ಹದಿಹರೆಯದ ವಯಸ್ಸಿನವರಲ್ಲಿ ಡ್ರಗ್ಸ್ ಸೇವನೆಯಿಂದ ದೈಹಿಕ ಹಾಗೂ ಮಾನಸಿಕವಾಗಿ ಅನೇಕ ಬದಲಾವಣೆ ಆಗುತ್ತವೆ. ಅವು ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ. ಪಾಲಕರು ಕಷ್ಟ, ಕಾರ್ಪಣ್ಯಗಳ ನಡುವೆಯೂ ಮಕ್ಕಳ ಉತ್ತಮ ಭವಿಷ್ಯಕ್ಕೆ ಹಂಬಲಿಸುತ್ತಾರೆ.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಎಳೆಯ ವಯಸ್ಸಿನವರು ಕುತೂಹಲಕ್ಕಾಗಿ ಮಾದಕ ವಸ್ತುಗಳನ್ನು ಸೇವಿಸಿ ವ್ಯಸನಿಗಳಾಗುತ್ತಿರುವುದು ಆತಂಕಕಾರಿ ಸಂಗತಿ ಎಂದು ತಾಲೂಕು ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿ.ಕುಸುಮಾ ಬೇಸರ ವ್ಯಕ್ತಪಡಿಸಿದರು.ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಟೈಮ್ಸ್ ಪದವಿ ಪೂರ್ವ ಕಾಲೇಜು ವತಿಯಿಂದ ಆಯೋಜಿಸಿದ್ದ ಕಾನೂನು ಅರಿವು, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ೨೦೨೬ನೇ ಸಾಲಿನ ಟೈಮ್ಸ್ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಮಾದಕ ಪದಾರ್ಥಗಳ ಸೇವನೆಯಿಂದ ಮಾನಸಿಕವಾಗಿ ಸ್ಥಿಮಿತ ಕಳೆದುಕೊಳ್ಳಬೇಕಾಗುತ್ತದೆ. ಅದರ ವಿರುದ್ಧ ಎಚ್ಚರದಿಂದಿರುವಂತೆ ಯುವಕರಲ್ಲಿ ಜಾಗೃತಿ ಮೂಡಿಸುವುದು ಮುಖ್ಯವಾಗಿದೆ. ಮಾದಕ ವಸ್ತು ಸೇವನೆ, ಸಮಾಜದಲ್ಲಿ ಶಾಂತಿ ಕದಡಿ ಆಶಾಂತಿಗೆ ದಾರಿ ಮಾಡಿಕೊಡುತ್ತದೆ. ಹಾಗಾಗಿ ಯುವಕರು ಮಾದಕ ವಸ್ತುಗಳಿಂದ ದೂರವಿರಬೇಕು. ಈ ಮಾದಕ ದುಶ್ಚಟಕ್ಕೆ ಬಲಿಯಾದವರನ್ನು ಸರಿ ದಾರಿಗೆ ತರುವ ಕೆಲಸದಲ್ಲಿ ತೊಡಗ ಬೇಕೆಂದು ಹೇಳಿದರು.
ಹದಿಹರೆಯದ ವಯಸ್ಸಿನವರಲ್ಲಿ ಡ್ರಗ್ಸ್ ಸೇವನೆಯಿಂದ ದೈಹಿಕ ಹಾಗೂ ಮಾನಸಿಕವಾಗಿ ಅನೇಕ ಬದಲಾವಣೆ ಆಗುತ್ತವೆ. ಅವು ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ. ಪಾಲಕರು ಕಷ್ಟ, ಕಾರ್ಪಣ್ಯಗಳ ನಡುವೆಯೂ ಮಕ್ಕಳ ಉತ್ತಮ ಭವಿಷ್ಯಕ್ಕೆ ಹಂಬಲಿಸುತ್ತಾರೆ. ಆದ್ದರಿಂದ ವ್ಯಸನ ಮುಕ್ತ ರಾಗಿ ಉತ್ತಮ ವಿದ್ಯಾಭ್ಯಾಸ ಮಾಡುವ ಮೂಲಕ ಭವಿಷ್ಯದ ಜೊತೆಗೆ ಪಾಲಕರ ಕನಸನ್ನು ಮಕ್ಕಳು ನನಸಾಗಿಸಬೇಕೆಂದು ಹೇಳಿದರು.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜೆ.ಆರ್.ಕೆಂಚೇಗೌಡ ಮಾತನಾಡಿ, ಶಿಕ್ಷಣ ವ್ಯಕ್ತಿಯ ಭವಿಷ್ಯ ರೂಪಿಸುವುದರಿಂದ ಪ್ರಾಮುಖ್ಯತೆ ಕೊಡಬೇಕು. ಕಷ್ಟದ ಬದುಕಿನ ನಡುವೆಯೂ ಶಿಕ್ಷಣ ಪಡೆದು ಅಪ್ರತಿಮ ಸಾಧನೆಗೈದು, ದೇಶದ ಭವಿಷ್ಯ ರೂಪಿಸಿದ ಗಣ್ಯರನ್ನು ಮಾದರಿಯಾಗಿಟ್ಟುಕೊಂಡು ಮಕ್ಕಳು ಶೈಕ್ಷಣಿಕವಾಗಿ ಸಾಧನೆ ಮಾಡಿ, ಗುರುವಿಗೆ ಹಾಗೂ ಪಾಲಕರಿಗೆ ಹೆಸರು ತರಬೇಕೆಂದು ಸಲಹೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ವೃದ್ಧಾಶ್ರಮಗಳು ಹೆಚ್ಚಾಗುತ್ತಿರುವುದು ಸಾಮಾಜಿಕ ಮೌಲ್ಯಗಳು ಕುಸಿಯುತ್ತಿರುವ ಸಂಕೇತವಾಗಿದೆ. ಇಂದಿನ ಯುವಜನರಲ್ಲಿ ಗುರು- ಹಿರಿಯರ ಬಗ್ಗೆ ಗೌರವ ಕಡಿಮೆಯಾಗುತ್ತಿದೆ. ಆದ್ದರಿಂದ ಯುವ ಸಮೂಹ ಸಾಮಾಜಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಆಧುನಿಕ ತಂತ್ರಜ್ಞಾನ ಕ್ರಾಂತಿಯಿಂದ ಜಗತ್ತನ್ನು ಮೊಬೈಲ್ ಆವರಿಸಿಕೊಂಡಿದೆ. ವಿದ್ಯಾರ್ಥಿ ಜೀವನ ಅತ್ಯಮೂಲ್ಯ. ಈ ಅವಧಿಯಲ್ಲಿ ಸಾಧ್ಯವಾದರೆ ಮೊಬೈಲ್ ತ್ಯಜಿಸಿ ಅಥವಾ ಅವಶ್ಯಕತೆಗೆ ತಕ್ಕಂತೆ ಬಳಸಿ. ನಿಮ್ಮ ಜೀವನದ ಅತ್ಯಮೂಲ್ಯ ಅವಧಿಯನ್ನು ಹಾಳು ಮಾಡಿಕೊಳ್ಳಬೇಡಿ ಎಂದು ಎಚ್ಚರಿಸಿದರು.ಟೈಮ್ಸ್ ಸಂಸ್ಥೆಯ ಕಾರ್ಯದರ್ಶಿ ಬಿ.ಕೆ.ಗಂಗಾಧರ್ ಮಾತನಾಡಿ, ಇಂದಿನ ವಿದ್ಯಾರ್ಥಿಗಳಿಗೆ ಮೊಬೈಲ್ ಎಲ್ಲವೂ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ಫೋಟೊ ಹಾಕದಿದ್ದರೆ ನಿದ್ರೆ ಬಾರದ ಸ್ಥಿತಿ ಇದೆ. ಸಣ್ಣ ಸಣ್ಣ ಆಸೆ, ಆಮಿಷಗಳಿಗೆ ಬಲಿಯಾಗುವುದನ್ನು ಬಿಡಬೇಕು. ಓದುವ ಸಮಯದಲ್ಲಿ ಕಷ್ಟಪಟ್ಟು ಓದಿ, ಓದು ಮುಗಿದ ಮೇಲೆ ನಿಮ್ಮೊಂದಿಗೆ ನಿಮ್ಮ ಸಾಧನೆಗೆಳನ್ನು ಸಾಮಾಜಿಕ ಜಾಲತಾಣದಲ್ಲಿ ಬಿಂಬಿಸಿ, ಸಮಾಜದ ಆಸ್ತಿಗಳಾಗಿ ಎಂದರು.
ಎಚ್.ಡಿ.ಕೋಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹನುಮಂತರಾವ್ ಮಾತನಾಡಿದರು.ನಿವೃತ್ತ ಮುಖ್ಯಶಿಕ್ಷಕ ಈ.ಈಶ್ವರನ್, ಅನಾಥ ಶವಗಳಿಗೆ ಮುಕ್ತಿ ದೊರಕಿಸುವ ಸಮಾಜ ಸೇವಕ ಸಿ.ಎಲ್. ದಿನೇಶ್, ಪ್ರಸೂತಿ ತಜ್ಞೆ ಡಾ.ಕೆ.ಆರ್. ಶೋಭಾರಾಣಿ, ಕ್ರೀಡಾ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಅಥ್ಲಿಟ್ ಪ್ರಕಾಶ್ ಬರಾಳು ಅವರಿಗೆ ಟೈಮ್ಸ್ ಪುರಸ್ಕಾರ ನೀಡಿ ಗೌರವಿಸಲಾಯಿತು.
ಪ್ರಾಂಶುಪಾಲ ಎ.ಸಿ.ಸುನಿಲ್ ಕುಮಾರ್, ಶಿಕ್ಷಣ ಸಂಯೋಜಕ ಶ್ರೀಕಂಠ, ಆಡಳಿತಾಧಿಕಾರಿ ಸಂಜಯ್ ಇತರರಿದ್ದರು.