ದಾರಿ ತಪ್ಪಿದ ಮೇಲೆ ಸರಿ ದಾರಿಗೆ ತರುವುದು ಕಷ್ಟ: ಮಾಧವಾನಂದ ಭಾರತೀ ಮಹಾಸ್ವಾಮಿಗಳು

| Published : Nov 05 2025, 03:00 AM IST

ಸಾರಾಂಶ

ಮನಸ್ಸು ಅತಿ ಚಂಚಲವಾದುದು. ಅದನ್ನು ನಿಯಂತ್ರಿಸಬೇಕಾದರೆ ಭಗವದ್ಗೀತೆಯ ಪುರಾಣಗಳು ಔಷಧಿಯಾಗಬಲ್ಲದು.

ನಾಲ್ಕನೇ ದಿನದ ಸಂಕಲ್ಪ ಉತ್ಸವಕ್ಕೆ ಚಾಲನೆ ನೀಡಿದ ನೆಲೆಮಾವು ಮಠದ ಶ್ರೀಗಳು

ಕನ್ನಡಪ್ರಭ ವಾರ್ತೆ ಯಲ್ಲಾಪುರ

ಮನಸ್ಸು ಅತಿ ಚಂಚಲವಾದುದು. ಅದನ್ನು ನಿಯಂತ್ರಿಸಬೇಕಾದರೆ ಭಗವದ್ಗೀತೆಯ ಪುರಾಣಗಳು ಔಷಧಿಯಾಗಬಲ್ಲದು. ಯಾವ ವ್ಯಕ್ತಿ ಧರ್ಮದ ದಾರಿಯಲ್ಲಿ ಸಾಗುತ್ತಾನೋ ಆತ ಶ್ರೇಷ್ಠ ವ್ಯಕ್ತಿಯಾಗಿ ರೂಪುಗೊಳ್ಳುತ್ತಾನೆ. ನಾವು ಮಕ್ಕಳನ್ನು ಅತಿಯಾಗಿ ಪ್ರೀತಿಸಿ ಅವರ ಮೇಲೆ ನಿಗಾ ಇಡದೇ ಅವರು ದಾರಿ ತಪ್ಪಿದ ಮೇಲೆ ಚಿಂತೆಗೊಳಗಾಗುತ್ತೇವೆ. ಅದಕ್ಕಾಗಿ ಪ್ರಾರಂಭದಿಂದಲೇ ಸರಿಯಾದ ಸಂಸ್ಕಾರ ನೀಡಬೇಕು ಎಂದು ನೆಲೆಮಾವು ಮಠದ ಜಗದ್ಗುರು ಶ್ರೀಮದ್ ಮಾಧವಾನಂದ ಭಾರತೀ ಮಹಾಸ್ವಾಮಿಗಳು ನುಡಿದರು.

ಸೋಮವಾರ ಪಟ್ಟಣದ ಗಾಂಧೀ ಕುಟೀರದಲ್ಲಿ ೪ನೇ ದಿನದ ಸಂಕಲ್ಪ ಉತ್ಸವಕ್ಕೆ ಚಾಲನೆ ನೀಡಿ, ಸಂಕಲ್ಪ ಪ್ರಶಸ್ತಿ ಪ್ರದಾನ ಮಾಡಿ ಆಶೀರ್ವಚನ ನೀಡಿದರು.

