ಸಾರಾಂಶ
ಕನಕಪುರ: ಶಿಕ್ಷಕರು ಆಧುನಿಕ ತಂತ್ರಜ್ಞಾನಗಳಿಗೆ ಹೊಂದಿ ಕೊಳ್ಳಬೇಕು,ಇಲ್ಲದಿದ್ದರೆ ಉತ್ತಮ ಶಿಕ್ಷಣ ನೀಡುವಲ್ಲಿ ವಿಫಲರಾಗಿ ಮಕ್ಕಳಿಗೆ ಸರಿಯಾಗಿ ನ್ಯಾಯ ಒದಗಿಸಲು ಆಗುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ನಗರದ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ನಾವೆಲ್ಲರೂ ಇಂದು ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಅಂಗವಾಗಿ ಶಿಕ್ಷಕರ ದಿನ ಆಚರಿಸುತ್ತಿದ್ದೇವೆ. ನಾನು ಪ್ರತಿ ವರ್ಷ ಎಷ್ಟೇ ಒತ್ತಡ, ಕೆಲಸಗಳಿದ್ದರೂ ಸಹ ತಪ್ಪಿದೇ ಭಾಗವಹಿಸುತ್ತೇನೆ. ಸರ್ವ ಪಲ್ಲಿ ರಾಧಾಕೃಷ್ಣನ್ ಅವರ ಇತಿಹಾಸ ಶಿಕ್ಷಣಕ್ಕೆ ದೊಡ್ಡ ಮಾರ್ಗದರ್ಶನ. ಅಂದಿನ ಕಾಂಗ್ರೆಸ್ ಸರ್ಕಾರ ಅವರಿಗೆ ದೊಡ್ಡ ಹುದ್ದೆ ನೀಡಿ ಶಿಕ್ಷಕರಿಗೆ ಗೌರವ ನೀಡುವ ಕೆಲಸವನ್ನು ಮಾಡಿದೆ ಎಂದರು.ಇಂದು ಸಮಾಜದಲ್ಲಿ ಹೆಚ್ಚಾಗಿ ಹೆಣ್ಣು ಮಕ್ಕಳು ಶಿಕ್ಷಕ ವೃತ್ತಿ ಆಯ್ಕೆ ಮಾಡಿಕೊಂಡಿದ್ದೀರಿ.ತಾಲೂಕಿನ ಪ್ರತಿಯೊಬ್ಬ ನಾಗರಿಕರ ಪರ ನಿಮ್ಮನ್ನು ಅಭಿನಂದಿಸುತ್ತೇನೆ. ಗುರುವೇ ದೊಡ್ಡ ತತ್ವ, ಗುರುವೇ ದೊಡ್ಡ ತಪಸ್ವಿ, ನಮ್ಮ ಜೀವನದಲ್ಲಿ ಗುರು ಹಾಗೂ ಗುರಿ ಎರಡು ಮುಖ್ಯವಾಗಿರಬೇಕು. ನೀವೆಲ್ಲರೂ ಮಕ್ಕಳಿಗೆ ಶಿಕ್ಷಣ ನೀಡುತ್ತೀರಿ. ನೀವು ನೀಡುವ ಶಿಕ್ಷಣ ಕೇವಲ ಮಕ್ಕಳ ತಲೆಗೆ ಹೋಗುವುದು ಮಾತ್ರವಲ್ಲ, ಮಕ್ಕಳ ಹೃದಯಕ್ಕೆ ನಾಟಬೇಕು. ಆಗ ಮಾತ್ರ ನಿಮ್ಮ ಜವಾಬ್ದಾರಿ ಹೆಚ್ಚುತ್ತದೆ. ಶಿಕ್ಷಣದಲ್ಲಿ ನಾವು ಪ್ರತಿ ಹಂತದಲ್ಲೂ ಅಪ್‌ಡೇಟ್ ಆಗುತ್ತಿರಬೇಕಾಗುತ್ತದೆ. ಮೊದಲು ಅಬಾಕಸ್, ನಂತರ ಕ್ಯಾಲ್ಕುಲೇಟರ್, ಆಮೇಲೆ ಕಂಪ್ಯೂಟರ್, ಗೂಗಲ್ ಈಗ ಚಾಟ್, ಜಿಪಿಟಿ ಬಂದಿದೆ. ಹೀಗೆ ಪ್ರತಿ ಹಂತದಲ್ಲೂ ಹೊಸ ತಂತ್ರಜ್ಞಾನ ಬರುತ್ತಿದ್ದು, ನಾವು ಅವುಗಳನ್ನು ಅಳವಡಿಸಿಕೊಳ್ಳಲು ಸಿದ್ಧರಿರಬೇಕು. ಈಗಿನ ಕಾಲ ಕೃತಕ ಬುದ್ಧಿಮತ್ತೆ ಕಾಲವಾಗಿದ್ದು ಮುಂದಿನ ಹತ್ತು ವರ್ಷಗಳಲ್ಲಿ ಈ ತ್ರಂತ್ರಜ್ಞಾನ ಮಾಡಲಿರುವ ಬದಲಾವಣೆ ಊಹಿಸಲೂ ಸಾಧ್ಯವಿಲ್ಲ. ನಾನು ಅನೇಕ ಶಾಲೆಗಳಲ್ಲಿ ಗಮನಿಸುತ್ತಿದ್ದೇನೆ. ಶಿಕ್ಷಕರು ಪಾಠ ಮಾಡುವಾಗ ತಪ್ಪು ಹೇಳಿದರೆ, ಮಕ್ಕಳೇ ಅದನ್ನು ತಿದ್ದುವ ಪರಿಸ್ಥಿತಿ ಇದೆ. ಈಗಿನ ಮಕ್ಕಳು ನವೀನ ತಂತ್ರಜ್ಞಾನದ ಜ್ಞಾನ ಗಳಿಸುತ್ತಿರುವುದು ಕಾಣಬಹುದು ಎಂದರು.
ಶಿಕ್ಷಕರಲ್ಲಿ ನೈತಿಕತೆ ಮುಖ್ಯ:ಶಿಕ್ಷಕರಲ್ಲಿ ಸಮಗ್ರತೆ, ನೈತಿಕತೆ ಹೆಚ್ಚಾಗಿರಬೇಕು. ನೀವು ಕಲಿಸುವುದನ್ನೇ ಮಕ್ಕಳು ಕಲಿಯುತ್ತಾರೆ. ಮನುಷ್ಯನಿಗೆ ವಿದ್ಯೆ ಇದ್ದರೆ ವಿನಯ ಇರುತ್ತದೆ. ವಿನಯದಿಂದ ಯೋಗ್ಯತೆ, ಯೋಗ್ಯತೆಯಿಂದ ಹಣ, ಹಣದಿಂದ ಧರ್ಮ, ಧರ್ಮದಿಂದ ಸುಖ ಸಿಗುತ್ತದಂತೆ. ಮನುಷ್ಯ ನ್ಯಾಯ, ನೀತಿಯಿಂದ ನಡೆದು ಸುಖವಾಗಿರಬೇಕಾದರೆ ಇದಕ್ಕೆ ಮೂಲ ವಿದ್ಯೆ ಇದೆ. ವಿದ್ಯೆ ಎಂಬುದು ಗುಪ್ತ ನಿಧಿ ಇದನ್ನ ಯಾರೂ ಕದಿಯಲು ಆಗುವುದಿಲ್ಲ, ಬೆಂಕಿಯಲ್ಲಿ ಸುಡಲೂ ಆಗುವುದಿಲ್ಲ. ನೀರಿನಲ್ಲಿ ನೆನೆಸಲು ಆಗದ ನಿಧಿ ಇದು. ಈ ಗುಪ್ತ ನಿಧಿಯನ್ನು ನೀವು ನಮ್ಮ ಮಕ್ಕಳಿಗೆ ಸರಿಯಾಗಿ ನೀಡಿ, ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಮಾಡುವಂತೆ ತಯಾರು ಮಾಡಬೇಕು. ನಾವು ನಮ್ಮ ಮೂಲ ಮರೆತರೆ ಯಶಸ್ಸು ಸಾಧಿಸುವುದಿಲ್ಲ ಎಂದು ನಂಬಿದ್ದು ಇದನ್ನೇ ಮಕ್ಕಳಿಗೂ ಹೇಳುತ್ತೇನೆ ನೀವು ಓದಿದ ಶಾಲೆ, ಕಲಿಸಿದ ಗುರು, ಬೆಳೆಸಿದ ಪೋಷಕರನ್ನು ನೀವು ಸ್ಮರಿಸಬೇಕು. ತಾಯಿ ಉಸಿರು ಕೊಟ್ಟರೆ, ತಂದೆ ಹೆಸರು ನೀಡುತ್ತಾನೆ. ಆದರೆ ಗುರು ಉಸಿರಿರುವವರೆಗೂ ಹೆಸರು ಕಾಪಾಡುವ ಶಕ್ತಿ ನೀಡುತ್ತಾನೆ ಎಂದು ತಿಳಿಸಿದರು.
