ಇದು ನ್ಯಾಯ- ಅನ್ಯಾಯ, ಸುಳ್ಳು- ಸತ್ಯಗಳ ನಡುವಿನ ಚುನಾವಣೆ-ಸಂತೋಷ ಲಾಡ್‌

| Published : May 06 2024, 12:32 AM IST

ಇದು ನ್ಯಾಯ- ಅನ್ಯಾಯ, ಸುಳ್ಳು- ಸತ್ಯಗಳ ನಡುವಿನ ಚುನಾವಣೆ-ಸಂತೋಷ ಲಾಡ್‌
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿಯವರು ರಾಮಮಂದಿರ, ಮುಸ್ಲಿಮರ ವಿರುದ್ಧ ಮಾತನಾಡುವುದು ಬಿಟ್ಟು ಬೇರೇನೂ ಮಾಡಿಲ್ಲ. ಈ ಚುನಾವಣೆ ನ್ಯಾಯ - ಅನ್ಯಾಯ, ಸುಳ್ಳು- ಸತ್ಯಗಳ ನಡುವಿನ ಚುನಾವಣೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.

ಹಾವೇರಿ: ಬಿಜೆಪಿಯವರು ರಾಮಮಂದಿರ, ಮುಸ್ಲಿಮರ ವಿರುದ್ಧ ಮಾತನಾಡುವುದು ಬಿಟ್ಟು ಬೇರೇನೂ ಮಾಡಿಲ್ಲ. ಈ ಚುನಾವಣೆ ನ್ಯಾಯ - ಅನ್ಯಾಯ, ಸುಳ್ಳು- ಸತ್ಯಗಳ ನಡುವಿನ ಚುನಾವಣೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಅಂಬೇಡ್ಕರ್ ಅವರ ಸಂವಿಧಾನ ಉಳಿಸುವ ಚುನಾವಣೆಯಾಗಿದೆ. ನಾವು ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಿಗೆ ಹೇಳಿದ್ದೇವೆ. ಅದರಂತೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಜಾತಿ, ಧರ್ಮದ ಮಾತು ಬಿಟ್ಟು ಅವರ 10 ವರ್ಷಗಳ ಸಾಧನೆಯನ್ನು ಹೇಳಲಿ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದರೆ ಇದೇನಾ ಎಂದು ಪ್ರಶ್ನಿಸಿದರು.

ಪದವಿ ಓದಿರುವ ಶೇ. 65ರಷ್ಟು ವಿದ್ಯಾರ್ಥಿಗಳಿಗೆ ಕೆಲಸ ಸಿಗುತ್ತಿಲ್ಲ. ಚೀನಾ ಸೇನೆ ಭಾರತದ ಗಡಿಯೊಳಗೆ ಬಂದಿದೆ. 2019ರಲ್ಲಿ ಪುಲ್ವಾಮಾದಲ್ಲಿ 300 ಕೆಜಿ ಆರ್‌ಡಿಎಕ್ಸ್ ಎಲ್ಲಿಂದ ಬಂತು? ಈ ಬಗ್ಗೆ ಚರ್ಚೆಯಾಗಬೇಕಲ್ಲವೇ? ಗೋಹತ್ಯೆ ನಿಷೇಧದ ಬಗ್ಗೆ ಮಾತನಾಡುವವರು ಗೋಮಾಂಸ ರಫ್ತು ನಿಲ್ಲಿಸಿದ್ದಾರಾ ? ಸುಳ್ಳು ಹೇಳುವುದರಲ್ಲಿ ಬಿಜೆಪಿಗರು ನಿಸ್ಸೀಮರು. ಅದಾನಿ, ಅಂಬಾನಿಗೆ ಅಷ್ಟು ಆಸ್ತಿ ಹೇಗೆ ಬಂತು? 6 ವರ್ಷದಲ್ಲಿ ₹11 ಲಕ್ಷ ಕೋಟಿ ಹೇಗೆ ಗಳಿಸಿದರು ಎಂದು ಪ್ರಶ್ನಿಸಿದರು.

ನೇಹಾ ಪ್ರಕರಣವನ್ನು ನಾವೆಲ್ಲರೂ ಖಂಡಿಸಿದ್ದೇವೆ. ಬಿಜೆಪಿಯ ಎಲ್ಲರೂ ಆಕೆಯ ಮನೆಗೆ ಹೋದರು. ಬೇರೆ ಪ್ರಕರಣಗಳಲ್ಲಿ ಯಾಕೆ ಹೋಗಲಿಲ್ಲ? ಚುನಾವಣೆ ಬಳಿಕ ಅವರ ಮನೆಗೆ ಎಷ್ಟು ಜನ ಹೋಗುತ್ತಾರೆಯೋ ನೋಡೋಣ ಎಂದರು.ನಮ್ಮ ಸರ್ಕಾರದ ಸಾಧನೆಯಿಂದಾಗಿ ಈ ಬಾರಿ ಆನಂದಸ್ವಾಮಿ ಗಡ್ಡದೇವರಮಠ ಗೆಲುವು ಖಚಿತ ಎಂದರು.ಶಾಸಕ ರುದ್ರಪ್ಪ ಲಮಾಣಿ, ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ಧಾರವಾಡ ಕ್ಷೇತ್ರದ ಅಭ್ಯರ್ಥಿ ವಿನೋದ ಅಸೂಟಿ, ಎಂ.ಎಂ. ಹಿರೇಮಠ, ರಾಜೇಶ್ವರಿ ಪಾಟೀಲ, ಪ್ರೇಮಾ ಪಾಟೀಲ ಇತರರು ಇದ್ದರು.