ಇಂದು ಅನೇಕರು ಅಧರ್ಮದ ದಾರಿಯಲ್ಲಿ ಸಾಗುತ್ತಿದ್ದಾರೆ. ನಮ್ಮ ಮಕ್ಕಳು ದಾರಿ ತಪ್ಪಿದ ಮೇಲೆ ಸರಿ ದಾರಿಗೆ ತರುವುದು ಕಷ್ಟ. ಹಾಗಾಗಿ ಅವರಿಗೆ ಚಿಕ್ಕಂದಿನಿಂದಲೇ ಸರಿಯಾದ ಸಂಸ್ಕಾರ ನೀಡಬೇಕು. ಹಿಂದೆ ಮಕ್ಕಳಿಗೆ ನೀತಿ, ಪುರಾಣ ಕಥೆಗಳನ್ನು ಹೇಳಲಾಗುತ್ತಿತ್ತು. ಇಂದು ಪಾಲಕರಿಗೆ ಮಕ್ಕಳ ಬಗ್ಗೆ ಗಮನ ಹರಿಸಲು ಸಮಯವೇ ಇಲ್ಲ. ಹಾಗಾಗಿ ಅವರು ಸಮಾಜಘಾತುಕ ವ್ಯಕ್ತಿಗಳಾಗುವುದಕ್ಕೆ ಕಾರಣವಾದೀತು. ಆ ನೆಲೆಯಲ್ಲಿ ಸಂಕಲ್ಪ ಸಂಸ್ಥೆ ಇಷ್ಟೊಂದು ಸುದೀರ್ಘ ಸಮಯದಿಂದ ಇಂತಹ ಉತ್ತಮ ಉತ್ಸವ ಆಚರಿಸಿಕೊಂಡು ಬಂದಿದ್ದಾರೆ. ಇಂದು ಧರ್ಮದ ಚೌಕಟ್ಟಿನಲ್ಲಿ ಕಲಾರಾಧನೆ ನಡೆಯುತ್ತಿದೆ. ಅದರಲ್ಲೂ ಯಕ್ಷಗಾನ ಪ್ರಭಾವೀ ಕಲೆ. ಇಂತಹ ಉತ್ಸವದಲ್ಲಿ ಮಕ್ಕಳನ್ನು ಹೆಚ್ಚೆಚ್ಚು ತೊಡಗಿಸಿಕೊಳ್ಳುವಂತೆ ಪಾಲಕರು ಗಮನಹರಿಸಬೇಕು ಎಂದ ಅವರು, ಇಂದು ಜನರ ಬಳಿ ಹಣವಿದೆ. ನೆಮ್ಮದಿಯಿಲ್ಲ, ಶಾಂತಿಯಿಲ್ಲ ಎಂಬುದನ್ನು ಹೇಳುತ್ತಾರೆ. ಇದೆಲ್ಲದಕ್ಕೂ ಭಗವದ್ಗೀತೆ ಪರಿಹಾರ ನೀಡಬಲ್ಲದು.

ನಿತ್ಯವೂ ಕನಿಷ್ಠ ಒಂದು ಅಧ್ಯಾಯವನ್ನಾದರೂ ಓದುವ ರೂಢಿ ಮಾಡಿಕೊಳ್ಳಬೇಕು. ಚಂಚಲ ಮನಸ್ಸು ಬೇಕೋ ಬೇಡವೋ ಎಲ್ಲವನ್ನೂ ಸ್ವೀಕರಿಸುತ್ತದೆ. ಹಾಗಾಗಿ ಗೀತೆ, ಪುರಾಣಗಳಿಂದಾಗಿ ಮನಸ್ಸನ್ನು ನಿಯಂತ್ರಿಸಬಹುದು ಎಂದರು.

ಸಹ್ಯಾದ್ರಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಉಮೇಶ ಭಾಗೃತ ಮಾತನಾಡಿ, ಈ ಉತ್ಸವ ಅತ್ಯಂತ ಪ್ರಭಾವಪೂರ್ಣವಾದುದು ನೇರಪ್ರಸಾರದಲ್ಲಿ ಉತ್ಸವವನ್ನು ಜನ ಜಗತ್ತಿನಾದ್ಯಂತ ನೋಡುತ್ತಿದ್ದಾರೆ. ಇದು ಕೂಡ ಮಹತ್ವದ ಅಂಶ ಎಂದರು.

