ಪ್ರತಿ ನಿತ್ಯ ಯೋಗಾಭ್ಯಾಸ ಮಾಡುವುದು ಅವಶ್ಯ

| Published : Sep 29 2025, 01:03 AM IST

ಸಾರಾಂಶ

ಯೋಗ ಎಲ್ಲರನ್ನೂ ಒಂದುಗೂಡಿಸುವ ಒಂದು ಮಾರ್ಗ. ಪ್ರತಿನಿತ್ಯ ನಾವು ಯೋಗ ಮಾಡುವ ಮೂಲಕ ಸಹಬಾಳ್ವೆಯಿಂದ ಬದುಕಲು ಸಾಧ್ಯವಾಗಿದೆ ಎಂದು ಜಗತ್ತಿಗೆ ತೋರಿಸಿಕೊಟ್ಟ ಹೆಮ್ಮೆಯ ದೇಶ ಭಾರತ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.

ಶಿವಮೊಗ್ಗ: ಯೋಗ ಎಲ್ಲರನ್ನೂ ಒಂದುಗೂಡಿಸುವ ಒಂದು ಮಾರ್ಗ. ಪ್ರತಿನಿತ್ಯ ನಾವು ಯೋಗ ಮಾಡುವ ಮೂಲಕ ಸಹಬಾಳ್ವೆಯಿಂದ ಬದುಕಲು ಸಾಧ್ಯವಾಗಿದೆ ಎಂದು ಜಗತ್ತಿಗೆ ತೋರಿಸಿಕೊಟ್ಟ ಹೆಮ್ಮೆಯ ದೇಶ ಭಾರತ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.ನಗರದ ಕುವೆಂಪು ರಂಗಮಂದಿರದ ಎದುರು ಮಹಾನಗರ ಪಾಲಿಕೆಯಿಂದ ಭಾನುವಾರ ಆಯೋಜಿಸಿದ್ದ ಯೋಗ ದಸರಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಉತ್ತಮ ಆರೋಗ್ಯಕ್ಕಾಗಿ ಪ್ರತಿಯೊಬ್ಬರೂ ಯೋಗಾಭ್ಯಾಸ ಮಾಡಬೇಕು ಎಂದು ತಿಳಿಸಿದರು.

ಬೆಂಗಳೂರಿನ ಡಾ.ಸುಬ್ರಹ್ಮಣ್ಯನ್ ಮಾತನಾಡಿ, ಪ್ರತಿದಿನ ಯೋಗ ಮಾಡುವುದರಿಂದ ಎಷ್ಟು ಪ್ರಯೋಜನ ಇದೆಯೋ ಅದೇ ರೀತಿ ಅದರೊಂದಿಗೆ ಧ್ಯಾನವನ್ನು ಅಳವಡಿಸಿಕೊಂಡಲ್ಲಿ ಇನ್ನು ಹೆಚ್ಚಿನ ಪರಿಣಾಮ ಸಿಗುವುದು ಎಂದರು.

ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣಗೌಡ ಮಾತನಾಡಿ, ಮುಂದಿನ ದಿನಗಳಲ್ಲಿ ಇನ್ನೂ ಅದ್ಧೂರಿಯಾಗಿ ಯೋಗ ದಸರಾವನ್ನು ಮಾಡೋಣ, ಸಾಕಷ್ಟು ಜನ ಆಸಕ್ತಿ ತೋರಿಸುತ್ತಿರುವುದು ನಮಗೂ ಉತ್ಸಾಹ ತಂದಿದೆ. ಎಲ್ಲರೂ ಪ್ರತಿನಿತ್ಯ ಯೋಗ ಮಾಡಿ ಆರೋಗ್ಯದಿಂದ ಇರುವಂತೆ ಸಲಹೆ ನೀಡಿದರು.

ಶ್ರೀ ರಾಘವೇಂದ್ರ ಯೋಗ ಕೇಂದ್ರದ ಗೋಪಾಲಕೃಷ್ಣ ಅವರು ಯೋಗ ಕಾರ್ಯಕ್ರಮ ನಡೆಸಿಕೊಟ್ಟರು.

ನಂತರ ಪ್ರಾಣಾಯಾಮ ತರಗತಿಯನ್ನು ಶ್ರೀ ಶಿವಗಂಗಾ ಯೋಗ ಕೇಂದ್ರದ ಗುರು ಸಿ.ವಿ.ರುದ್ರಾರಾಧ್ಯ ನಡೆಸಿಕೊಟ್ಟರು. ಧ್ಯಾನ ಕಾರ್ಯಕ್ರಮವನ್ನು ಕಣಾದ ಯೋಗ ಕೇಂದ್ರದ ಗುರು ಅನಿಲ್ ಕುಮಾರ್ ಶೆಟ್ಟರ್ ನಡೆಸಿಕೊಟ್ಟರು.

ಇದೇ ವೇಳೆ ನಂಜಪ್ಪ ಆಸ್ಪತ್ರೆಯ ವೈದ್ಯಾಧಿಕಾರಿಗಳು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ನಡೆಸಿಕೊಟ್ಟರು. ಭಾಗವಹಿಸಿದ ಎಲ್ಲರಿಗೂ ಟಿ ಶರ್ಟ್ ಮತ್ತು ಉಪಹಾರ ವ್ಯವಸ್ಥೆಯನ್ನು ಮಹಾನಗರ ಪಾಲಿಕೆಯಿಂದ ಮಾಡಲಾಗಿತ್ತು.

ಯೋಗ ಗುರುಗಳಾದ ಭಾ.ಮ ಶ್ರೀಕಂಠ, ಅರವಿಂದ, ರಾಜಶೇಖರ್, ಡಾ.ಸಂಜಯ್, ಬೆಳಗುರು ಮಂಜುನಾಥ್, ವೈದ್ಯನಾಥ್, ಓಂಕಾರ್, ಜಗದೀಶ್, ವಿಜಯಾ, ಬಸವರಾಜ್, ಮಂಜುಳಾ, ಶುಭದಾ ಹೆಗಡೆ, ಜಿ.ವಿಜಯಕುಮಾರ್ ಇತರರಿದ್ದರು. ಈ ಸಂದರ್ಭದಲ್ಲಿ ಯೋಗ ಶಿಕ್ಷಕರನ್ನು ಸನ್ಮಾನಿಸಲಾಯಿತು. ಯೋಗ ಶಿಕ್ಷಕ ಡಾ.ನಾಗರಾಜ್ ಪರಿಸರ ಕಾರ್ಯಕ್ರಮ ನಿರೂಪಿಸಿದರು. ಮಹಾನಗರ ಪಾಲಿಕೆಯ ಸುಧಾಕರ್ ಬಿಜೂರ್ ಎಲ್ಲರನ್ನೂ ವಂದಿಸಿದರು.