ಭಾರತದ ಸಂವಿಧಾನವು ಕೇವಲ ಕಾನೂನು ಗ್ರಂಥವಲ್ಲ. ಅದು ಪ್ರತಿಯೊಬ್ಬ ನಾಗರಿಕನ ಹಕ್ಕು ಮತ್ತು ಕರ್ತವ್ಯಗಳನ್ನು ಜಾಗೃತಗೊಳಿಸುವ ಜೀವಂತ ಚೌಕಟ್ಟು.
ಬಂಗಾರಪೇಟೆ: ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಟ್ಟಿಗೊಳಿಸುವುದು ಮತ್ತು ಸಂವಿಧಾನ ನೀಡಿದ ಹಕ್ಕು-ಕರ್ತವ್ಯಗಳನ್ನು ಪ್ರತಿಯೊಬ್ಬ ನಾಗರಿಕನೂ ಗೌರವಿಸುವುದು ಅಗತ್ಯವಾಗಿದೆ ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಹೇಳಿದರು.ನಗರದ ಅಂಬೇಡ್ಕರ್ ಪ್ರತಿಮೆಗೆ ಬಳಿ ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಕೋಲಾರ ರಸ್ತೆಯ ಅಂಬೇಡ್ಕರ್ ಪ್ರತಿಮೆ ಬಳಿ ಯೋಜಿಸಿದ್ದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತದ ಸಂವಿಧಾನವು ಕೇವಲ ಕಾನೂನು ಗ್ರಂಥವಲ್ಲ. ಅದು ಪ್ರತಿಯೊಬ್ಬ ನಾಗರಿಕನ ಹಕ್ಕು ಮತ್ತು ಕರ್ತವ್ಯಗಳನ್ನು ಜಾಗೃತಗೊಳಿಸುವ ಜೀವಂತ ಚೌಕಟ್ಟು. ವಿಶ್ವಸಂಸ್ಥೆಯು 2007ರಲ್ಲಿ ಸೆ. 15 ಅನ್ನು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವೆಂದು ಘೋಷಿಸಿದ್ದು, ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಹಾಗೂ ಸಾಮಾಜಿಕ ನ್ಯಾಯದ ಆಶಯಗಳನ್ನು ಎತ್ತಿಹಿಡಿಯುವುದೇ ಇದರ ಮೂಲ ಉದ್ದೇಶವಾಗಿದೆ ಎಂದರು.ಇದೇ ಸಂದರ್ಭದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸುವ ಮತ್ತು ಸಕ್ರಿಯವಾಗಿ ಪಾಲ್ಗೊಳ್ಳುವ ಕುರಿತು ವಿದ್ಯಾರ್ಥಿಗಳು ಹಾಗೂ ಅಧಿಕಾರಿಗಳಿಗೆ ಸಂಕಲ್ಪ ಬೋಧಿಸಲಾಯಿತು. ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಕೆ.ಎನ್. ಸುಜಾತ, ಇಒ ಎಚ್. ರವಿ ಕುಮಾರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಶಿವಕುಮಾರಿ, ಅನಿತಾ, ಬಿಇಓ ಚಂದ್ರಶೇಖರ್, ಟಿಎಚ್ಒ ಡಾ ಸುನಿಲ್, ಎಇಇ ಆನಂದ್ ಕುಮಾರ್, ಎನ್. ಶ್ರೀನಿವಾಸ, ಸಿಡಿಪಿಓ ರವಿ ಕುಮಾರ್, ಯುವರಾಜ್ ಇದ್ದರು.