ದಾವಣಗೆರೆಯಲ್ಲಿ ಮತ್ತೆ ಕಮಲ ಅರಳೋದು ನಿಶ್ಚಿತ: ಗಾಯತ್ರಿ

| Published : May 08 2024, 01:00 AM IST

ಸಾರಾಂಶ

ಲೋಕಸಭಾ ಕ್ಷೇತ್ರಾದ್ಯಂತ ನಮಗೆ ಉತ್ತಮ ವಾತಾವರಣ ಇದ್ದು, ನಾವು ಗೆದ್ದೇ ಗೆಲ್ಲುವ ವಿಶ್ವಾಸವಿದೆ. ದಾವಣಗೆರೆಯಲ್ಲಿ ಮತ್ತೆ ಬಿಜೆಪಿ ಗೆಲುವು ನಿಶ್ಚಿತ ಎಂದು ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

- 6 ಸಲ ನಮ್ಮ ಕುಟುಂಬಕ್ಕೆ ಆಶೀರ್ವದಿಸಿದ ಮತದಾರರು ಗಾಯತ್ರಿಯನ್ನೂ ಬೆಂಬಲಿಸ್ತಾರೆ: ಸಿದ್ಧೇಶ್ವರ - ಕ್ಷೇತ್ರದಲ್ಲಿ ಕಾಂಗ್ರೆಸ್ಸಿನವರು ಹಣದ ಹೊಳೆಯನ್ನೇ ಹರಿಸಿದ್ದಾರೆ, ಸಂಸದ ವಾಗ್ದಾಳಿ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ ಲೋಕಸಭಾ ಕ್ಷೇತ್ರಾದ್ಯಂತ ನಮಗೆ ಉತ್ತಮ ವಾತಾವರಣ ಇದ್ದು, ನಾವು ಗೆದ್ದೇ ಗೆಲ್ಲುವ ವಿಶ್ವಾಸವಿದೆ. ದಾವಣಗೆರೆಯಲ್ಲಿ ಮತ್ತೆ ಬಿಜೆಪಿ ಗೆಲುವು ನಿಶ್ಚಿತ ಎಂದು ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ತರಳಬಾಳು ಬಡಾವಣೆಯ ಮಾಗನೂರು ಬಸಪ್ಪ ಶಾಲೆ ಮತಗಟ್ಟೆಯಲ್ಲಿ ಮಂಗಳವಾರ ಪತಿ, ಸಂಸದ ಜಿ.ಎಂ. ಸಿದ್ಧೇಶ್ವರ, ಮಕ್ಕಳು, ಮೊಮ್ಮಕ್ಕಳು, ಕುಟುಂಬ ಸಮೇತ ಸರದಿ ಸಾಲಲ್ಲಿ ನಿಂತು, ಮತ ಮತ ಚಲಾಯಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲೆಡೆ ಉತ್ತಮ ವಾತಾವಣವಿದೆ. ನಾವು ಮತ್ತೆ ಇಲ್ಲಿ ಗೆಲ್ಲುವ ಸಂಪೂರ್ಣ ವಿಶ್ವಾಸವಿದೆ ಎಂದರು.

ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದವರು ಹಣದ ಹೊಳೆಯನ್ನೇ ಹರಿಸುತ್ತಿದ್ದಾರೆ. ಆದರೆ, ಮತದಾರರು ಬಿಜೆಪಿಗೆ ಆಶೀರ್ವದಿಸಲಿದ್ದಾರೆ. 6ನೇ ಬಾರಿಗೆ ನಮ್ಮ ಕುಟುಂಬಕ್ಕೆ ಮತದಾರರು ಆಶೀರ್ವಾದ ಮಾಡಿದ್ದಾರೆ. ಇಲ್ಲಿ ಮತ್ತೆ ಬಿಜೆಪಿ ಜಯ ಸಾಧಿಸಲಿದ್ದು, ಗಾಯತ್ರಿ ಸಿದ್ದೇಶ್ವರ ಸಂಸದರಾಗಿ ಲೋಕಸಭೆ ಪ್ರವೇಶಿಸಲಿದ್ದಾರೆ ಎಂದರು.