ಮಂಗಳೂರಿನ ಪ್ರಖರವಾಗಿ ಆದರ್ಶ ಗೋಖಲೆ ರಾಷ್ಟ್ರಭಕ್ತಿ ಆಪರೇಷನ್ ಸಿಂದೂರದ ಕುರಿತು ಮಾತನಾಡಿ ನಮ್ಮ ಮಕ್ಕಳಿಗೆ ಸೈನಿಕರ ಕೆಲಸ,ರಾಷ್ಟ್ರಭಕ್ತಿಯ ಬಗ್ಗೆ, ತಿಳಿಸದೇ ಹೋದರೆ ತಪ್ಪಾಗುತ್ತದೆ.ನಮ್ಮ ಎಲ್ಲ ಅಸ್ತ್ರಗಳು ಸದೃಢವಾಗಿದೆ. ಭಾರತ ಎಲ್ಲೂ ಕೈ ಚಾಚುವುದಿಲ್ಲ. ಆಪರೇಷನ್ ಸಿಂದೂರ ಬಳಕ ಸ್ವತಂತ್ರ ಕಾರ್ಯಾಚರಣೆ. ಹೇಗೆಂದು ಭಾರತ ಕಲಿತಿದೆ. ಭಾರತದ ಮೇಲ ಆಕ್ರಮಣವಾದಾಗ ಹೊರದೇಶಗಳು ನಮ್ಮವರವಾಗಿ ಎಂದೂ ನಿಲ್ಲುವುದಿಲ್ಲ. ಬದಲಾಗಿ ಒಳಗೊಳಗೇ ಕತ್ತಿ ಮಸೆಯುತ್ತಲೇ ಇರುತ್ತವೆ. ಭಾರತದ ಮೇಲೆ ದಾಳಿಯಾದಾಗ ಹೀರೋ ಎಂದು ಹೇಳಿಕೊಳ್ಳುವವರು ಯಾರೂ ಮುಂದೆ ಬರುವುದಿಲ್ಲ. ಅಂತಹ ಸಂದರ್ಭದಲ್ಲಿ ಬರುವವರು ಸೈನಿಕರು ಮಾತ್ರ. ಯಾವುದೇ ಉಗ್ರಗಾಮಿ ದಾಳಿ ಭಾರತದ ಮೇಲೆ ನಡೆದರೆ ನಾವದನ್ನು ಯುದ್ಧವಾಗಿಯೇ ಇನ್ನು ಮುಂದೆ ಸ್ವೀಕರಿಸುತ್ತೇವೆ. ಭಾರತ ಏನು ಎಂಬುದನ್ನು ವಿಶ್ವಕ್ಕೆ ಸರ್ಜಿಕಲ್ ಸ್ಟೈಕ್, ಏರ್ ಸ್ಟ್ರಿಕ್, ಆಪರೇಷನ್ ಸಿಂದೂರ ಮೂಲಕ ಕಾಣಿಸಿದ್ದೇವೆ.ನಮ್ಮ ಸೈನಿಕರನ್ನು ಗೌರವಿಸುವುದು ಅಂದರೆ ಭಾರತಕ್ಕೆ ನಾವು ಮಾಡುವ ಗೌರವ. ಸೈನಿಕರೆಂದರೆ ನಮ್ಮ ಮನೆಯ ಮಕ್ಕಳು ಎಂದು ಭಾವಿಸಬೇಕು. ಮಕ್ಕಳಲ್ಲಿ ರಾಷ್ಟ್ರಭಕ್ತಿ ಮೂಡಿಸಬೇಕು ಎಂದರು.

ದಿ.ರಾಮಕೃಷ್ಣ ಹೆಗಡೆ ಟ್ರಸ್ಟ್‌ ಅಧ್ಯಕ್ಷ ಡಾ.ಶಶಿಭೂಷಣ ಹೆಗಡೆ ಮಾತನಾಡಿ, ಉತ್ತರಕನ್ನಡವನ್ನು ವ್ಯವಸ್ಥಿತವಾಗಿ ಪ್ರವಾಸೋದ್ಯಮ ಕೇಂದ್ರವಾಗಿ ಮಾಡುವ ಮೂಲಕ ಜಿಲ್ಲೆಯನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸಲು ಸಾಧ್ಯವಿದೆ. ಇಲ್ಲಿಯ ಪ್ರಕೃತಿ, ಸಂಸ್ಕೃತಿ, ವೈವಿಧ್ಯತೆ ರಾಷ್ಟ್ರದಲ್ಲೇ ಗಮನಸೆಳೆದಿದೆ ಎಂದರು.

