಮುಂಡರಗಿ ನಗರಕ್ಕೆ ರಾಜ್ಯೋತ್ಸವ ಪ್ರಶಸ್ತಿ ದೊರೆಯಲು ಜಿ.ಎಸ್. ಪಾಟೀಲ್ ಅವರ ಪ್ರಯತ್ನ ಹಾಗೂ ಸಲೀಂ ಅಹ್ಮದ್ ಅವರ ಅಭಿಮಾನ ಕಾರಣವಾಗಿದೆ ಎಂದರು.

ಸಯ್ಯದ ಶಾ ಹೈದರವಲಿ ನಬೀರಖಾದ್ರಿ ಸಜ್ಜದ ನೇತೃತ್ವ ವಹಿಸಿ ಮಾತನಾಡಿದರು. ಸಿಂಗಟಾಲೂರು ಶ್ರೀ ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಕರಬಸಪ್ಪ ಹಂಚಿನಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಎಸ್.ಡಿ. ಮಕಾಂದಾರ, ರಾಮಕೃಷ್ಣ ದೊಡ್ಡಮನಿ, ಸುಜಾತಾ ದೊಡ್ಡಮನಿ, ಡಿ.ಡಿ. ಮೋರನಾಳ, ವೈ.ಎನ್. ಗೌಡರ, ರವೀಂದ್ರ ಉಪ್ಪಿನಬೆಟಗೇರಿ ಸೇರಿದಂತೆ ಅನೇಕರಿದ್ದರು. ವರ್ಷಾ ಬಾರಕೇರ ಕಾರ್ಯಕ್ರಮ ನಿರೂಪಿಸಿದರು.