ಕನ್ನಡಪ್ರಭ ವಾರ್ತೆ ಚಿಂತಾಮಣಿ

ಸಂವಿಧಾನವನ್ನು ನಾವೆಲ್ಲರೂ ಮೊದಲು ಓದಬೇಕು ಮತ್ತು ಅರ್ಥೈಸಿಕೊಳ್ಳಬೇಕು. ಸಂವಿಧಾನದ ಮೂಲತತ್ವಗಳನ್ನು ಮೈಗೂಡಿಸಿಕೊಂಡು ಆದರಂತೆ ನಾವು ನಡೆದುಕೊಂಡಾಗ ಸಮಸಮಾಜ ನಿರ್ಮಾಣವಾಗುತ್ತದೆಯೆಂದು ವಿಶ್ರಾಂತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಹೇಳಿದರು.

ನಗರದ ತಾಪಂ ಸಾಮರ್ಥ್ಯ ಸೌಧ ಸಭಾಂಗಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳ ನಿಲಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರ್ವ ಸಿದ್ಧತೆ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.

ಪ್ರತಿಯೊಬ್ಬ ವ್ಯಕ್ತಿಯೂ ದೊಡ್ಡ ದೊಡ್ಡ ಕನಸುಗಳನ್ನು ಕಾಣಬೇಕಾಗುತ್ತದೆ. ಆದರೆ ಕೆಲವರ ಜೀವನದಲ್ಲಿ ಅದು ಸಾಧ್ಯವಾಗುವುದಿಲ್ಲ. ಏಕೆಂದರೆ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿಗಳಿಂದ ಅದು ಸಾಧ್ಯವಾಗುವುದಿಲ್ಲ ಆದರೆ ಪ್ರತಿಯೊಬ್ಬರೂ ಛಲದಿಂದ ಓದಬೇಕು ಜೀವನ ರೂಪಿಸಿಕೊಳ್ಳಬೇಕು ಎಂದರು.

ಅಂಕಪಟ್ಟಿಯಲ್ಲಿ ಅಂಕಗಳು ಜೀವನ ರೂಪುಗೊಳ್ಳುವುದಿಲ್ಲ ಬದಲಾಗಿ ವ್ಯಕ್ತಿತ್ವ ಮತ್ತು ಶ್ರಮ, ಪ್ರಯತ್ನಗಳ ಫಲವಾಗಿ ಜೀವನ ರೂಪುಗೊಳ್ಳುತ್ತದೆ. ಪ್ರಸ್ತುತ ಕಾಲಘಟ್ಟದಲ್ಲಿ ಅಂಕಗಳೊಂದಿಗೆ ವ್ಯಕ್ತಿತ್ವ, ಶ್ರಮ, ಪ್ರಯತ್ನ ಹಾಗೂ ಜ್ಞಾನಾರ್ಜನೆ ಯೊಂದಿಗೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪಡೆಯಬಹುದಾದ ಎಲ್ಲಾ ಪರೀಕ್ಷೆಗಳನ್ನು ಎದುರಿಸುವ ಜ್ಞಾನದಿಂದ ಕೂಡಿರಬೇಕಾದ ಅಗತ್ಯವಿದೆಯೆಂದರು.


ಬೆಂಗಳೂರು ಮತ್ತು ಕಣ್ಣೂರು ವಿಶ್ವವಿದ್ಯಾಲಯ ಡೀನ್‌ ಡಾ. ಸತೀಶ್ ಗೌಡ, ಸಾಮಾಜಿಕ ನ್ಯಾಯದ ಹರಿಕಾರರು ಶಿಸ್ತು, ಬದ್ಧತೆ, ಜೀವನ ಚರಿತ್ರೆ ಓದಬೇಕು. ಸ್ಪರ್ಧಾತ್ಮಕ ಪರೀಕ್ಷೆ ಆತ್ಮವಿಶ್ವಾಸ ತುಂಬಾ ಮುಖ್ಯವಾಗಿದ್ದು, ಅದು ಇದ್ದಾಗ ಎಂತಹ ಕಠಿಣ ಪರಿಸ್ಥಿತಿಯಲ್ಲೂ ಪರೀಕ್ಷೆಯನ್ನು ಎದುರಿಸಬಹುದಾಗಿದೆ. ಕೋರ್ಸ್ ಕಷ್ಟ ಮತ್ತು ಇಷ್ಟಪಟ್ಟು ಓದಿದಾಗ ನಾವು ಜೀವನದಲ್ಲಿ ಗೆಲುವನ್ನು ಸಾಧಿಸಬಹುದಾಗಿದೆ ಎಂದರು.

ಓದುವುದನ್ನು ಸ್ವೀಕರಿಸುವ ಬಗೆ ಹೇಗೆ? ಎಂಬುದನ್ನು ಯಾವ ರೀತಿ ರೂಪಿಸಿಕೊಳ್ಳಬೇಕು ಎಂಬುದು ಅತಿ ಮುಖ್ಯವಾಗಿದೆ. ಗ್ರಂಥಾಲಯಕ್ಕೆ ಹೋಗುವುದರಿಂದ ವಿವಿಧ ರೀತಿಯ ಪುಸ್ತಕಗಳನ್ನು ಅಭ್ಯಸಿಸುವುದರಿಂದ ಜ್ಞಾನಾರ್ಜನೆ ಹೆಚ್ಚಾಗುತ್ತದೆ. ನಾವು ಜೀವನದಲ್ಲಿ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಹಾಗೂ ಗುಣಮಟ್ಟ ಮತ್ತು ಆಲೋಚನಾ ಕ್ರಮ ಮೈಗೂಡಿಸಿಕೊಳ್ಳುವುದರಿಂದ ಜೀವನದಲ್ಲಿ ಯಶಸ್ಸನ್ನು ಸಾಧಿಸಬಹುದಾಗಿದೆ ಎಂದರು.

ಕಾರ್ಯಕ್ರಮದ ಪ್ರಾಸ್ತವಿಕ ನುಡಿಗಳನ್ನು ಹಿಂದುಳಿದ ವರ್ಗಗಳ ತಾಲೂಕು ಕಲ್ಯಾಣಾಧಿಕಾರಿ ಆರ್. ಸಕ್ಪಾಲ್ ನುಡಿದರು.

ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಕೆ.ವಿ.ಮುನಿರತ್ನಮ್ಮ, ವಕೀಲ ಅಭಿಷೇಕ್, ತಾಲೂಕು ಕಲ್ಯಾಣಾಧಿಕಾರಿಗಳಾದ ಶಿವಪ್ಪ, ಶಂಕರಪ್ಪ, ವನಜಾಕ್ಷಿ, ನವೀನ್‌ಕುಮಾರ್, ಸಂಗಪ್ಪ ಕರಬಸಪ್ಪ ಪಾಟೀಲ, ಚಂದ್ರಶೇಖರ್, ತಾಲೂಕು ವಿಸ್ತರಣಾಧಿಕಾರಿ ಎಸ್ ಬೇಬಿರಾಣಿ ಉಪಸ್ಥಿತರಿದ್ದರು.