ಕನ್ನಡಪ್ರಭವಾರ್ತೆ, ಚಿತ್ರದುರ್ಗ

ಸಮಾಜದ ಕಟ್ಟಕಡೆ ವ್ಯಕ್ತಿ ಸಂಕಟಕ್ಕೆ ಸ್ಪಂದಿಸುವ ಕೆಲಸ ಸಾರ್ವತ್ರಿಕಗೊಳ್ಳುವ ಅಗತ್ಯವಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಜಿ.ಡಿ.ಮಹಾವರ್ಕರ್ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ವಿವಿಧ ಇಲಾಖೆಗಳ ವತಿಯಿಂದ ಹಮ್ಮಿಕೊಂಡಿದ್ದ ಮಾನವ ಕಳ್ಳ ಸಾಕಾಣಿಕೆ ತಡೆ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯ, ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಶೋಷಣೆಗಳ ಕುರಿತು ಬುದ್ಧಿಜೀವಿಗಳು, ವಿದ್ಯಾವಂತರು ಹಾಗೂ ಸಮಾಜದ ಉನ್ನತ ಮಟ್ಟದ ವ್ಯಕ್ತಿಗಳು ಚಿಂತನೆ ನಡೆಸಬೇಕಾದ ಅಗತ್ಯವಿದೆ.ಆಧುನಿಕ ಸಮಾಜದಲ್ಲಿ ದೇಶವು ಎಷ್ಟೇ ಪ್ರಗತಿ ಸಾಧಿಸಿದರೂ, ಸಮಾಜ ಎಷ್ಟೇ ಮುಂದುವರಿದರೂ ಅದರ ಜೊತೆಗೆ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಮಾನವ ಕಳ್ಳಸಾಕಾಣಿಕೆಯಂತಹ ಕಪ್ಪು ಛಾಯೆ ನಮ್ಮನ್ನು ಕಾಡುತ್ತಲೇ ಇದೆ ಎಂದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಸುಧೀನ್ ಕುಮಾರ್ ಮಾತನಾಡಿ, ಸಾಮಾನ್ಯವಾಗಿ ಆಚರಿಸುವ ಹಬ್ಬ-ಹರಿ ದಿನಗಳು, ಉತ್ಸವಗಳಂತೆ ಮಾನವ ಕಳ್ಳಸಾಕಾಣಿಕೆ ತಡೆ ದಿನಾಚರಣೆಯು ಸಂಭ್ರಮದ ಕಾರ್ಯಕ್ರಮವಲ್ಲ. ಸಾಮಾಜಿಕ ಪಿಡುಗನ್ನು ತಡೆಯಲು ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ಶ್ರಮಿಸಬೇಕಾಗಿದೆ ಎಂದರು. ನಮ್ಮ ಮನೆಯ ಹೆಣ್ಣುಮಗಳು ಸ್ವಲ್ಪ ಸಮಯ ತಡವಾಗಿ ಮನೆಗೆ ಬಂದಾಗ, ಇಲ್ಲವೇ ಫೋನ್ ಸಂಪರ್ಕಕ್ಕೆ ಸಿಗದೇ ಇದ್ದಾಗ ಉಂಟಾಗುವ ಆತಂಕ ಮತ್ತು ನೋವು ಎಂಥದ್ದು ಎಂಬುದು ಅನುಭವಿಸಿದವರಿಗಷ್ಟೇ ಗೊತ್ತು. ಪೊಲೀಸ್ ಅಧಿಕಾರಿಯೇ ಆಗಿದ್ದರೂ, ಅಂತಹ ಸಂದರ್ಭದಲ್ಲಿ ಅವರು ಕೇವಲ ಒಬ್ಬ ತಂದೆಯಾಗಿ, ಕುಟುಂಬದ ಸದಸ್ಯರಾಗಿ ಆ ನೋವನ್ನು ಅನುಭವಿಸುತ್ತಾರೆ. ನಮ್ಮ ಸ್ವಂತ ಕುಟುಂಬದ ಸದಸ್ಯರೇ ಕಳೆದುಹೋದರೆ ಹೇಗಿರಬಹುದು ಎಂದು ಒಂದು ಕ್ಷಣ ಯೋಚಿಸಿದರೆ ಎದೆ ನಡುಗುತ್ತದೆ. ವಾಸ್ತವಾಂಶ ಹೀಗಿರುವಾಗ, ಮಾನವ ಕಳ್ಳಸಾಕಾಣಿಕೆಗೆ ಒಳಗಾಗುವ ಬಾಧಿತರ ಸ್ಥಿತಿ ಮತ್ತು ಅವರ ಕುಟುಂಬದ ನೋವು ಎಷ್ಟಿರಬೇಡ ಎಂದು ಕಳವಳ ವ್ಯಕ್ತಪಡಿಸಿದರು.


