ಕನ್ನಡಪ್ರಭ ವಾರ್ತೆ ಮೂಡಲಗಿ

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೈಗಾರಿಕೆಗಳ ಅಗತ್ಯಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳು ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದು ಅತ್ಯಗತ್ಯವಾಗಿದೆ ಎಂದು ಬೆಳಗಾವಿ ಓರಿಯನ್ ಹೈಡ್ರಾಲಿಕ್ಸ್ ಕಂಪನಿಯ ತರಬೇತಿ ಅಧಿಕಾರಿ ಕೃಷ್ಣಾ ಎಸ್.ಮಾಲೋಜಿ ಹೇಳಿದರು.

ಇಲ್ಲಿಯ ಶ್ರೀ ಚೈತನ್ಯ ಸೊಸಿಯಲ್‌ ವೆಲ್ಫೇರ್ ಸೊಸೈಟಿಯ ಚೈತನ್ಯ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಬೆಳಗಾವಿಯ ಓರಿಯನ್ ಹೈಡ್ರಾಲಿಕ್ಸ್ ಕಂಪನಿಯ ಸಹಯೋಗದಲ್ಲಿ ಅಪ್ರೆಂಟಿಸ್ ಮೇಳ ಹಾಗೂ ಉದ್ಯಮ-ಶೈಕ್ಷಣಿಕ ಸಹಭಾಗಿತ್ವ ಮತ್ತು ಉದ್ಯೋಗ ಭರವಸೆ ಕುರಿತು ತಿಳುವಳಿಕೆ ಒಪ್ಪಂದ ಸಮಾರಂಭದಲ್ಲಿ ಮಾತನಾಡಿ, ಉದ್ಯಮ ಹಾಗೂ ಶೈಕ್ಷಣಿಕ ಸಂಸ್ಥೆಗಳ ನಡುವಿನ ಸಹಭಾಗಿತ್ವದಿಂದ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನ, ಗುಣಮಟ್ಟದ ತರಬೇತಿ ಹಾಗೂ ಉದ್ಯೋಗಾವಕಾಶಗಳು ಸುಲಭವಾಗಿ ದೊರೆಯಲಿದ್ದು, ಇಂತಹ ಅಪ್ರೆಂಟಿಸ್ ಮೇಳಗಳು ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಕಂಪನಿಯ ಉತ್ಪನ್ನಗಳ ಮಹತ್ವ, ಉತ್ಪಾದನಾ ಪ್ರಕ್ರಿಯೆ ಹಾಗೂ ತಯಾರಿಕಾ ಹಂತಗಳ ಕುರಿತು ವಿಡಿಯೋ ಪ್ರದರ್ಶನದ ಮೂಲಕ ಮಾಹಿತಿ ನೀಡಿದರು. ಕಂಪನಿಯ ಇನ್ನೋರ್ವ ಅಧಿಕಾರಿ ಕದಮ್ ಮಾತನಾಡಿ, ಸ್ಥಳೀಯ ಪ್ರದೇಶದ ಐಟಿಐ ತರಬೇತಿದಾರರಿಗೆ ತಮ್ಮ ಸಂಸ್ಥೆಯಲ್ಲಿ ಉದ್ಯೋಗಾವಕಾಶ ದೊರೆಯುತ್ತಿರುವುದು ಕಂಪನಿಗೆ ಹೆಮ್ಮೆಯ ವಿಷಯವಾಗಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಚೈತನ್ಯ ಶಾಲೆಯ ಆಡಳಿತಾಧಿಕಾರಿ ಎಸ್.ಎಂ.