ಸಂಕಲ್ಪ ಪ್ರಶಸ್ತಿ ಸ್ವೀಕರಿಸಿದ ಮುಂಡಗೋಡಿನ ಸಾಮಾಜಿಕ ಹೋರಾಟಗಾರ ಚಿದಾನಂದ ಹರಿಜನ ಮಾತನಾಡಿ, ಇಂದು ಅನೇಕರು ಮನೆಯಲ್ಲಿ ಕುಳಿತು ಕಲ್ಲು ಹೊಡೆಯುತ್ತಾರೆ. ಅದನ್ನು ಬಿಟ್ಟು ಇಂತಹ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಸಂಸ್ಕಾರವಂತರಾಗುತ್ತಾರೆ ಎಂದರು.

ಮಾವಿನಮನೆ ಸಹಕಾರಿ ಸಂಘದ ಅಧ್ಯಕ್ಷ ಸುಬ್ಬಣ್ಣ ಬೋಳನೆ, ನಿವೃತ್ತ ಶಿಕ್ಷಕ ಸತೀಶ ಯಲ್ಲಾಪುರ, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಆರ್.ಎಸ್.ಭಟ್ಟ ಚಿಂತಕ ಕಾಶ್ಯಪ ಪರ್ಣಕುಟಿ, ಜಿಲ್ಲಾ ವೀರಶೈವ ಲಿಂಗಾಯತ ಸಮಾಜದ ಜಿಲ್ಲಾಧ್ಯಕ್ಷ ಶಿವಲಿಂಗಯ್ಯ ಅಲ್ಪಯ್ಯನವರಮಠ, ಗೀತಭಿಯಾನದ ಮಾತೆಯರಾದ ಮಹಾದೇವಿ ಭಟ್ಟ ವಿನುತಾ ಕೋಟೆಮನೆ ಉಪಸ್ಥಿತರಿದ್ದರು. ಶಾರದಾಂಬಾ ಪಾಠಶಾಲೆಯ ಕಾರ್ತಿಕೇಯ ಭಟ್ಟ ಶ್ರೀಹರಿ ಮೆಣಸುಮನೆ ವೇದಘೋಷ ಪರಿಸಿದರು. ಪದ್ಮಾ ಪ್ರಮೋದ ಹೆಗಡೆ ಪ್ರಾರ್ಥಿಸಿದರು. ಸರೋಜಾ ಮತ್ತು ಸಂಕಲ್ಪದ ಉಪಾಧ್ಯಕ್ಷ ಪ್ರಶಾಂತ ಹೆಗಡೆ ಶ್ರೀಗಳಿಗೆ ಫಲಪುಷ್ಪ ಸಮರ್ಪಿಸಿದರು. ಸಂಚಾಲಕ ಪ್ರಸಾದ ಹೆಗಡೆ ಪ್ರಾಸ್ತಾವಿಕ ಮಾತನಾಡಿ, ವಂದಿಸಿದರು. ಸಾಮಾಜಿಕ ಕಾರ್ಯಕರ್ತ ಬಾಬು ಬಾಂದೇಕರ ಸ್ವಾಗತಿಸಿದರು. ಯೋಗ ಶಿಕ್ಷಕ ಸುಬ್ರಾಯ ಭಟ್ಟ ಆನೆಜಡ್ಡಿ ನಿರ್ವವಹಿಸಿದರು. ಶ್ರೀಪಾದ ಸಾತೊಡ್ಡಿ ಸನ್ಮಾನಪತ್ರ ವಾಚಿಸಿದರು.