ತಾಳಿಕೋಟೆ ತಾಲೂಕಿನ ಬಳಗಾನೂರ ಗ್ರಾಮದ ವೀರಯೋಧ ಸಿದ್ದಣ್ಣ ಮಾದರ ಅವರ ಮೂರ್ತಿ ಅನಾವರಣ ಕಾರ್ಯಕ್ರಮವನ್ನು ಡಾ.ಪ್ರಭುಗೌಡ ಲಿಂಗದಳ್ಳಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಸೈನಿಕರು ತಮ್ಮ ಕುಟುಂಬ, ವೈಯಕ್ತಿಕ ಜೀವನ ಹಾಗೂ ಸುಖ-ಸೌಲಭ್ಯಗಳನ್ನು ಬದಿಗೊತ್ತಿ ದೇಶದ ಭದ್ರತೆಗಾಗಿ ಸೇವೆ ಸಲ್ಲಿಸುತ್ತಾರೆ. ಅಂತಹ ವೀರಯೋಧರ ತ್ಯಾಗವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಸಮಾಜದ ಜವಾಬ್ದಾರಿಯಾಗಿದೆ ಎಂದು ವಿಜಯಪುರ ಅನುಗ್ರಹ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞವೈದ್ಯ ಡಾ.ಪ್ರಭುಗೌಡ ಲಿಂಗದಳ್ಳಿ ಹೇಳಿದರು.

ತಾಲೂಕಿನ ಬಳಗಾನೂರ ಗ್ರಾಮದಲ್ಲಿ ಮಂಗಳವಾರ ದೇಶದ ರಕ್ಷಣೆಗಾಗಿ ತಮ್ಮ ಅಮೂಲ್ಯ ಜೀವನವನ್ನು ಮುಡಿಪಾಗಿಟ್ಟು ಪ್ರಾಣತ್ಯಾಗ ಮಾಡಿದ ಹುತಾತ್ಮ ವೀರಯೋಧ ಸಿದ್ದಣ್ಣ ಮಾದರ ಅವರ ಪ್ರತಿಮೆ ಅನಾವರಣ ಹಾಗೂ ಮಾಜಿ ಸೈನಿಕರ ಗೌರವ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ಸಿದ್ದಣ್ಣ ಮಾದರ ಅವರ ಸ್ಮರಣಾರ್ಥ ನಿರ್ಮಿಸಿರುವ ಪ್ರತಿಮೆ ಮಕ್ಕಳಲ್ಲಿ ದೇಶಪ್ರೇಮ ಹಾಗೂ ದೇಶಸೇವೆಯ ಭಾವನೆ ಮೂಡಿಸುವ ಪ್ರೇರಣಾ ಕೇಂದ್ರವಾಗಲಿದೆ ಎಂದರು.

ಮುಖ್ಯ ಅತಿಥಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಬಸನಗೌಡ ಮಾಡಗಿ, ಸಾನ್ನಿಧ್ಯ ವಹಿಸಿದ್ದ ಹಿರೂರ ಅನ್ನದಾನೇಶ್ವರ ಮಠದ ಗುರು ಜಯಸಿದ್ದೇಶ್ವರ ಸ್ವಾಮೀಜಿ ಮಾತನಾಡಿದರು.ಮಾಜಿ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಹಾಗೂ ನಿವೃತ್ತ ಶಿಕ್ಷಕ ಎಸ್.ಆಯ್.ಕಡಕೋಳ ಅವರು ವೀರಯೋಧ ಸಿದ್ದಣ್ಣ ಮಾದರ ಅವರ ಜೀವನ ಚರಿತ್ರೆ ಕುರಿತು ವಿವರಿಸಿದರು.

ಬಳಗಾನೂರಿನ ಗ್ರಾಮಸ್ಥರು ಮತ್ತು ಮುಖಂಡರು ಶ್ರೀಗಳ ಸಮ್ಮುಖದಲ್ಲಿ ವೀರಯೋಧ ಸಿದ್ಧಣ್ಣ ಮಾದರ ಅವರ ಪ್ರತಿಮೆಅನಾವರಣಗೊಳಿಸಲಾಯಿತು.

ಇದೇ ವೇಳೆ ವೀರಯೋಧ ಸಿದ್ಧಣ್ಣ ಮಾದರ ಅವರ ತಾಯಿ ಸಂಗವ್ವ ಮಾದರ ಹಾಗೂ ಪತ್ನಿ ಕವಿತಾ ಮಾದರ ಅವರನ್ನು ಗ್ರಾಮಸ್ಥರ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಮತ್ತು ೧೦೦ಕ್ಕೂ ಅಧಿಕ ಮಾಜಿ ಸೈನಿಕರಿಗೆ ಹಾಗೂ ಶಾಲೆಯ ಮುಖ್ಯಗುರುಗಳು ಹಾಗೂ ಶಿಕ್ಷಕರಿಗೆ ವೀರಯೋಧ ಸಿದ್ದಣ್ಣ ಮಾದರ ಕುಟುಂಬದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಂತಯ್ಯ ಮಠ, ಶ್ರೀನಾಥಯ್ಯ ಹಿರೇಮಠ, ನಿಂಗನಗೌಡ ಪಾಟೀಲ, ಮಲ್ಲಣ್ಣ ದೋರನಳ್ಳಿ, ಚನ್ನಣ್ಣ ಅಲದಿ, ಸಂಗನಗೌಡ ಬಿರಾದಾರ, ಪ್ರಭುಗೌಡ ಪಾಟೀಲ, ಎಂ.ಎ.ಮುಲ್ಲಾ, ಸಾಹೇಬಗೌಡ ಬಿರಾದಾರ, ಪರಪ್ಪ ಅಂಬಿಗೇರ, ಮುಕ್ತುಮಸಾ ವಾಲಿಕಾರ, ರಮೇಶ ಫೀರಾಪೂರ, ಬಸನಗೌಡ ದೋರನಳ್ಳಿ, ಬಸವರಾಜ ತಳವಾರ, ಶಿವಣ್ಣ ಹಡಪದ, ಹಿರಗಪ್ಪ ಅರಳಿಕಟ್ಟಿ, ಎಸ್.ಐ.ಕಡಕೋಳ, ಶಿವಣ್ಣ ಬಾಗೇವಾಡಿ ಇತರರು ಇದ್ದರು.

ರಂಜಾನ್ ವಾಲೀಕಾರ ಸ್ವಾಗತಿಸಿದರು. ಶಿಕ್ಷಕಿ ಮಡಿವಾಳಮ್ಮ ನಾಡಗೌಡ ನಿರೂಪಿಸಿದರು. ಶಿವು ಹೊಸಮನಿ ವಂದಿಸಿದರು.

ದೇಶದ ಗಡಿಯಲ್ಲಿ ನಿಂತು ದೇಶದ ರಕ್ಷಣೆ ಮಾಡುವ ಸೈನಿಕರು ಹಾಗೂ ದೇಶದ ಜನರಿಗೆ ಅನ್ನ ನೀಡುವ ರೈತರು ದೇಶದ ಎರಡು ಕಣ್ಣುಗಳಿದ್ದಂತೆ. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಸೈನಿಕನನ್ನು ಸ್ಮರಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಸೈನಿಕರ ಕುಟುಂಬದ ನೋವು ಮತ್ತು ತ್ಯಾಗವನ್ನು ಸಮಾಜ ಗೌರವದಿಂದ ಕಾಣಬೇಕು.

- ಡಾ.ಪ್ರಭುಗೌಡ ಲಿಂಗದಳ್ಳಿ ನೇತ್ರ ತಜ್ಞವೈದ್ಯರು ಅನುಗ್ರಹ ಕಣ್ಣಿನ ಆಸ್ಪತ್ರೆ ವಿಜಯಪುರ