ಹಿರಿಯ ಪತ್ರಕರ್ತ, ನಿರೂಪಕ ಮನೋಹರ ಪ್ರಸಾದ್‌ ಇನ್ನಿಲ್ಲ

| Published : Mar 02 2024, 01:47 AM IST / Updated: Mar 02 2024, 03:02 PM IST

ಹಿರಿಯ ಪತ್ರಕರ್ತ, ನಿರೂಪಕ ಮನೋಹರ ಪ್ರಸಾದ್‌ ಇನ್ನಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಅಹಂ ಇಲ್ಲದೆ ಎಲ್ಲರೊಂದಿಗೆ ಬೆರೆಯುತ್ತಿದ್ದ ಮನೋಹರ ಪ್ರಸಾದ್‌ಗೆ ಅಗಾಧ ನೆನಪಿನ ಶಕ್ತಿ ವಿಶೇಷವಾಗಿತ್ತು. 30 ವರ್ಷಗಳ ಹಿಂದಿನ ಘಟನೆಯನ್ನು ಇಸವಿ, ದಿನಾಂಕ ಸಹಿತ ಸಚಿತ್ರವೆಂಬಂತೆ ಮುಂದಿಡುತ್ತಿದ್ದರು. ಗಡಸು ಧ್ವನಿ, ಕನ್ನಡ, ತುಳು ಹಾಗೂ ಇಂಗ್ಲಿಷ್‌ ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುವ ಛಾತಿ ಇವರದ್ದು.

ಕನ್ನಡಪ್ರಭ ವಾರ್ತೆ ಮಂಗಳೂರು

ಕಾರ್ಯಕ್ರಮ ನಿರೂಪಕ, ತಾಳಮದ್ದಳೆ ಅರ್ಥಧಾರಿ, ಕತೆ- ಕಾದಂಬರಿಕಾರನಾಗಿ ಗುರುತಿಸಿಕೊಂಡಿದ್ದ ಹಿರಿಯ ಪತ್ರಕರ್ತ ಮನೋಹರ್​ ಪ್ರಸಾದ್(65)​ ಶುಕ್ರವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ.ಅನಾರೋಗ್ಯದಿಂದ ಬಳಲುತ್ತಿದ್ದ ಇವರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದರು. 

ಮನೋಹರ ಪ್ರಸಾದ್‌ಗೆ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ವಿವಿಧ ಪ್ರಶಸ್ತಿ ಪುರಸ್ಕಾರಗಳು ಲಭಿಸಿತ್ತು. ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕರ್ವಾಲು ಗ್ರಾಮದ ಮನೋಹರ ಪ್ರಸಾದ್‌ ಅವರು ಮಂಗಳೂರಿನಲ್ಲಿ ಪಿಯು, ಪದವಿ ಶಿಕ್ಷಣ ಪೂರೈಸಿದ್ದರು. 

ನವಭಾರತ ಪತ್ರಿಕೆಯಲ್ಲಿ ವರದಿಗಾರನಾಗಿ ಪತ್ರಿಕಾ ಮಾಧ್ಯಮಕ್ಕೆ ಕಾಲಿರಿಸಿದ ಇವರು 1984ರಲ್ಲಿ ಉದಯವಾಣಿಯ ಮಂಗಳೂರು ವರದಿಗಾರರಾಗಿ, ಆ ಬಳಿಕ ಪ್ರಧಾನ ವರದಿಗಾರರಾಗಿ, ಸುದ್ದಿ ವಿಭಾಗ ಮುಖ್ಯಸ್ಥರಾಗಿ, ಸಹಾಯಕ ಸಂಪಾದಕರಾಗಿ ಕಾರ್ಯ ನಿರ್ವಹಿಸಿದರು. 

ಸುಮಾರು 36 ವರ್ಷಗಳ ಕಾಲ ಉದಯವಾಣಿ ಪತ್ರಿಕೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ, 2020ರಲ್ಲಿ ನಿವೃತ್ತಿ ಹೊಂದಿದ್ದರು. ಸುಮಾರು 608 ಸಂಶೋಧನ ಲೇಖನಗಳನ್ನು ಬರೆದು ಪ್ರಕಟಿಸಿದ್ದಾರೆ. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಸುದೀರ್ಘ ಕಾಲ ಕಾರ್ಯ ನಿರ್ವಹಿಸಿದ್ದರು.