ಇದೇ ವೇಳೆ ಉತ್ತಮ ಸೇವೆ ಸಲ್ಲಿಸಿದ ಹಾಗೂ ನಿವೃತ್ತ ಶಿಕ್ಷಕರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಲಯನ್ಸ್ ಮತ್ತು ಲಿಯೋ ಸಂಸ್ಥೆಯ ಸಹಕಾರದೊಂದಿಗೆ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿನೂರಾರು ಶಿಕ್ಷಕ ಬಂಧುಗಳು ರಕ್ತದಾನ ಮಾಡಿದರು. ವಿಧಾನ ಪರಿಷತ್ ಸದಸ್ಯರಾದ ಎಸ್. ರವಿ, ಪುಟ್ಟಣ್ಣ,
ಜಿಲ್ಲಾಧಿಕಾರಿ ಯಶವಂತ್.ವಿ. ಗುರಿಕಾರ್, ತಹಸೀಲ್ದಾರ್ ಸಂಜಯ್, ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತಿಗೌಡ, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ನೇ.ರ.ಪ್ರಭಾಕರ್, ಉಪಾಧ್ಯಕ್ಷ ಚಂದ್ರಶೇಖರ್, ಕಾರ್ಯದರ್ಶಿ ನಟರಾಜು, ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಎನ್.ದಿಲೀಪ್, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಜಯ್ ಸೇರಿದಂತೆ ಶಿಕ್ಷಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.ಬಾಕ್ಸ್.........
"ಸಿಎಸ್ಆರ್ ಅನುದಾನದಲ್ಲಿ ಶಾಲೆಗಳ ನಿರ್ಮಾಣ "ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 50 ಸಾವಿರ ಶಿಕ್ಷಕರ ಕೊರತೆ ಇದೆ. ಇಂದು ಎಲ್ಲಾ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ನಾವು ಇದನ್ನು ತಡೆಯಬೇಕು. ನಾನು ಕೂಡ ಶಿಕ್ಷಣಕ್ಕಾಗಿ ಬೆಂಗಳೂರಿಗೆ ಹೋದೆ. ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಹಾಗೂ ಉದ್ಯೋಗಕ್ಕಾಗಿ ಬೆಂಗಳೂರಿಗೆ ಜನರು ವಲಸೆ ಹೋಗುತ್ತಿದ್ದಾರೆ. ಇದನ್ನು ತಪ್ಪಿಸಲು ನಾವು ಸಿಎಸ್‌ಆರ್ ಅನುದಾನದಲ್ಲಿ ಹೊಸ ಶಾಲೆಗಳ ನಿರ್ಮಾಣಕ್ಕೆ ತೀರ್ಮಾನ ಮಾಡಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.ಮುಂದಿನ ಸಚಿವ ಸಂಪುಟದಲ್ಲಿ ಸಿಎಸ್ ಆರ್ ಅನುದಾನದಿಂದ ಶಾಲೆಗಳ ನಿರ್ಮಾಣದ ಬಗ್ಗೆ ಮಹತ್ವದ ತೀರ್ಮಾನ ಮಾಡಲಾಗುವುದು. ಯಾರು ಶಾಲೆ ನಿರ್ಮಾಣ ಮಾಡುತ್ತಾರೋ ಅವರ ಕಂಪೆನಿಯ ಹೆಸರನ್ನೇ ಇಟ್ಟುಕೊಳ್ಳಬಹುದು ಎಂದು ಹೇಳಿದ್ದೇವೆ. ಆದರೆ ಅತ್ಯುತ್ತಮ ಕಟ್ಟಡ ನಿರ್ಮಾಣ ಮಾಡಬೇಕು ಹಾಗೂ ನಗರ ಮಾದರಿಯಲ್ಲಿ ಸಿಬಿಎಸ್ ಇ ಶಿಕ್ಷಣ ದೊರೆಯಬೇಕು ಎಂಬುದು ನಮ್ಮ ಆಶಯ. ಈಗಾಗಲೇ ಒಂದಷ್ಟು ಶಾಲೆಗಳು ಪ್ರಾರಂಭವಾಗಿವೆ. ಸುಮಾರು 2 ಸಾವಿರ ಶಾಲೆ ನಿರ್ಮಾಣ ನಮ್ಮ ಗುರಿ ಎಂದರು.ರಾಜ್ಯದಲ್ಲಿ 7,800 ಕೋಟಿಯಷ್ಟು ಸಿಎಸ್ ಆರ್ ಹಣ ಲಭ್ಯವಿದೆ ಎಂದು ವರದಿಗಳು ಹೇಳುತ್ತವೆ. ಒಂದಷ್ಟು ಉದ್ಯಮಿಗಳು ಇನ್ನೂ ಮನಸು ಮಾಡಿಲ್ಲ. ಕನಕಪುರದಲ್ಲಿ ಟೊಯೋಟಾ ಹಾಗೂ ಪ್ರೆಸ್ಟೀಜ್, ಬಾಷ್ ಸೇರಿದಂತೆ ಇತರೆ ಸಂಸ್ಥೆಗಳ ಮೂಲಕ 10-15 ಕಡೆಗಳಲ್ಲಿ ಶಾಲೆಗಳ ನಿರ್ಮಾಣ ಕಾರ್ಯ ಆರಂಭವಾಗಿದೆ. ಇವೆಲ್ಲವೂ ಸರ್ಕಾರಿ ಶಾಲೆಗಳು. ನಾನು ನಮ್ಮ ಊರಿನಲ್ಲಿ ಮೂರು ಶಾಲೆಗಳನ್ನು ದತ್ತು ತೆಗೆದುಕೋ ಎಂದು ಮಗಳಿಗೆ ಸೂಚಿಸಿದ್ದೇನೆ. ಈ ಮಾದರಿಯನ್ನು ಇಡೀ ರಾಜ್ಯಾದ್ಯಂತ ವಿಸ್ತರಣೆ ಮಾಡಲು ತೀರ್ಮಾನಿಸಿದ್ದೇವೆ.ಅದಕ್ಕೆ ಸರ್ಕಾರ ಗ್ರಾಮೀಣ ಭಾಗದಲ್ಲಿ ಮೂರು ಗ್ರಾಮ ಪಂಚಾಯತಿಗಳಿಗೆ ಒಂದರಂತೆ ಕರ್ನಾಟಕ ಪಬ್ಲಿಕ್ ಶಾಲೆ (ಕೆಪಿಎಸ್) ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದರು.
(ಒಂದು ಫೋಟೋ ವನ್ನು ಪ್ಯಾನಲ್‌ನಲ್ಲಿ ಬಳಸಬಹುದು)ಕೆ ಕೆ ಪಿ ಸುದ್ದಿ 01:
ಕನಕಪುರ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಉದ್ಘಾಟಿಸಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.