ಕ್ಷೇತ್ರಾದ್ಯಂತ ಎಲ್ಲ ಕಡೆಗೂ ಉತ್ತಮ ವಾತಾವರಣವಿದೆ. ಮತದಾನಕ್ಕೆ ಜನರ ಉತ್ಸಾಹವನ್ನು ನೋಡಿದರೆ ಮತ್ತೆ ದಾವಣಗೆರೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎನಿಸುತ್ತಿದೆ. ಇಲ್ಲಿ ಗಾಯತ್ರಿ ಸಿದ್ದೇಶ್ವರ ಅತಿ ಹೆಚ್ಚು ಮತಗಳಿಂದ ಗೆಲುವು ಪಡೆಯಲಿದ್ದಾರೆ. ಮೂರನೇ ಬಾರಿಗೆ ಬಿಜೆಪಿ ಗೆಲ್ಲಲಿದ್ದು, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗೋದು ಖಚಿತ. ನಾವು ಇಷ್ಟು ವರ್ಷ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳೇ ನಮಗೆ ಶ್ರೀರಕ್ಷೆಯಾಗಿವೆ. ಸೂರ್ಯ, ಚಂದ್ರ ಇರುವುದು ಎಷ್ಟು ಸತ್ಯವೋ, ಗಾಯತ್ರಿ ಸಿದ್ಧೇಶ್ವರ ಗೆಲ್ಲುವುದೂ ಅಷ್ಟೇ ಸತ್ಯ ಎಂದು ಪುನರುಚ್ಛರಿಸಿದರು.

ಮುಖಂಡರಾದ ಜಿ.ಎಸ್. ಅನಿತಕುಮಾರ, ಜಿ.ಎಸ್. ಅಶ್ವಿನಿ ಕುಟುಂಬ ಸದಸ್ಯರು, ಬಿಜೆಪಿ ಮುಖಂಡರು ಜೊತೆಗಿದ್ದರು. ಇದೇ ವೇಳೆ ಸಿದ್ಧೇಶ್ವರ, ಗಾಯತ್ರಿ ಸಿದ್ಧೇಶ್ವರ ಮೊಮ್ಮಕ್ಕಳು ವಿದೇಶದಿಂದ ಬಂದು, ತಮ್ಮ ಮೊದಲ ಸಲ ಮತ ಚಲಾಯಿಸುವ ಮೂಲಕ ಗಮನ ಸೆಳೆದರು.

- - - -6ಕೆಡಿವಿಜಿ7:

ದಾವಣಗೆರೆಯಲ್ಲಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ಧೇಶ್ವರ, ಪತಿ, ಸಂಸದ ಜಿ.ಎಂ. ಸಿದ್ಧೇಶ್ವರ ಜೊತೆಗೆ ಮತ ಚಲಾಯಿಸಿದ ನಂತರ ಮತಗಟ್ಟೆ ಬಳಿ ಬೆರಳಿನ ಶಾಯಿ ತೋರಿಸಿದರು. -6ಕೆಡಿವಿಜಿ8:

ದಾವಣಗೆರೆ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ಧೇಶ್ವರ, ಪತಿ, ಸಂಸದ ಜಿ.ಎಂ. ಸಿದ್ಧೇಶ್ವವ ಅವರ ಮಕ್ಕಳಾದ ಜಿ.ಎಸ್.ಅನಿತಕುಮಾರ, ಜಿ.ಎಸ್. ಅಶ್ವಿನಿ, ಮೊಮ್ಮಕ್ಕಳು, ಕುಟುಂಬ ಬಿಜೆಪಿ ಮುಖಂಡರ ಜೊತೆ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು.