ಸಾರಾಂಶ
ಬ್ಯಾಡಗಿ: ಕ್ರೀಡಾ ಪ್ರತಿಭೆಯೊಂದು ಅವಕಾಶ ವಂಚಿತರಾದರೆ ಕ್ರೀಡಾ ಜಗತ್ತಿಗೆ ತುಂಬಲಾರದ ನಷ್ಟ, ದೈಹಿಕ ಶಿಕ್ಷಕರ ಜೊತೆ ನಿತ್ಯ ರನ್ನಿಂಗ್ ಮಾಡುತ್ತಿದ್ದ ಪಶುಪತಿಹಾಳದ ಶೋಭಾ ಜಾವೂರ (ಜೆ.ಜೆ.ಶೋಭಾ) ಅಂತಾರಾಷ್ಟ್ರೀಯಮಟ್ಟದ ಅಥ್ಲೆಟಿಕ್ ಕ್ರೀಡಾಪಟುವಾಗಿ ದೇಶದ ಕೀರ್ತಿ ಹೆಚ್ಚಿಸಿದ್ದಲ್ಲದೇ ಅರ್ಜುನ ಪ್ರಶಸ್ತಿ ಭಾಜನಳಾಗಿದ್ದು ಹೀಗಾಗಿ ಅವಶ್ಯವಿರುವ ಕ್ರೀಡಾ ಸೌಲಭ್ಯಗಳನ್ನು ಕಲ್ಪಿಸಲು ಮಹಾವಿದ್ಯಾಲಯಗಳು ಸದಾಸಿದ್ಧವಿರುವಂತೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಉಪಾಧ್ಯಕ್ಷ ಎಸ್.ಆರ್.ಪಾಟೀಲ ಕರೆ ನೀಡಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಪದವಿ ಪೂರ್ವ ಮಹಾವಿದ್ಯಾಲಯಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕ್ರೀಡೆಯಿಂದ ದೈಹಿಕ ಪ್ರಯೋಜನಗಳು ಮಾತ್ರವಲ್ಲದೇ ಕ್ರೀಡಾಪಟುಗಳ ಏಕಾಗ್ರತೆ ಸಾಧಿಸುತ್ತವೆ, ದೈಹಿಕ ಪರಿಶ್ರಮ ಮತ್ತು ಕೌಶಲ್ಯ ಒಳಗೊಂಡಿರುವ ಕ್ರೀಡೆಗಳು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುತ್ತವೆ, ಇಷ್ಟಾದರೂ ಸಹ ಜೀವವನ್ನು ಮುಡುಪಾಗಿಟ್ಟು ಉತ್ತಮ ಸಾಧನೆ ತೋರಿದ ಕ್ರೀಡಾಪಟುಗಳು ಹೆಸರು ಮತ್ತು ಸಾಧನೆ ಜನಮಾನಸದಲ್ಲಿ ಉಳಿಯದೇ ಇರುವುದು ದುರಂತದ ಸಂಗತಿ ಎಂದರು.ಕಬಡ್ಡಿಯಲ್ಲಿ ಕ್ರಾಂತಿಕಾರಿ ಬದಲಾವಣೆ: ಪುರಸಭೆ ಅಧ್ಯಕ್ಷ ಬಾಲಚಂದ್ರ ಪಾಟೀಲ ಮಾತನಾಡಿ, ಮಣ್ಣಿನಲ್ಲಿ ಆಡುವಂತಹ ದೇಶೀಯ ಕ್ರೀಡೆ ಕಬಡ್ಡಿ ಇಂದು ಅಂತಾರಾಷ್ಟ್ರೀಯಮಟ್ಟದಲ್ಲಿ ಪರಿಚಯಿಸಿಕೊಳ್ಳುತ್ತಿರುವುದು ಸಂತಸದ ವಿಷಯ, ಕಬಡ್ಡಿಯಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗಿದ್ದು ಬರಿಗಾಲಲ್ಲಿ ಮಣ್ಣಿನ ಅಂಕಣದಲ್ಲಿ ಆಡುತ್ತಿದ್ದ ಕ್ರೀಡಾಪಟುಗಳು ಇದೀಗ ಮ್ಯಾಟ್‌ಗಳ ಮೇಲೆ ಶೂಸ್‌ಗಳನ್ನು ಧರಿಸಿಕೊಂಡು ಆಡಲಾರಂಭಿಸಿದ್ದಾರೆ, ಬಹುತೇಕ ಬಡ ಕುಟುಂಬದ ಹಿನ್ನೆಲೆಯುಳ್ಳ ಕ್ರೀಡಾಪಟುಗಳು ಪ್ರೋಕಬಡ್ಡಿ ಆವೃತ್ತಿಗಳಲ್ಲಿ ಕೋಟಿಗಟ್ಟಲೇ ಹಣ ಸಂಪಾದಿಸುತ್ತಿದ್ದಾರೆ, ಕ್ರೀಡಾ ಜಗತ್ತಿನಲ್ಲಿ ಇದೊಂದು ಕ್ರಾಂತಿಕಾರಿ ಬದಲಾವಣೆಯಾಗಿದೆ ಎಂದರು.
ವೇದಿಕೆಯಲ್ಲಿ ಸಿಡಿಸಿ ಅಧ್ಯಕ್ಷ ದತ್ತಾತ್ರೇಯ ಸಾಳುಂಕೆ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪುರಸಭೆ ಉಪಾಧ್ಯಕ್ಷ ಸುಭಾಸ್ ಮಾಳಗಿ, ಸದಸ್ಯ ಹನುಮಂತ ಮ್ಯಾಗೇರಿ, ಮುಖ್ಯಾಧಿಕಾರಿ ವಿನಯಕುಮಾರ, ಮುಖಂಡರಾದ ನಾಗರಾಜ ಆನ್ವೇರಿ, ಮುನಾಫ್ ಎರೇಶೀಮಿ, ದುರ್ಗೇಶ ಗೋಣೆಮ್ಮನವರ, ಡಾ. ಎ.ಎಂ. ಸೌದಾಗರ, ಮಹಾಂತೇಶ ಉಪ್ಪಾರ, ಪ್ರಾಚಾರ‍್ಯರಾದ ಮಾಲತೇಶ ಬಂಡೆಪ್ಪನವರ, ಎಂ. ಬೀರಪ್ಪ, ಮಂಜುನಾಥ ಬಳ್ಳಾರಿ, ಆನಂದ ಮುದಕಮ್ಮನವರ, ಎನ್.ಡಿ. ಮಾಚೇನಹಳ್ಳಿ, ಶಿವಾನಂದ ಬೆನ್ನೂರ, ಕೆ.ಪಿ. ಬ್ಯಾಡಗಿ ಇನ್ನಿತರರಿದ್ದರು.