ಸಾರಾಂಶ
ಕೊಪ್ಪಳ: ಜಯಪ್ರಕಾಶ ಹೆಗ್ಡೆ ವರದಿಯನ್ನು ಈಗಷ್ಟೇ ಸರ್ಕಾರ ಸ್ವೀಕರಿಸಿದೆ. ಅದನ್ನು ಸರ್ಕಾರ ಕ್ಯಾಬಿನೆಟ್ ನಲ್ಲಿ ಮಂಡಿಸುತ್ತದೆ ಮತ್ತು ಜನರ ಮುಂದೆ ಇಡುತ್ತದೆ. ಹೀಗಾಗಿ, ವರದಿ ಓದದೇ ವಿರೋಧಿಸುವುದು ಸರಿಯಲ್ಲ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.ಕನಕಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಮಾರು ₹168 ಕೋಟಿ ವೆಚ್ಚ ಮಾಡಿ, ವರದಿ ಸಿದ್ಧಪಡಿಸಿದ್ದಾರೆ. ವರದಿಯಲ್ಲಿ ಏನಿದೆ ಎನ್ನುವುದನ್ನು ಎಲ್ಲರ ಮುಂದೆ ಇಡಲಾಗುತ್ತದೆ. ಅದಾದ ಮೇಲೆ ಅದರ ಪರಿಶೀಲನೆ, ಚರ್ಚೆ ನಡೆದರೆ ಅರ್ಥವಿರುತ್ತದೆ. ಈಗ ವರದಿ ಓದದೆಯೇ ವಿರೋಧ ಮಾಡುವುದು ಯಾವ ಲೆಕ್ಕಾಚಾರ ಎಂದು ಪ್ರಶ್ನಿಸಿದರು.ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿ ಬಗ್ಗೆ ಅಧ್ಯಯನ ಮಾಡಿ, ವರದಿ ಸಲ್ಲಿಸಿದ್ದಾರೆ. ಹೀಗಾಗಿ, ಅದೆಲ್ಲವನ್ನು ಸವಿಸ್ತಾರವಾಗಿ ಅಧ್ಯಯನ ಮಾಡಬೇಕಾಗುತ್ತದೆ. ಅದಾದ ಮೇಲೆಯೇ ಸರ್ಕಾರ ತೀರ್ಮಾನ ತೆಗೆದುಕೊಳ್ಳುತ್ತದೆ. ಜಾತಿಗಣತಿ ವರದಿ ಕೇವಲ ಜಾತಿಯ ಗಣತಿಗೆ ಮಾತ್ರ ಸೀಮಿತವಾಗಿಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಕಾಂಗ್ರೆಸ್ ಪಕ್ಷ ಕೇವಲ ಅಹಿಂದ ವರ್ಗಗಳನ್ನೇ ಅಷ್ಟೇ ಅಲ್ಲ, ಲಿಂಗಾಯತ ಸೇರಿದಂತೆ ಎಲ್ಲ ವರ್ಗಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪಕ್ಷ ಎಂದರು.ಬಿಜೆಪಿ ನಾಯಕರು ಬರೀ ಸುಳ್ಳು ಹೇಳುತ್ತಾರೆ. ಅವರು ಸುಳ್ಳು ಹೇಳುವುದರಲ್ಲಿ ಎತ್ತಿದ ಕೈ. ಅದರಲ್ಲೂ ಬಿಜೆಪಿಯ ನಳಿನಕುಮಾರ ಕಟೀಲ್ ಸುಳ್ಳು ಹೇಳಿಕೊಂಡೇ ಬಂದಿದ್ದಾರೆ. 1 ರುಪಾಯಿಗೆ 15 ಡಾಲರ್ ಆಗುತ್ತದೆ ಎಂದಿದ್ದವರು ಈಗ ಎಷ್ಟಾಗಿದೆ ಎಂದು ನೋಡಿಕೊಳ್ಳಲಿ ಎಂದರು.ಸಿ.ಟಿ. ರವಿ ಸೇರಿದಂತೆ ಬಿಜೆಪಿ ನಾಯಕರು ಸುಳ್ಳಿನ ಫ್ಯಾಕ್ಟರಿಯನ್ನೇ ಹಾಕಿದ್ದಾರೆ. ಚುನಾವಣೆ ಬಂದಾಗ ಬಿಜೆಪಿಯವರಿಗೆ ಪಾಕಿಸ್ತಾನ ನೆನಪಾಗುತ್ತದೆ. ರಾಜ್ಯದ, ದೇಶದ ಅಭಿವೃದ್ಧಿ ಕುರಿತು ಮಾತನಾಡಿ ಅವರು ಮತ ತೆಗೆದುಕೊಳ್ಳುವುದಿಲ್ಲ. ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದರೆ ಅದು ತಪ್ಪು, ಅದನ್ನು ಯಾರೇ ಮಾಡಿದರೂ ಶಿಕ್ಷೆಗೆ ಒಳಪಡಿಸಲಾಗುವುದು. ಆದರೆ, ಅದರ ಕುರಿತು ಪರಿಶೀಲನೆ ನಡೆಯುತ್ತಿದ್ದರೂ ವಿನಾಕಾರಣ ಗೊಂದಲ ಮಾಡುತ್ತಿದ್ದಾರೆ ಎಂದರು.