ಅವಿವಾಹಿತರಾಗಿದ್ದ ಇವರು ಮಂಗಳೂರಿನ ಮಲ್ಲಿಕಟ್ಟೆಯಲ್ಲಿ ಒಂಟಿ ಜೀವನ ನಡೆಸುತ್ತಿದ್ದರು. ದಬಕ್‌ ದಬಾ ಐಸಾ, ಐಸ್‌ಕ್ರೀಂ ತುಳು, ಬೋಗಾಣೆ ಕೊಂಕಣಿ, ಸೀತಾನದಿ ಕನ್ನಡ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. 

ಮೂರು ಸಾವಿರಕ್ಕೂ ಅಧಿಕ ಕಾರ್ಯಕ್ರಮಗಳಲ್ಲಿ ನಿರೂಪಣೆ, ತಾಳಮದ್ದಳೆ ಅರ್ಥಗಾರಿಕೆ, ಕ್ರಿಕೆಟ್‌ ಆಟಗಾರನಾಗಿ, ಕ್ರಿಕೆಟ್ ವೀಕ್ಷಕ ವಿವರಣೆಕಾರನಾಗಿ, ಕತೆ-ಕಾದಂಬರಿಕಾರ, ಅಂಕಣಕಾರ ಹೀಗೆ ವಿವಿಧ ಮಜಲುಗಳಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ. ಇವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಅರಸಿ ಬಂದಿತ್ತು.

 2015ರಲ್ಲಿ ಮಂಗಳೂರು ವಿವಿ ಹಳೆ ವಿದ್ಯಾರ್ಥಿ ಸಂಘಟನೆ(ಮಾಮ್‌) ಮಂಗಳ ಗಂಗೋತ್ರಿಯಲ್ಲಿ ಮನೋಭಿನಂದನೆ ಕಾರ್ಯಕ್ರಮ ಏರ್ಪಡಿಸಿ ಅಭಿನಂದನಾ ಗ್ರಂಥ ಹೊರತರಲಾಗಿತ್ತು. ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಸಂಘದಿಂದ ಬ್ರಹ್ಮೈಕ್ಯ ಎಡನೀರು ಕೇಶವಾನಂದ ಭಾರತಿ ಸ್ವಾಮೀಜಿ ಸ್ಮಾರಕ ದತ್ತಿನಿಧಿ ಪ್ರಶಸ್ತಿ ಲಭಿಸಿತ್ತು.

ಅಗಾಧ ನೆನಪಿನ ಶಕ್ತಿ: ಅಹಂ ಇಲ್ಲದೆ ಎಲ್ಲರೊಂದಿಗೆ ಬೆರೆಯುತ್ತಿದ್ದ ಮನೋಹರ ಪ್ರಸಾದ್‌ಗೆ ಅಗಾಧ ನೆನಪಿನ ಶಕ್ತಿ ವಿಶೇಷವಾಗಿತ್ತು. 30 ವರ್ಷಗಳ ಹಿಂದಿನ ಘಟನೆಯನ್ನು ಇಸವಿ, ದಿನಾಂಕ ಸಹಿತ ಸಚಿತ್ರವೆಂಬಂತೆ ಮುಂದಿಡುತ್ತಿದ್ದರು. ಗಡಸು ಧ್ವನಿ, ಕನ್ನಡ, ತುಳು ಹಾಗೂ ಇಂಗ್ಲಿಷ್‌ ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುವ ಛಾತಿ ಇವರದ್ದು. 

ಪ್ರೆಸ್‌ಕ್ಲಬ್‌ನಲ್ಲಿ ಅಂತಿಮ ದರ್ಶನ: ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದ ಮನೋಹರ ಪ್ರಸಾದ್‌ ಅವರ ಪಾರ್ಥೀವ ಶರೀರವನ್ನು ಸಂಜೆ ಲೇಡಿಹಿಲ್‌ನಲ್ಲಿ ಪ್ರೆಸ್‌ಕ್ಲಬ್‌ಗೆ ತರಲಾಯಿತು. ಅಲ್ಲಿ ಸುಮಾರು ಒಂದು ಗಂಟೆಗೂ ಅಧಿಕ ಕಾಲ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಈ ಸಂದರ್ಭ ಸಂಸದ ನಳಿನ್‌ ಕುಮಾರ್‌ ಕಟೀಲ್‌, ಮೇಯರ್‌ ಸುಧೀರ್‌ ಶೆಟ್ಟಿ, ವಿಧಾನ ಪರಿಷತ್‌ ಸದಸ್ಯ ಹರೀಶ್‌ ಕುಮಾರ್‌, ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ, ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ, ಮಾಜಿ ಶಾಸಕ ಐವನ್ ಡಿಸೋಜಾ ಸೇರಿದಂತೆ ರಾಜಕೀಯ ಮುಖಂಡರು, ಪತ್ರಕರ್ತರು, ಸಂಘಸಂಸ್ಥೆ ಪದಾಧಿಕಾರಿಗಳು, ಸರ್ಕಾರಿ ಅಧಿಕಾರಿಗಳು ಆಗಮಿಸಿ ಅಂತಿಮ ನಮನ ಸಲ್ಲಿಸಿದರು. 

ಗಣ್ಯರ ಸಂತಾಪ: ಮನೋಹರ ಪ್ರಸಾದ್‌ ನಿಧನಕ್ಕೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌, ಶಾಸಕರಾದ ವೇದವ್ಯಾಸ್‌ ಕಾಮತ್‌, ಡಾ.ಭರತ್‌ ಶೆಟ್ಟಿ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಕನ್ನಡ ಸಾಹಿತ್ಯ ಪರಿಷತ್‌ ದ.ಕ. ಜಿಲ್ಲಾಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್‌, ಮಾಜಿ ಜಿಲ್ಲಾಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ, ಮಂಜೇಶ್ವರ ಪ್ರೆಸ್‌ಕ್ಲಬ್‌, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಮುಂತಾದವರು ಸಂತಾಪ ಸೂಚಿಸಿದ್ದಾರೆ.

ಡಾ.ಹೆಗ್ಗಡೆ ಸಂತಾಪ: ಹಿರಿಯ ಪತ್ರಕರ್ತರಾದ ಮನೋಹರ ಪ್ರಸಾದ್‌ ನಿಧನಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಾ.ವೀರೇಂದ್ರ ಹೆಗ್ಗಡೆ ಸಂತಾಪ ಸೂಚಿಸಿದ್ದರು.

ಅನುಭವಿ ಪತ್ರಕರ್ತ, ಉತ್ತಮ ವಾಗ್ಮಿ, ಚಿಂತಕ ಹಾಗೂ ಆದರ್ಶ ಕಾರ್ಯಕ್ರಮ ನಿರ್ವಾಹಕ, ಸಹೃದಯಿಯಾದ ಅವರು ನಮ್ಮ ಕ್ಷೇತ್ರದ ಅಪಾರ ಅಭಿಮಾನಿಯೂ, ಭಕ್ತರೂ ಆಗಿದ್ದರು. ಅವರ ಲೇಖನಗಳು ಅಧಿಕೃತ ಮಾಹಿತಿಯ ಕಣಜವಾಗಿದ್ದು, ಕುತೂಹಲದಿಂದ ಓದಿಸಿಕೊಂಡು ಹೋಗುತ್ತವೆ. 

ಅವರ ನಿಧನ ಪತ್ರಿಕಾರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ, ಅವರ ಅಗಲುವಿಕೆಯಿಂದ ಕುಟುಂಬ ವರ್ಗದವರಿಗೆ ಉಂಟಾದ ದುಃಖವನ್ನು ಸಹಿಸುವ ಶಕ್ತಿ-ತಾಳ್ಮೆಯನ್ನಿತ್ತು ಶ್ರೀ ಮಂಜುನಾಥ ಸ್ವಾಮಿ ಹರಸಲೆಂದು ಪ್ರಾರ್ಥಿಸುತ್ತೇನೆ ಎಂದು ಸಂತಾಪ ಸೂಚಕದಲ್ಲಿ ತಿಳಿಸಿದ್ದಾರೆ.