ಸಾರಾಂಶ
ಕನ್ನಡಪ್ರಭ ವಾರ್ತೆ ಆಲೂರು
ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಎಲ್ಲರ ಕರ್ತವ್ಯವಾಗಬೇಕು ಎಂದು ಶಾಸಕ ಸಿಮೆಂಟ್ ಮಂಜು ತಿಳಿಸಿದರು.ತಾಲೂಕಿನ ಮರಸು ಗ್ರಾಮದಲ್ಲಿ ಬೆಂಗಳೂರು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಜನಸಾಮಾನ್ಯರು ಓಡಾಡುವ ಸಂದರ್ಭದಲ್ಲಿ ಕಾಣಸಿಗುವ ಕಲ್ಮಶವನ್ನು ಸ್ವಚ್ಛಗೊಳಿಸುವ ಮನೋಭಾವ ಹೊಂದಬೇಕು. ಸರ್ಕಾರಿ ನೌಕರರು ಗಡಿಯಾರ ನೋಡಿ ಸಂಬಳಕ್ಕಾಗಿ ಸೇವೆ ಮಾಡುವುದು ಸಲ್ಲದು. ಎಂತಹ ಶ್ರೀಮಂತರ ಹಿನ್ನೆಲೆ ಪರಿಶೀಲಿಸಿದಾಗ ಅವರು ಕೃಷಿ ಕುಟುಂಬದವರೆ ಆಗಿರುತ್ತಾರೆ. ಇತ್ತೀಚೆಗೆ ಅಲ್ಪಕಾಲದ ಬೆಳೆ ಬೆಳೆದು ಹಣದ ಆಸೆಯಿಂದ ಕೃಷಿಗೆ ಅತಿಯಾದ ವಿಷ ಬೆರೆಸುತ್ತಿರುವುದರಿಂದ ಭೂಮಿ ಫಲವತ್ತತೆಯನ್ನು ನಾಶ ಮಾಡುತ್ತಿದ್ದೇವೆ. ಸಾಧ್ಯವಾದಷ್ಟು ಸಾವಯವ ಕೃಷಿ ವಿಧಾನ ಅನುಸರಿಸುವುದು ಒಳ್ಳೆಯದು.ಶಿಬಿರಾರ್ಥಿಗಳು ಗ್ರಾಮದಲ್ಲಿರುವ ಭೌಗೋಳಿಕ, ಪ್ರಾಕೃತಿಕ ಹಿನ್ನೆಲೆಯನ್ನು ಅರಿಯಬೇಕು. ಪ್ರತಿಯೊಂದು ಗ್ರಾಮ ತನ್ನದೆ ಆದ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುತ್ತದೆ. ಅದನ್ನು ಆಳವಾಗಿ ಅರಿತು ಇತಿಹಾಸವನ್ನು ತಿಳಿದುಕೊಳ್ಳಬೇಕು. ಜನಸಾಮಾನ್ಯರಲ್ಲಿ ಪರಿಸರದಲ್ಲಿ ಸ್ವಚ್ಛತೆ, ಆರೋಗ್ಯ ಮತ್ತು ಶಿಕ್ಷಣದ ಬಗ್ಗೆ ಅರಿವು ಮೂಡಿಸಬೇಕು ಎಂದರು.ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನಿರ್ದೇಶಕ ಡಾ. ಬಿ. ರಾಜಣ್ಣ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಪ. ಪಂ. ಅಧ್ಯಕ್ಷೆ ತಾಹೆರ ಬೇಗಂ, ಡಾ. ಶಿವಶಂಕರ್, ಡಾ. ರಾಘವೇಂದ್ರ ಪ್ರಸಾದ್, ಡಾ. ಪ್ರವೀಣ್, ತಾ. ನೌಕರರ ಸಂಘದ ಅಧ್ಯಕ್ಷ ವರದರಾಜು, ಪ. ಪಂ. ಸದಸ್ಯರಾದ ನಿಂಗರಾಜು(ಪಾಪು), ಧರ್ಮ, ಗ್ರಾಮದ ಮುಖಂಡರಾದ ಚಿಕ್ಕೇಗೌಡ, ರಾಜಶೇಖರ್, ಹಾಲಪ್ಪ, ಸುಪ್ರೀತ್, ವಕೀಲ ಮಧು, ಬಿಜೆಪಿ ತಾ. ಅಧ್ಯಕ್ಷೆ ಉಮಾ ರವಿಪ್ರಕಾಶ್, ಕಸಾಪ ತಾ. ಅಧ್ಯಕ್ಷ ಗೋಪಾಲಕೃಷ್ಣ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ರತ್ನಾಕರ ಕೊಠಾರಿ, ಸುರೇಶ್, ಮುಖ್ಯೋಪಾಧ್ಯಾಯಿನಿ ಶಾರದಮ್ಮ, ಎಸ್.ಡಿ.ಎಂ.ಸಿ. ಅಧ್ಯಕ್ಷ ವಸಂತ್, ಗಂಗಣ್ಣ, ದೊಡ್ಡಯ್ಯ, ಯು. ಜೆ. ಮಲ್ಲಿಕಾರ್ಜುನ, ಶಿಬಿರಾಧಿಕಾರಿ ನಿಚಿತ ಕುಮಾರಿ, ಡಾ. ವೈಷ್ಣವಿರೆಡ್ಡಿ, ಡಾ. ಪ್ರಗತಿ ಉಪಸ್ಥಿತರಿದ್ದರು.