ಅದು ಜಾತಿಗಣತಿಯೇ ಅಲ್ಲ: ಸಚಿವ ತಂಗಡಗಿ ಸ್ಪಷ್ಟನೆ- ಜಾತಿ ಮತ್ತು ಜನಗಣತಿ ಮಾಡುವುದಕ್ಕೆ ರಾಜ್ಯ ಸರ್ಕಾರಕ್ಕೆ ಅವಕಾಶವೇ ಇಲ್ಲ. ಮೊಟ್ಟ ಮೊದಲು ಅದು ಜಾತಿ ಗಣತಿಯೇ ಅಲ್ಲ. ಅದು ಇರುವುದು ಸಾಮಾಜಿಕ, ಆರ್ಥಿಕ, ಶಿಕ್ಷಣದ ಸ್ಥಿತಿಗತಿಗಳ ಅಧ್ಯಯನ ವರದಿಯಾಗಿದೆ ಎಂದು ಸಚಿವ ಶಿವರಾಜ ತಂಗಡಗಿ ಸ್ಪಷ್ಟಪಡಿಸಿದರು.ಕನಕಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಯಪ್ರಕಾಶ ಹೆಗ್ಡೆ ಸಲ್ಲಿಸಿದ ವರದಿಯನ್ನು ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ, ವರದಿಯನ್ನು ನನ್ನ ಕೈಯಲ್ಲಿ ಕೊಟ್ಟು, ಜೋಪಾನವಾಗಿಡುವಂತೆ ಹೇಳಿದ್ದಾರೆ. ಅದಿನ್ನು ಸೀಲ್ ಹಾಕಿದ್ದು ಹಾಗೆಯೇ ಇದೆ. ಅದನ್ನು ಓಪನ್ ಮಾಡಿಯೇ ಇಲ್ಲ. ಕ್ಯಾಬಿನೆಟ್ ನಲ್ಲಿಯೇ ಓಪನ್ ಮಾಡಬೇಕು ಎಂದು ಸಿಎಂ ಹೇಳಿದ್ದಾರೆ. ವಿನಾಕಾರಣ ಇಲ್ಲಸಲ್ಲದ ಮಾಹಿತಿ ಹಂಚಿಕೊಂಡು ಗೊಂದಲವನ್ನುಂಟು ಮಾಡುವುದು ಸರಿಯಲ್ಲ ಎಂದಿದ್ದಾರೆ.ಅದು ಜಾತಿಗಣತಿ ಅಲ್ಲವೇ ಅಲ್ಲ ಎಂದು ನಾನು ಸ್ಪಷ್ಟಪಡಿಸುವೆ ಎಂದು ಪುನರುಚ್ಚರಿಸಿದರು. 54 ಕಾಲಂಗಳು ಇವೆ. ಅದರಲ್ಲಿ ಜಾತಿ ನಮೂದಿಸುವುದೂ ಒಂದು ಎಂದಿದ್ದಾರೆ.ಈ ಕುರಿತು ಪರ-ವಿರೋಧ ಸರಿಯಲ್ಲ. ಅದನ್ನು ಓದಿದ ಮೇಲೆ ಆ ಕುರಿತು ಪ್ರತಿಕ್ರಿಯೆ ನೀಡಬೇಕು. ರಾಜ್ಯದಲ್ಲಿ ಶಿಕ್ಷಣ ಪಡೆದವರು ಎಷ್ಟು? ಅವರ ಆರ್ಥಿಕ ಸ್ಥಿತಿಗತಿ ಹೇಗಿದೆ ಎನ್ನುವುದು ಮುಖ್ಯವಾಗುತ್ತದೆ ಎಂದರು.ಯಾರು ಏನಾದರೂ ಹೇಳಲಿ, ಅದನ್ನು ಓದಿದ ಮೇಲೆ ಅಂಕಿ-ಸಂಖ್ಯೆಯ ಮೂಲಕ ನಾನು ವಿವರಣೆ ನೀಡುತ್ತೇನೆ. ನನಗೂ ಅದರಲ್ಲಿ ಏನಿದೆ ಎನ್ನುವುದು ಗೊತ್ತಿಲ್ಲ. ಹಾಗಾಗಿ ಈಗಲೇ ಏನನ್ನೂ ಹೇಳುವುದಿಲ್ಲ ಎಂದು ಸಚಿವ ತಂಗಡಗಿ ಹೇಳಿದರು.