ಸಾರಾಂಶ
ಹಾವೇರಿ: ನಮ್ಮ ಸರ್ಕಾರ ಜನತೆಗೆ ನೀಡಿದ ಭರವಸೆಯಂತೆ ಐದು ಗ್ಯಾರಂಟಿ ಯೋಜನೆ ಜಾರಿಗೊಳಿಸಿದ್ದೇವೆ. ಈ ಯೋಜನೆಗಳಿಗಾಗಿ ₹೫೯ ಸಾವಿರ ಕೋಟಿ ವೆಚ್ಚ ಮಾಡಲಾಗುತ್ತಿದೆ. ಐದು ಗ್ಯಾರಂಟಿ ಯೋಜನೆಗಳ ಮೂಲಕ ಪ್ರತಿ ಕುಟುಂಬಕ್ಕೆ ತಿಂಗಳಿಗೆ ಐದು ಸಾವಿರ ಆರ್ಥಿಕ ನೆರವು ದೊರೆಯುತ್ತಿದೆ. ಜನರು ಈ ಯೋಜನೆಗಳ ಲಾಭವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ವಿಧಾನಸಭಾ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.
ನಗರದ ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಜಿಲ್ಲಾಡಳಿತ,ತಾಲೂಕಾಡಳಿತ ಹಾಗೂ ಹಾವೇರಿ ನಗರಸಭೆ ಸಹಯೋಗದಲ್ಲಿ ಆಯೋಜಿಸಲಾದ ಹಾವೇರಿ ಹೋಬಳಿ ಮಟ್ಟದ ಗ್ಯಾರಂಟಿ ಯೋಜನೆಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವುದಿಲ್ಲ, ಸುಳ್ಳು ಭರವಸೆ ನೀಡುತ್ತಿದ್ದಾರೆ ಎಂದು ವಿರೋಧಪಕ್ಷದವರು ಟೀಕಿಸಿದ್ದರು. ಐದು ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಮೂಲಕ ಅವರಿಗೆ ತಕ್ಕ ಉತ್ತರ ನೀಡಲಾಗಿದೆ. ಜತೆಗೆ ಅಭಿವೃದ್ಧಿ ಕಾರ್ಯ ಮಾಡಲಾಗುತ್ತಿದೆ. ಸಾರ್ವಜನಿಕರು ಈ ಐದು ಗ್ಯಾರಂಟಿ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಹಾಗೂ ಮುಂಬರುವ ದಿನಗಳಲ್ಲಿ ನಮಗೆ ಆಶೀರ್ವಾದ ಮಾಡಬೇಕು ಎಂದು ಹೇಳಿದರು.ಕುಡಿಯುವ ನೀರಿಗೆ ₹೧೪೧ ಕೋಟಿ: ಹಾವೇರಿ ನಗರದ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ವಿಶೇಷವಾಗಿ ಅಮೃತ ಯೋಜನೆಯಡಿ ₹೧೪೧ ಕೋಟಿ, ಪೊಲೀಸ್ ವಸತಿ ಗೃಹಗಳ ಡ್ರ್ಯಾನೇಜ್ ನೀರು ಯುಜಿಡಿಗೆ ಒಳಪಡಿಸಲು ₹೧೦ ಕೋಟಿ ಮಂಜೂರು ಮಾಡಲಾಗಿದೆ.ಹೆಗ್ಗೇರಿ ಕೆರೆ ನೀರು ತುಂಬಿಸುವ ಮೂಲಕ ಬರುವ ದಿನಗಳಲ್ಲಿ ಕುಡಿಯುವ ನೀರಿನ ಕಾಮಗಾರಿಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ಹಾವೇರಿ ನಗರಕ್ಕೆ ನಿರಂತರ ನೀರು ಕೊಡಲಾಗುವುದು. ನಗರ ರಸ್ತೆ ನಿರ್ಮಾಣಕ್ಕೆ ₹೧೯ ಕೋಟಿ ಮಂಜೂರು ಮಾಡಲಾಗಿದೆ. ಸುಂದರ ಹಾಗೂ ಸಮೃದ್ಧ ಹಾವೇರಿ ನಿರ್ಮಾಣ ಮಾಡೋಣ ಎಂದು ಹೇಳಿದರು.
ಶೀಘ್ರ ಮೆಡಿಕಲ್ ಕಾಲೇಜ್: ಹಾವೇರಿಗೆ ಅವಶ್ಯಕವಾದ ಎಂ.ಐ.ಆರ್. ಸ್ಕ್ಯಾನಿಂಗ್ ಯಂತ್ರ ಶೀಘ್ರದಲ್ಲೇ ಮಂಜೂರಾಗಲಿದೆ. ಆದಷ್ಟು ಶೀಘ್ರ ವೈದ್ಯಕೀಯ ಕಾಲೇಜು ಉದ್ಘಾಟನೆಗೊಳ್ಳಲಿದೆ. ಜಿಲ್ಲಾ ಸ್ಪತ್ರೆ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದೆ. ವಸತಿ ಯೋಜನೆಯಡಿ ೧,೧೧೧ ಮನೆಗಳು ಮಂಜೂರಾಗಿದ್ದು, ಲಕಮಾಪೂರ ಹಾಗೂ ಮುಲ್ಲಾನ ಕೆರೆ ದಂಡೆ ಮೇಲೆ ಅಕ್ರಮವಾಗಿ ಮನೆ ನಿರ್ಮಾಣ ಮಾಡಿಕೊಂಡ ಹಾಗೂ ದೊಡ್ಡಿಯಲ್ಲಿ ವಾಸವಿರುವ ಜನರಿಗೂ ಸಹ ಈ ಮನೆಗಳನ್ನು ನೀಡಲಾಗುವುದು. ಫಲಾನುಭವಿಗಳು ಒಂದು ಲಕ್ಷ ನೀಡಬೇಕು, ಉಳಿದ ಹಣ ಸರ್ಕಾರ ಭರಿಸಲಿದೆ ಎಂದರು.ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ ಮಾತನಾಡಿ, ಚುನಾವಣೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಿದ್ದು, ದೇಶದಲ್ಲೇ ಮೊದಲು ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ. ಬಡವ-ಬಲ್ಲಿದ ಎನ್ನದೇ ಎಲ್ಲ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಎಲ್ಲರಿಗೂ ಸಮಾನ ಅವಕಾಶ ನೀಡಲಾಗುತ್ತಿದೆ. ನಿಮ್ಮ ಋಣ ತಿರಿದ್ದೇವೆ, ನಿಮ್ಮ ಆಶೀರ್ವಾದ ಸದಾ ನಮ್ಮ ಮೇಲೆ ಇರಲಿ ಎಂದರು.
ತಹಸೀಲ್ದಾರ ನಾಗರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯರಾದ ರೇಣುಕಾ ಪುತ್ರನ್, ಪೂಜಾ ಹಿರೇಮಠ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದರ್ತಿ, ನಗರಸಭೆ ಪೌರಾಯುಕ್ತ ಪರಶುರಾಮ ಚಲವಾದಿ, ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರಭಾಕರ ಕುಂದೂರ, ಎಂ.ಎಂ. ಮೈದೂರ, ಎಸ್.ಎಫ್.ಎನ್. ಗಾಜೀಗೌಡ್ರ, ಪಿ.ಬಿ.ಕುರುವತ್ತಿಗೌಡ್ರ ಇತರರು ಉಪಸ್ಥಿತರಿದ್ದರು.ನಗರಸಭೆಯ ಶೋಭಾ ಸ್ವಾಗತಿಸಿದರು. ಶಿಕ್ಷಕಿ ಜಯಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು.