ಅರಣ್ಯ ಸಂಪತ್ತನ್ನು ಉಳಿಸಿ ಬೆಳೆಸುವುದು ಎಲ್ಲರ ಹೊಣೆ: ನ್ಯಾ. ಐಶ್ವರ್ಯ

| Published : Sep 14 2024, 01:54 AM IST

ಅರಣ್ಯ ಸಂಪತ್ತನ್ನು ಉಳಿಸಿ ಬೆಳೆಸುವುದು ಎಲ್ಲರ ಹೊಣೆ: ನ್ಯಾ. ಐಶ್ವರ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಕೊಪ್ಪ, ಅಮೂಲ್ಯ ಅರಣ್ಯ ಸಂಪತ್ತನ್ನು ರಕ್ಷಿಸುವ ಕಾರ್ಯದಲ್ಲಿ ನಿರತರಾಗಿದ್ದಾಗ ಹುತಾತ್ಮರಾದ ಅರಣ್ಯ ಇಲಾಖೆ ಸಿಬ್ಬಂದಿ ಬಲಿದಾನವನ್ನು ಸೆ.೧೧ ಸ್ಮರಿಸುವ ದಿನವಾಗಿದೆ ಎಂದು ಕೊಪ್ಪ ಜೆಎಂಎಫ್‌ಸಿ ನ್ಯಾಯಾಧೀಶೆ ಐಶ್ವರ್ಯ ಚಿದಾನಂದ ಪಟ್ಟಣಶೆಟ್ಟಿ ಹೇಳಿದರು.

ಕೊಪ್ಪ ಅರಣ್ಯ ಇಲಾಖೆಯಲ್ಲಿ ನಡೆದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ

ಕನ್ನಡಪ್ರಭ ವಾರ್ತೆ, ಕೊಪ್ಪ

ಅಮೂಲ್ಯ ಅರಣ್ಯ ಸಂಪತ್ತನ್ನು ರಕ್ಷಿಸುವ ಕಾರ್ಯದಲ್ಲಿ ನಿರತರಾಗಿದ್ದಾಗ ಹುತಾತ್ಮರಾದ ಅರಣ್ಯ ಇಲಾಖೆ ಸಿಬ್ಬಂದಿ ಬಲಿದಾನವನ್ನು ಸೆ.೧೧ ಸ್ಮರಿಸುವ ದಿನವಾಗಿದೆ ಎಂದು ಕೊಪ್ಪ ಜೆಎಂಎಫ್‌ಸಿ ನ್ಯಾಯಾಧೀಶೆ ಐಶ್ವರ್ಯ ಚಿದಾನಂದ ಪಟ್ಟಣಶೆಟ್ಟಿ ಹೇಳಿದರು.ಕೊಪ್ಪ ಅರಣ್ಯ ಇಲಾಖೆಯಲ್ಲಿ ನಡೆದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯಲ್ಲಿ ಮಾತನಾಡಿ, ಮನುಕುಲದ ಅಭಿವೃದ್ಧಿಗೆ ಅರಣ್ಯ ಮತ್ತು ವನ್ಯ ಜೀವಿಗಳ ರಕ್ಷಣೆ ಅತೀ ಮುಖ್ಯ. ವೃಕ್ಷ ಸಂಪತ್ತು ಮತ್ತು ವನ್ಯಜೀವಿಗಳ ಅವನತಿಗೆ ಕಾರಣವಾದ ದುಷ್ಕರ್ಮಿಗಳನ್ನು ತಡೆಯಲು ಅರಣ್ಯ ಇಲಾಖೆ ಸಿಬ್ಬಂದಿ ಪಡುವ ಕಷ್ಟ ಸಾಮಾನ್ಯವಾದುದಲ್ಲ. ಅರಣ್ಯ ಸಂಪತ್ತುಗಳನ್ನು ಉಳಿಸಿ ಬೆಳೆಸುವುದು ಕೇವಲ ಅರಣ್ಯ ಇಲಾಖೆ ಜವಾಬ್ದಾರಿಯೆಂದು ತಿಳಿಯದೆ ಅದು ಎಲ್ಲರ ಹೊಣೆಗಾರಿಕೆ ಎಂದು ತಿಳಿಯಬೇಕು ಎಂದರು.ಕೊಪ್ಪ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ನಂದೀಶ್ ಎಲ್. ಮಾತನಾಡಿ ವೀರಪ್ಪನ್ ಕೃತ್ಯಕ್ಕೆ ನೂರಾರು ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅರಣ್ಯ ರಕ್ಷಕ ಬಿ.ಸಿ. ಮೋಹನಯ್ಯ ಅವರು ವೀರಪ್ಪನ್ ಗುಂಡಿಗೆ ಬಲಿಯಾದ ಮೊದಲ ಸಿಬ್ಬಂದಿ ಎನ್ನಲಾಗಿದೆ. ಅರಣ್ಯ ಇಲಾಖೆ ಶ್ರೀನಿವಾಸ್‌ರವರನ್ನು ವೀರಪ್ಪನ್ ನ.೧೦ರಂದು ಹತ್ಯೆ ಮಾಡಿದ ದಿನವನ್ನು ಅರಣ್ಯ ಹುತಾತ್ಮರ ದಿನ ಎಂದು ಆಚರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿತ್ತು. ಸೆ.೧೧ನ್ನು ರಾಷ್ಟ್ರೀಯ ಹುತಾತ್ಮರ ದಿನವೆಂದು ರಾಷ್ಟ್ರ ಮಟ್ಟದಲ್ಲಿಯೂ, ನ.೧೦ನ್ನು ರಾಜ್ಯಾದ್ಯಂತ ಶ್ರೀನಿವಾಸ್‌ರವರ ಸ್ಮರಣಾರ್ಥ ಹುತಾತ್ಮರ ದಿನವೆಂದು ಆಚರಿಸಲಾಗುತ್ತಿದೆ.