ಕಮದಾಳ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಗುಣಮಟ್ಟದ ತಾಂತ್ರಿಕ ಶಿಕ್ಷಣದ ಜೊತೆಗೆ ಉದ್ಯೋಗಾಧಾರಿತ ತರಬೇತಿ ನೀಡುವ ನಿಟ್ಟಿನಲ್ಲಿ ಸಂಸ್ಥೆ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು, ಕೈಗಾರಿಕೆಗಳೊಂದಿಗೆ ಇಂತಹ ಒಪ್ಪಂದಗಳು ವಿದ್ಯಾರ್ಥಿಗಳ ಉದ್ಯೋಗ ಸಾಧ್ಯತೆಗಳನ್ನು ಮತ್ತಷ್ಟು ವೃದ್ಧಿಸಲಿವೆ ಎಂದರು.ಈ ಸಂದರ್ಭದಲ್ಲಿ ಚೈತನ್ಯ ಐಟಿಐ ಮತ್ತು ಓರಿಯನ್ ಹೈಡ್ರಾಲಿಕ್ಸ್ ಕಂಪನಿಯ ನಡುವೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈ ಒಪ್ಪಂದದ ಮೂಲಕ ವಿದ್ಯಾರ್ಥಿಗಳಿಗೆ ಕೈಗಾರಿಕಾ ತರಬೇತಿ, ಅಪ್ರೆಂಟಿಸ್ ಅವಕಾಶಗಳು, ಕೌಶಲ್ಯ ಅಭಿವೃದ್ಧಿ ಹಾಗೂ ಉದ್ಯೋಗ ಮಾರ್ಗದರ್ಶನ ಒದಗಿಸುವ ಉದ್ದೇಶ ಹೊಂದಲಾಗಿದೆ. ಇದೇ ವೇಳೆ ಅಪ್ರೆಂಟಿಸ್ ಹಾಗೂ ಉದ್ಯೋಗ ನೇಮಕಾತಿಗಾಗಿ ಕಂಪನಿಯು ಎರಡನೇ ವರ್ಷದ ತರಬೇತಿದಾರರಿಂದ ಅರ್ಜಿಗಳನ್ನು ಸ್ವೀಕರಿಸಿತು.ವಿವಿಧ ಟ್ರೇಡ್‌ಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ, ಕಂಪನಿಯ ಆಯ್ಕೆ ಪ್ರಕ್ರಿಯೆ, ಉದ್ಯೋಗಾವಕಾಶಗಳು ಹಾಗೂ ತರಬೇತಿ ಕುರಿತ ಮಾಹಿತಿ ಪಡೆದರು.ಕಾರ್ಯಕ್ರಮದಲ್ಲಿ ಗೋಕಾಕ ಹಾಗೂ ಮೂಡಲಗಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಹಕಾರಿ ಸಂಘದ ಅಧ್ಯಕ್ಷ ಯಲಗೌಡ ಬಿ.ಪಾಟೀಲ, ಚೈತನ್ಯ ಸೊಸಿಯಲ್‌ ವೆಲ್ಫೇರ್ ಸೊಸೈಟಿಯ ಅಧ್ಯಕ್ಷ ಉದಯಕುಮಾರ ಆರ್.ಜೋಕಿ, ಕರ್ನಾಟಕ ರಾಜ್ಯ ಸಹಕಾರಿ ಪತ್ತಿನ ಮಹಾಮಂಡಳದ ಸದಸ್ಯ ಹಾಗೂ ಚೈತನ್ಯ ಅರ್ಬನ್ ಸೊಸೈಟಿಯ ಅಧ್ಯಕ್ಷ ತಮ್ಮಣ್ಣ ಬಿ.ಕೆಂಚರಡ್ಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆಯ ವಿಜಯ ಸಿದ್ದಣ್ಣ ಹೊರಟ್ಟಿ, ಕಂಪನಿಯ ಒತ್ತೊರ್ವ ಅಧಿಕಾರಿ ಕಾಂಬಳೆ, ಐಟಿಐ ಪ್ರಾಚಾರ್ಯ ಎಸ್.ಬಿ.ಕುಳ್ಳೋಳಿ, ಉದ್ಯೋಗ ನಿಯೋಜಕರಾದ ಟಿ.ಆರ್.ಝಾರೆ, ಚೈತನ್ಯ ಶಾಲೆ ಹಾಗೂ ಐಟಿಐ ಸಿಬ್ಬಂದಿ, ತರಬೇತಿದಾರರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.