ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಬಹುತ್ವ ಭಾರತದ ಎದೆಯಾಳದಲ್ಲಿ ನೂರಾರು ರಾಮಾಯಣಗಳಿವೆ. ಇಂತಹ ಜನಕಥನವನ್ನು ಮಹಾಕಾವ್ಯವಾಗಿಸಿ ಬೆಳಗಿಸಿದ ಕವಿಋಷಿ ವಾಲ್ಮೀಕಿಯನ್ನು ಹಿನ್ನೆಲೆ ಸರಿಸಿರುವುದು ಭಾರತೀಯ ಜಾತಿನಿಷ್ಠ ಸಮಾಜದ ದುರಂತ ಎಂದು ಕರ್ನಾಟಕ ಅಕಾಡೆಮಿ ಸದಸ್ಯ ಡಾ. ಚಿಕ್ಕಮಗಳೂರು ಗಣೇಶ ತಿಳಿಸಿದರು.ನಗರದ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಕೊಲೆಯ ಹಿಂಸೆಯನ್ನು ಖಂಡಿಸಿ ಕಾವ್ಯಬರೆದ ಮಹಾಕವಿ ವಾಲ್ಮೀಕಿ. ಅವರು ಬೇಡರ ಕುಲದಲ್ಲಿ ಜನಿಸಿದ ಕಾರಣದಿಂದಲೇ ದಟ್ಟವಾದ ಪ್ರಕೃತಿ ಹಾಗೂ ಮನುಷ್ಯ ಪ್ರಕೃತಿಯ ಅಂತರಾಳವನ್ನು ಕಡೆದುಕೊಡಲು ಸಾಧ್ಯವಾಗಿದೆ. ಸೀತೆಯಂತಹ ಹೆಣ್ಣು ಮತ್ತು ಹನುಮಂತ, ಶಬರಿಯಂತಹ ತಳವರ್ಗದ ಸತ್ವಶೀಲ ಚೈತನ್ಯಗಳು ಮಹಾಕಾವ್ಯದಲ್ಲಿ ಪ್ರಾಧಾನ್ಯತೆ ಪಡೆಯಲು ಈ ಜನಾಂಗಿಕ ಹಿನ್ನೆಲೆಯೇ ಕಾರಣ ಎಂದರು.ವಾಲ್ಮೀಕಿ ಅವರು ಮನುಷ್ಯರ ಬದುಕಿನ ವಿಕಾಸಕ್ಕೆ ಒಂದು ಪ್ರಾಚೀನ ಮಾದರಿ. ಶಿಕ್ಷಣದ ಮೂಲಕ ಸಾಮಾನ್ಯ ಮನುಷ್ಯ ಯಾವ ಎತ್ತರ ತಲುಪಬಹುದು ಎಂಬುದಕ್ಕೆ ಇದು ನಿದರ್ಶನ. ಒಬ್ಬ ವ್ಯಕ್ತಿ ಸರಿಯಾದ ದಾರಿ ಮತ್ತು ಗುರಿ ಮೂಲಕ ಸಾಧನೆ ತೋರಿದರೆ ಸಾವಿರಾರು ವರ್ಷ ಕಳೆದರೂ ಮರೆಯಲಾಗದ ವ್ಯಕ್ತಿತ್ವವಾಗಿ ವಾಲ್ಮೀಕಿ ಅವರಂತೆ ಕಂಗೊಳಿಸುತ್ತಾರೆ. ಇಂಥವರನ್ನು ವಿದ್ಯಾರ್ಥಿಗಳು ತಮ್ಮ ಸಾಧನೆಗೆ ಪ್ರೇರಣೆಯಾಗಿ ಪಡೆದುಕೊಳ್ಳಿ ಎಂದು ಅವರು ಕಿವಿಮಾತು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಸೋಮಣ್ಣ ಅಧ್ಯಕ್ಷತೆವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಸಾಂಸ್ಕೃತಿಕ ಸಮಿತಿ ಕಾರ್ಯದರ್ಶಿ ಎಚ್.ಎಸ್. ಧನಲಕ್ಷ್ಮೀ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಆರ್. ನಳಿನಿ, ಐಕ್ಯುಎಸಿ ಘಟಕದ ಸಂಚಾಲಕ ಡಾ.ಎನ್. ನಾಗೇಂದ್ರ, ನಿರ್ವಹಣಾಶಾಸ್ತ್ರ ವಿಭಾಗದ ಎಚ್.ಬಿ. ರವಿಕುಮಾರ್, ಎಂ.ಕಾಂ ವಿಭಾಗದ ಮುಖಸ್ಥ ಡಾ.ಬಿ. ರವಿಶಂಕರ್, ವಿದ್ಯಾರ್ಥಿ ಪ್ರತಿನಿಧಿಗಳಾದ ಎನ್. ಲಿಖಿತಾ, ಎ. ಸಿಂಧುರಾಣಿ ಮೊದಲಾದವರು ಇದ್ದರು.ಈ ವೇಳೆ ಏರ್ಪಡಿಸಿದ್ದ ರಸಪ್ರಶ್ನೆ ಸ್ಫರ್ಧೆ ವಿಜೇತರನ್ನು ಅಭಿನಂದಿಸಲಾಯಿತು.ಭಾರತದಲ್ಲಿ ವಾಲ್ಮೀಕಿಯಿಂದ ಸಾಹಿತ್ಯವೆಂಬ ಸಾಂಸ್ಕೃತಿಕ ಸಂವಿಧಾನಕ್ಕೆ ಚಾಲನೆ ದೊರೆತಿದೆ. ಅಲ್ಲಿಂದ ಆರಂಭವಾಗಿ ಬಹುಪಾಲು ಸಾಹಿತ್ಯವು ಪ್ರೀತಿ ಮತ್ತು ಸಹನೆಯನ್ನು ಸಹಬಾಳುವೆಯ ಸಂದೇಶವಾಗಿ ಸಾರುತ್ತಾ ಬಂದಿದೆ. ಇವತ್ತಿನ ಸರ್ವಸಮ್ಮತ ಸಂವಿಧಾನ ಅವೆಲ್ಲವುಗಳ ಸಾರಸತ್ವದ ತಾರ್ಕಿಕ ಅಂತ್ಯ. ಸಾಮಾಜಿಕ ನ್ಯಾಯದ ತಾಯಿಯಂತೆ ಮಾರ್ಗದರ್ಶನ ಮಾಡುತ್ತಿದೆ.
-ಚಿಕ್ಕಮಗಳೂರು ಗಣೇಶ, ಸಾಹಿತಿ, ಮೈಸೂರು