೨೮೦ ವರ್ಷಗಳ ಹಿಂದೆ ನಡೆದ ಬಿಷ್ಣೋಯಿಗಳ ಹತ್ಯಾಕಾಂಡ ದೇಶವನ್ನು ನಲುಗಿಸಿದ ಮತ್ತೊಂದು ಘಟನೆಯಾಗಿದೆ. ರಾಜಾಸ್ತಾನದ ಜೋಧಪುರದ ಮಹಾರಾಜನೊಬ್ಬ ಹೊಸ ಅರಮನೆ ಕಟ್ಟಲು ಅರಣ್ಯದಿಂದ ಮರಗಳನ್ನು ಕಡಿದು ತರುವಂತೆ ಸೈನಿಕರಿಗೆ ಸೂಚಿಸಿದ್ದ. ಕೇಜರ್ಲಿ ಮರಗಳನ್ನು ಜತನದಿಂದ ಕಾಪಾಡಿಕೊಂಡಿದ್ದ ಬಿಷ್ಣೋಯಿ ಗ್ರಾಮಸ್ಥರು ಮರ ಕಡಿಯದಂತೆ ಸೈನಿಕರಿಗೆ ಅಡ್ಡಲಾಗಿ ನಿಂತು ಪ್ರತಿಭಟಿಸಿದ್ದರು. ಗ್ರಾಮಸ್ಥರ ಮೇಲೆ ಕರುಣೆ ತೋರದೆ ಮಹಿಳೆಯರು, ಮಕ್ಕಳೆನ್ನದೆ ಅಡ್ಡ ಬಂದ ಸುಮಾರು ೩೬೩ ಪರಿಸರ ಪ್ರೇಮಿಗಳನ್ನು ೧೭೩೦ರ ಸೆ.೧೧ರಂದು ಹತ್ಯೆ ಮಾಡಲಾಗಿತ್ತು. ಈ ದಿನವನ್ನು ಅವರ ತ್ಯಾಗ ಬಲಿದಾನದ ಸ್ಮರಣಾರ್ಥ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನ ಎಂದು ಆಚರಿಸಲಾಗುತ್ತಿದೆ. ಪ್ರತೀ ಜಿಲ್ಲಾ ಕೇಂದ್ರದಲ್ಲಿಯೂ ಈ ದಿನವನ್ನು ಅರಣ್ಯ ರಕ್ಷಣೆ ಕಾರ್ಯದ ವೇಳೆ ಬಲಿಯಾದ ಸಿಬ್ಬಂದಿ ಹೆಸರು ಹೇಳುವ ಮೂಲಕ ಅವರನ್ನು ಸ್ಮರಿಸಿ ಕೊಳ್ಳಲಾಗುತ್ತಿದೆ. ಕಠಿಣ ಕಾನೂನುಗಳನ್ನು ಜಾರಿಗೆ ತಂದ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಸತತ ಪ್ರಯತ್ನದಿಂದ ಎಗ್ಗಿಲ್ಲದೆ ನಡೆಯುತ್ತಿದ್ದ ಅರಣ್ಯ ನಾಶ ಮತ್ತು ಕಾಡುಪ್ರಾಣಿಗಳ ಬೇಟೆ ಚಟುವಟಿಕೆಗಳು ನಿಯಂತ್ರಣಕ್ಕೆ ಬಂದಿವೆ ಆದರೆ, ಸಂಪೂರ್ಣವಾಗಿ ತಡೆಯುವುದು ಸಾಧ್ಯವಾಗಿಲ್ಲ. ಹಾಗೆಯೇ ಅರಣ್ಯ ರಕ್ಷಕರು ಜೀವ ಕಳೆದುಕೊಳ್ಳುವುದು ಕೂಡ ನಿಂತಿಲ್ಲ ಎಂದರು. ಬಾಳೆಹೊನ್ನೂರು ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಿ.ಜಿ.ಮೋಹನ್ ಕುಮಾರ್, ನ.ರಾ.ಪುರ ಆರ್.ಎಫ್.ಒ ಪ್ರವೀಣ್ ಕುಮಾರ್, ಕೊಪ್ಪ ಆರ್.ಎಫ್.ಒ. ರಂಗನಾಥ್, ಪತ್ರಾಂಕಿತ ವ್ಯವಸ್ಥಾಪಕ ಎಚ್.ವಿ.ರಾಜೇಶ್, ಕೊಪ್ಪ ವಕೀಲರ ಸಂಘದ ಅಧ್ಯಕ್ಷ ವಿಕ್ರಂ ನಿಗಳೆ, ಕೊಪ್ಪ ಪೊಲೀಸ್ ವೃತ್ತ ನಿರೀಕ್ಷಕ ಮಂಜು.ಕೆ., ಅರಣ್ಯ ಇಲಾಖೆ ಎಂ.ಆರ್. ರಮೇಶ್, ಎಚ್.ವಿ. ರಾಜೇಶ್, ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.