ಸಾರಾಂಶ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಆಡಳಿತ ಪರವಾದ ಅಲೆ ದೇಶದಲ್ಲಿದ್ದು, ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬ ಕೂಗು ಕೇಳುತ್ತಿರುವುದರಿಂದ ಕೇಂದ್ರದಲ್ಲಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ. ಇದನ್ನು ಯಾರು ತಡೆಯಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.ಪಟ್ಟಣದ ರೋಟರಿ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಇದು ದೇಶದ ಭವಿಷ್ಯ ರೂಪಿಸುವ ಚುನಾವಣೆ. ವಿಶ್ವದ ಗಮನ ಸೆಳೆದಿರುವ ಮಹಾಚುನಾವಣೆ. ದೇಶದಲ್ಲಿ ಮೋದಿ ಮತ್ತೊಮ್ಮೆ ಎಂಬ ಕೂಗು ಕೇಳುತ್ತಿದ್ದೇವೆ. ಬಿಜೆಪಿ ಮತ್ತು ಎನ್‌ಡಿಎ ಮೈತ್ರಿ ಕೂಟದ ಆಡಳಿತ ವೈಖರಿ, ನುಡಿದಂತೆ ನಡೆದಿರುವ ಪ್ರಧಾನಮಂತ್ರಿ ಮತ್ತೆ ಆ ಸ್ಥಾನದಲ್ಲಿ ಕೂರಬೇಕು ಎಂಬುದು ದೇಶದ ಜನರ ಬಯಕೆಯಾಗಿದೆ ಎಂದು ತಿಳಿಸಿದರು.
೨೦೪೭ ಸ್ವಾತಂತ್ರ್ಯದ ೧೦೦ ವರ್ಷದ ಸಂಭ್ರಮದ ಹೊತ್ತಿಗೆ ದೇಶ ಅಭಿವೃದ್ಧಿ ಹೊಂದಿದ ದೇಶವಾಗಬೇಕು ಎಂಬುದು ಅವರ ಸಂಕಲ್ಪವಾಗಿದೆ. ರಾಜ್ಯದಲ್ಲಿ ಜೆಡಿಎಸ್ ಪಕ್ಷದೊಂದಿಗೆ ಒಗ್ಗಟ್ಟಾಗಿ ಚುನಾವಣೆ ಎದುರಿಸುತ್ತಿದ್ದೇವೆ. ದೇವೇಗೌಡರು ನರೇಂದ್ರ ಮೋದಿ ಅವರ ದೂರದೃಷ್ಟಿ, ಅಭಿವೃದ್ಧಿಗಾಗಿ ನರೇಂದ್ರ ಮೋದಿಯವರನ್ನು ಬೆಂಬಲಿಸಿದ್ದಾರೆ. ಇದರಲ್ಲಿ ಯಾವುದೇ ಸ್ವಾರ್ಥ ಇಲ್ಲ, ಸಹಜವಾಗಿಯೇ ರಾಜ್ಯದಲ್ಲಿ ಜನ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯನ್ನು ಒಪ್ಪಿಕೊಂಡಿದ್ದಾರೆ ಎಂದರು. ಕಾಂಗ್ರೆಸ್ ಪಕ್ಷ ಅಧಿಕಾರದ ಅಮಲಿನಲ್ಲಿತ್ತು ಸರ್ಕಾರಕ್ಕೆ ಈಗ ಅರಿವಾಗುತ್ತಿದೆ. ಗ್ಯಾರಂಟಿಗಳ ಬಗ್ಗೆ ನಮ್ಮ ತಕರಾರಿಲ್ಲ, ನೈಜ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕಿದೆ. ಕಿಸಾನ್ ಸಮ್ಮಾನ್ ಯೋಜನೆಯ ರಾಜ್ಯ ಸರಕಾರದ ಪಾಲು ನಾಲ್ಕು ಸಾವಿರ ನಿಲ್ಲಿಸಿದರು, ಬೊಮ್ಮಾಯಿಯವರ ಸರಕಾರ ಜಾರಿಗೆ ತಂದಿದ್ದ ರೈತರ ಮಕ್ಕಳಿಗೆ ಅನುಕೂಲ ಕಲ್ಪಿಸುವ ವಿದ್ಯಾಸಿರಿ ಯೋಜನೆಯನ್ನು ನಿಲ್ಲಿಸಿದರು. ಹಾಲಿನ ಬೆಲೆ ಏರಿಕೆಮಾಡಿದ್ದರು. ಅದು ರೈತರಿಗೆ ಅನುಕೂಲವಾಗುತ್ತಿಲ್ಲ, ಹಾಲಿನ ಪ್ರೋತ್ಸಾಹ ಧನ ೬೮೦ ಕೋಟಿ ಬಾಕಿ ಉಳಿಸಿಕೊಂಡಿದ್ದಾರೆ. ಶಾಲಾ ಮಕ್ಕಳ ವಿದ್ಯಾರ್ಥಿ ವೇತನ ತಡೆ ಮಾಡಿದ್ದಾರೆ. ವಿವಿಧ ಸಮುದಾಯಗಳ ಅಭಿವೃದ್ಧಿ ನಿಗಮಕ್ಕೆ ಅನುದಾನ ದ್ವಿಗುಣ ಮಾಡುವ ಬದಲು ಕಡಿತಗೊಳಿಸಿದ್ದಾರೆ. ನೋಂದಣಿ ಶುಲ್ಕ ಶೇ ೩೦ ರಷ್ಟು ಜಾಸ್ತಿ ಮಾಡಿದ್ದಾರೆ. ವಿದ್ಯುತ್ ಹಾಗೂ ಬಸ್ ಟಿಕೆಟ್ ದರ ಹೆಚ್ಚಳವಾಗಿದೆ. ಗ್ಯಾರಂಟಿ ಯೋಜನೆಗಾಗಿ ಪರಿಶಿಷ್ಟ ಜಾತಿ ಮತ್ತು ವರ್ಗಗಳಿಗೆ ಮೀಸಲಾದ ೨೪ಸಾವಿರ ಕೋಟಿ ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಿದರು. ೨.೩೬ ಲಕ್ಷ ಕೋಟಿ ಕೊಟ್ಟಿರುವುದು, ಪ್ರಧಾನ ಮಂತ್ರಿ ಅವಾಜ್ ಯೋಜನೆಯಡಿ ೪.೪೮ ಲಕ್ಷ ಮನೆಗಳನ್ನು ಬಡವರಿಗೆ ಕಟ್ಟಿಕೊಡಲಾಗಿದೆ. ಜಲಜೀವನ್ ಮಿಷನ್ ೧.೧೭ಕೋಟಿ ಮನೆಗಳಿಗೆ, ರಾಜ್ಯದಲ್ಲಿ ೭೪ ಲಕ್ಷ ಮನೆಗಳಿಗೆ ಒದಗಿಸಲಾಗಿದೆ. ಉಜ್ವಲ ಯೋಜನೆಯಡಿ ೩೭.೫ಲಕ್ಷ ಉಚಿತ ಎಲ್‌ಪಿಜಿ ಸಂಪರ್ಕ ಕೊಟ್ಟಿದ್ದಾರೆ. ಮುದ್ರಾ ಯೊಜನೆಯಡಿ ಸಾಲ, ಸ್ವನಿಧಿ ಯೋಜನೆಗಳು, ೪ ಲಕ್ಷ ಬೀದಿ ಬದಿ ವ್ಯಾಪಾರಿಗಳಿಗೆ ಸಾಲ, ಕೇಂದ್ರ ಸರಕಾರ ಹತ್ತು ಹಲವಾರು ಯೋಜನೆಗಳನ್ನು ಕೊಟ್ಟಿರುವುದು ಜನರಿಗೆ ತಲುಪಿದೆ. ಫಲಾನುಭವಿಗಳನ್ನು ಭೇಟಿ ಮಾಡಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬಿಜೆಪಿ ಅಭ್ಯರ್ಥಿಗೆ ಮತ ಹಾಕುವಂತೆ ಮನವಿ ಮಾಡಿದರು. ಚಾಮರಾಜನಗರ ಕ್ಷೇತ್ರದಿಂದ ಸಜ್ಜನ ರಾಜಕಾರಣಿ ಮಾಜಿ ಶಾಸಕ ಎಸ್.ಬಾಲರಾಜ್‌ರನ್ನು ಅಖಾಡಕ್ಕೆ ಇಳಿಸಿದ್ದೇವೆ. ಕೈ ಅಭ್ಯರ್ಥಿ ಬಗ್ಗೆ ಯಾವ ರೀತಿ ಜನಾಭಿಪ್ರಾಯ ಇದೆ ಎಂಬುದು ನಿಮಗೆ ಗೊತ್ತು, ಐಎನ್‌ಡಿಎ ಕೂಟದಿಂದ ದೇಶಕ್ಕೆ ಮಾರಕವೇ ಹೊರತು ಅಭಿವೃದ್ಧಿ ಕಾಣಲು ಸಾಧ್ಯವಿಲ್ಲ. ಹಣ, ಹೆಂಡ ಅಧಿಕಾರದ ಅಮಲಿನಲ್ಲಿರುವ ಕಾಂಗ್ರೆಸ್ ಸರ್ಕಾರಕ್ಕೆ ಮಾರುಹೋಗದೆ ಬಿಜೆಪಿ ಅಭ್ಯರ್ಥಿ ಗೆಲ್ಲಿಸಿ ಎಂದರು. ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್, ಅಭ್ಯರ್ಥಿ ಎಸ್.ಬಾಲರಾಜ್, ಜಿಲ್ಲಾಧ್ಯಕ್ಷ ನಿರಂಜನ್ ಕುಮಾರ್, ಪ್ರೊ. ಕೆ.ಆರ್. ಮಲ್ಲಿಕಾರ್ಜುನಪ್ಪ, ಹನೂರು ಕ್ಷೇತ್ರದ ಶಾಸಕ ಎಂ.ಆರ್.ಮಂಜುನಾಥ್ , ನೂರೊಂದ ಶೆಟ್ಟಿ ಮುಂತಾದವರಿದ್ದರು.ಬಾಲರಾಜು ಪರ ವಿಜಯೇಂದ್ರ ರೋಡ್ ಶೋಕೊಳ್ಳೇಗಾಲ: ಎನ್‌ಡಿಎ ಅಭ್ಯರ್ಥಿ ಎಸ್. ಬಾಲರಾಜ್ ಪರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬಿರು ಬಿಸಿಲಿನ ನಡುವೆಯು ರೋಡ್ ಶೋ ನಡೆಸಿ ಮತಯಾಚನೆ ಮಾಡಿದರು. ಪಟ್ಟಣದ ದೇವಲ ಮಹರ್ಷಿ ಮಹಾದ್ವಾರದ ಬಳಿ ಬಂದು ದೇವರ ದಾಸಿಮಯ್ಯ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಿದ್ದಗೊಂಡ ತೆರೆದ ವಾಹನದಲ್ಲಿ ಪಟ್ಟಣದ ಡಾ.ವಿಷ್ಣುವರ್ಧನ್ ರಸ್ತೆ, ಡಾ.ರಾಜ್ ಕುಮಾರ್ ರಸ್ತೆ, ಅಂಬೇಡ್ಕರ್ ರಸ್ತೆ ಮೂಲಕ ಸಾಗಿ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಬಳಕ ಜನರನ್ನುದ್ಧೆಶಿಸಿ ಮಾತನಾಡಿ ಬಾಲರಾಜ್‌ಗೆ ಮತ ನೀಡುವ ಮೂಲಕ ಮತ್ತೊಮ್ಮೆ ಪ್ರಧಾನಿ ಮಾಡುವಂತೆ ಮನವಿ ಮಾಡಿದರು. ದೇವಲ ಮಹರ್ಷಿ ವೃತ್ತದ ಬಳಿ ಬಿಜೆಪಿ ಮುಖಂಡರು, ಕಾರ್ಯಕರ್ತರು ವಿಜಯೇಂದ್ರರವರನ್ನು ಅದ್ದೂರಿಯಾಗಿ ಸ್ವಾಗತಿಸಿ ಜೈಕಾರ ಮೊಳಗಿಸಿದರು. ಎಸ್‌ಬಿಎಂವರ ರಸ್ತೆಯಲ್ಲಿ ಜನ ನಿಂತು ರೋಡ್ ಶೋ ವೀಕ್ಷಿಸಿದರು. ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್, ಮಹೇಶ್, ಅಭ್ಯರ್ಥಿ ಎಸ್.ಬಾಲರಾಜ್, ಜಿಲ್ಲಾಧ್ಯಕ್ಷ ನಿರಂಜನ್ ಕುಮಾರ್, ಪ್ರೊ. ಕೆ.ಆರ್. ಮಲ್ಲಿಕಾಜುನಪ್ಪ, ಹನೂರು ಕ್ಷೇತ್ರದ ಶಾಸಕ ಎಂ.ಆರ್.ಮಂಜುನಾಥ್, ನೂರೊಂದು ಶೆಟ್ಟಿ, ಟೌನ್ ಅಧ್ಯಕ್ಷ ಪರಮೇಶ್ವರಯ್ಯ, ನಗರಸಭಾ ಸದಸ್ಯ ಚಿಂತೂ ಪರಮೇಶ್, ಬೂದಿತಿಟ್ಟು ಶಿವಕುಮಾರ್, ಅಚ್ಗಾಳ್ ಮಹದೇವಸ್ವಾಮಿ, ಸೋಮಣ್ಣ, ಮಧುಚಂದ್ರ, ಮುಡಿಗುಂಡ ಸುಂದ್ರಪ್ಪ, ಮುಂತಾದವರಿದ್ದರು.