ಮಕ್ಕಳು ಎಂದರೆ ದೇವರು, ಸ್ತ್ರೀಯರು ದೇವತೆಗಳು ಎಂದು ಬರೀ ಮಾತಿನಲ್ಲಿ ಹೇಳಿ ಸುಮ್ಮನಾದರೆ ಸಾಲದು. ಕೇವಲ ಕಾನೂನು, ಆದೇಶಗಳಿಂದ ಮಾತ್ರ ಈ ಸಮಸ್ಯೆ ತಡೆಯಲು ಸಾಧ್ಯವಿಲ್ಲ. ಅಧಿಕಾರಿಗಳು ಹಾಗೂ ಸಾರ್ವಜನಿಕರು ವೈಯಕ್ತಿಕ ಹೊಣೆಗಾರಿಕೆಯಾಗಿ ಸ್ವೀಕರಿಸಬೇಕು. ಮಕ್ಕಳು ಮತ್ತು ಮಹಿಳೆಯರ ಸುರಕ್ಷತೆಯ ವಿಷಯ ಬಂದಾಗ ಅತ್ಯಂತ ಜಾಗರೂಕರಾಗಿ ಕಾಳಜಿಯಿಂದ ಕಾರ್ಯನಿರ್ವಹಿಸುವುದು ಅತ್ಯಗತ್ಯ ಎಂದು ಕಿವಿಮಾತು ಹೇಳಿದರು.

ವಕೀಲರ ಸಂಘದ ಅಧ್ಯಕ್ಷ ಹೆಚ್.ಎಸ್.ಮಹೇಶ್ವರಪ್ಪ ಮಾತನಾಡಿ, ಸಮಾಜದಲ್ಲಿ ಮಾನವ ಹಕ್ಕುಗಳ ರಕ್ಷಣೆ ಹಾಗೂ ಸೌಹಾರ್ದಯುತ ವಾತಾವರಣ ನಿರ್ಮಾಣಕ್ಕೆ ಮಾನವ ಕಳ್ಳ ಸಾಗಾಣಿಕೆ ತಡೆಯುವುದು ಅತ್ಯಂತ ಪ್ರಮುಖವಾಗಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಸಿ.ಎಸ್.ಗಾಯತ್ರಿ ಮಾತನಾಡಿ,

ದೇಶದಲ್ಲಿ ಪ್ರತಿವರ್ಷ ಸುಮಾರು 40 ರಿಂದ 50 ಸಾವಿರ ಮಕ್ಕಳು ಕಾಣೆಯಾಗುತ್ತಿದ್ದಾರೆ. ಇವರಲ್ಲಿ ಹೆಚ್ಚಿನವರು ಮಾನವ ಕಳ್ಳಸಾಗಾಣಿಕೆ ಜಾಲಕ್ಕೆ ಬಲಿಯಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ವಿಶೇಷವಾಗಿ ಮಕ್ಕಳು, ಹೆಣ್ಣುಮಕ್ಕಳು ಮತ್ತು ಹದಿಹರೆಯದ ಯುವತಿಯರು ಬಲಿಪಶುಗಳಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುನೀಲ್ ಕುಮಾರ್, ಹಿರಿಯ ವಕೀಲ ಕೆ.ಎಸ್.ವಿಜಯ್, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕಿ ಜಯಲಕ್ಷ್ಮಮ್ಮ, ಕಾರ್ಮಿಕ ಅಧಿಕಾರಿ ಅನಿಲ್ ಬಾಲಚಂದ್ರ ಬಗಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿಜಯಕುಮಾರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಎ.ಎಂ.ವೀಣಾ ಇದ್ದರು.