ತುಮಕೂರು: ಜಿಲ್ಲೆಯಲ್ಲಿ ಸುಸೂತ್ರವಾಗಿ ನಡೆದ ಪಿಯು ಪರೀಕ್ಷೆ

| Published : Mar 02 2024, 01:47 AM IST

ಸಾರಾಂಶ

ತುಮಕೂರು ಜಿಲ್ಲೆಯಲ್ಲಿ ಶುಕ್ರವಾರದಿಂದ ದ್ವಿತೀಯ ಪಿಯುಸಿ ಪರೀಕ್ಷೆ ಅರಂಭವಾಗಿದ್ದು, 35 ಪರೀಕ್ಷಾ ಕೇಂದ್ರಗಳಲ್ಲೂ ಪರೀಕ್ಷೆ ಸುಸೂತ್ರವಾಗಿ ನಡೆಯಿತು.

ಕನ್ನಡಪ್ರಭ ವಾರ್ತೆ ತುಮಕೂರು

ಜಿಲ್ಲೆಯಲ್ಲಿ ಶುಕ್ರವಾರದಿಂದ ದ್ವಿತೀಯ ಪಿಯುಸಿ ಪರೀಕ್ಷೆ ಅರಂಭವಾಗಿದ್ದು, 35 ಪರೀಕ್ಷಾ ಕೇಂದ್ರಗಳಲ್ಲೂ ಪರೀಕ್ಷೆ ಸುಸೂತ್ರವಾಗಿ ನಡೆಯಿತು.

ಜಿಲ್ಲೆಯ ತುಮಕೂರು ವಿಭಾಗ ಹಾಗೂ ಮಧುಗಿರಿ ವಿಭಾಗ ಈ ಎರಡು ವಿಭಾಗಗಳಲ್ಲೂ 26,235 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಯಾವುದೇ ರೀತಿಯ ಅಡಚಣೆಗಳಿಲ್ಲದೆ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಸುಲಲಿತವಾಗಿ ನಡೆಯಿತು.

ನಗರದಲ್ಲಿರುವ ಪರೀಕ್ಷಾ ಕೇಂದ್ರಗಳಾದ ಎಂಪ್ರೆಸ್, ಸಿದ್ಧಗಂಗಾ ಮಹಿಳಾ ಪದವಿ ಪೂರ್ವ ಕಾಲೇಜು, ಕಾಳಿದಾಸ ಪ.ಪೂ. ಕಾಲೇಜು ಸೇರಿದಂತೆ ಜಿಲ್ಲೆಯಾದ್ಯಂತ ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು ಪೋಷಕರೊಂದಿಗೆ ಬೆಳಿಗ್ಗೆ 8 ಗಂಟೆಗೆ ಆಗಮಿಸಿ ತಮ್ಮ ನೋಂದಣಿ ಸಂಖ್ಯೆ ಇರುವ ಕೊಠಡಿಗಳ ನಂಬರ್‌ಗಾಗಿ ಮುಗಿ ಬಿದ್ದಿದ್ದ ದೃಶ್ಯಗಳು ಕಂಡು ಬಂದವು.

ಡಿಸಿ ಪರಿಶೀಲನೆ: ದ್ವಿತೀಯ ಪಿಯುಸಿ ಪರೀಕ್ಷಾ ಕೇಂದ್ರಗಳಾದ ಎಂಪ್ರೆಸ್, ಸಿದ್ಧಗಂಗಾ ಮಹಿಳಾ ಪದವಿ ಪೂರ್ವ ಕಾಲೇಜು, ಕಾಳಿದಾಸ ಪ.ಪೂ. ಕಾಲೇಜು ಸೇರಿದಂತೆ ಇನ್ನಿತರ ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಶುಭಕಲ್ಯಾಣ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪರೀಕ್ಷಾ ಕೊಠಡಿಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಕೊಠಡಿಯಲ್ಲಿ ಬೆಳಕಿನ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆಯನ್ನು ಪರಿಶೀಲಿಸಿ, ಪರೀಕ್ಷಾ ಕೇಂದ್ರವೊಂದರಲ್ಲಿ ಬೆಳಕಿನ ವ್ಯವಸ್ಥೆ ಕಡಿಮೆ ಇರುವುದನ್ನು ಗಮನಿಸಿ, ಕೂಡಲೇ ಮುಂದಿನ ಪರೀಕ್ಷೆ ಬೆಳಕಿನ ತೊಂದರೆಯಾಗದಂತೆ ಹೆಚ್ಚಿನ ವೋಲ್ಟೇಜ್‌ ಇರುವ ವಿದ್ಯುತ್ ಬಲ್ಬ್‌ಗಳನ್ನು ಅಳವಡಿಸುವಂತೆ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರಿಗೆ ಸೂಚನೆ ನೀಡಿದರು.

ನಂತರ ಮಾತನಾಡಿದ ಅವರು, 2023-24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಇಂದಿನಿಂದ ಆರಂಭವಾಗಿದ್ದು, ಜಿಲ್ಲೆಯ 35 ಕೇಂದ್ರಗಳಲ್ಲಿ 26 ಸಾವಿರ ಮಕ್ಕಳು ಪರೀಕ್ಷೆ ಬರೆಯುತ್ತಿದ್ದಾರೆ. ಮಕ್ಕಳು ಮತ್ತು ಪೋಷಕರ ಶ್ರಮಕ್ಕೆ ಫಲ ಸಿಗಬೇಕಿದೆ ಎಂದರು.

ಎಲ್‌ಕೆಜಿಯಿಂದ ಪಿಯುಸಿವರೆಗೆ ಮಕ್ಕಳು ಪಟ್ಟಿರುವ ಶ್ರಮಕ್ಕೆ ಈಗ ಮಹತ್ವದ ಘಟ್ಟಕ್ಕೆ ಬಂದಿದೆ. ಎಲ್ಲರೂ ಚೆನ್ನಾಗಿ ಓದಿ ಪರೀಕ್ಷೆ ಬರೆಯಬೇಕು. ಇದು ಕೊನೆಯ ಅವಕಾಶವೇನಲ್ಲ. ಇನ್ನು ಎರಡು ಬಾರಿ ಪರೀಕ್ಷೆ ಬರೆಯುವ ಅವಕಾಶ ಇರುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಹೆದರದೆ, ದೃತಿಗೆಡದೆ ಧೈರ್ಯವಾಗಿ ಪರೀಕ್ಷೆ ಬರೆಯಬೇಕು ಎಂದರು.

ಪರೀಕ್ಷೆಗಳಲ್ಲಿ ಒಂದು ವೇಳೆ ಅನುತ್ತೀರ್ಣರಾದರೆ ಮಕ್ಕಳು ಆತ್ಮಹತ್ಯೆಯಂತಹ ಯೋಚನೆ ಮಾಡಬಾರದು. ಮತ್ತೆ ಪರೀಕ್ಷೆ ಬರೆದು ಮುಂದಿನ ವ್ಯಾಸಂಗ ಮಾಡುವತ್ತ ಗಮನ ಹರಿಸಬೇಕು. ಪರಿಶ್ರಮದಿಂದ ಪ್ರಯತ್ನಪಟ್ಟರೆ ಫಲ ಸಿಕ್ಕೇ ಸಿಗುತ್ತದೆ. ಧೈರ್ಯವಾಗಿ ಪರೀಕ್ಷೆ ಬರೆಯಿರಿ ಎಂದು ಶುಭ ಹಾರೈಸಿದರು.

1069 ಮಂದಿ ಗೈರು: ಶುಕ್ರವಾರ ನಡೆದ ದ್ವಿತೀಯ ಪಿಯುಸಿ ಕನ್ನಡ ಪರೀಕ್ಷೆಗೆ ಜಿಲ್ಲೆಯಲ್ಲಿ 21130 ಮಂದಿ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಈ ಪೈಕಿ 22063 ವಿದ್ಯಾರ್ಥಿಗಳು ಹಾಜರಾಗಿ ಪರೀಕ್ಷೆ ಬರೆದಿದ್ದಾರೆ. ಉಳಿದ 1069 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗದೆ ಗೈರಾಗಿದ್ದಾರೆ ಎಂದು ಪ.ಪೂ. ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಂಗಾಧರ್‌ ತಿಳಿಸಿದ್ದಾರೆ.

ಇಂದಿನಿಂದ ಆರಂಭವಾಗಿರುವ ಪರೀಕ್ಷೆ ಮಾ. 22 ರವರಗೆಗೆ ನಡೆಯಲಿದ್ದು, ಪರೀಕ್ಷೆಯಲ್ಲಿ ಯಾವುದೇ ಅಕ್ರಮಗಳು ನಡೆಯದಂತೆ ಪರೀಕ್ಷಾ ಕೇಂದ್ರಗಳ ಸುತ್ತ 144 ರ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ.