ಪರಿಸರ ಸ್ವಚ್ಛವಾಗಿಡುವುದು ಪ್ರತಿಯೊಬ್ಬರ ಕರ್ತವ್ಯ

| Published : Oct 31 2025, 02:00 AM IST

ಸಾರಾಂಶ

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವದ ಅಂಗವಾಗಿ ನಗರದ ನೆಹರೂ ಮಾರ್ಕೆಟ್ ಬಳಿ ಪರಿಸರ ಸಂರಕ್ಷಣೆ ಕುರಿತು ಬೀದಿ ನಾಟಕ ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಹಿರಿಯೂರು

ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಹಾಗೂ ನಗರಸಭೆಯ ಸಂಯುಕ್ತಾಶ್ರಯದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವದ ಅಂಗವಾಗಿ ನಗರದ ನೆಹರೂ ಮಾರ್ಕೆಟ್ ಹತ್ತಿರ, ಖಾಸಗಿ ಬಸ್ ನಿಲ್ದಾಣದ ಹತ್ತಿರ ಮತ್ತು ಟಿಬಿ ವೃತ್ತದ ನೂರು ಅಡಿ ರಸ್ತೆಯಲ್ಲಿ ಪರಿಸರ ಸಂರಕ್ಷಣೆ ಕುರಿತು ಬೀದಿ ನಾಟಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಸಿಎಂ ತಿಪ್ಪೇಸ್ವಾಮಿ, ನಗರವನ್ನು ಪ್ಲಾಸ್ಟಿಕ್ ಮುಕ್ತ ಮಾಡುವಲ್ಲಿ ಎಲ್ಲರೂ ಸರ್ಕಾರದ ಜೊತೆ ಕೈಜೋಡಿಸಬೇಕು. ಬೇರೆ ಬೇರೆ ದೇಶಗಳಿಗೆ ಹೋಲಿಕೆ ಮಾಡಿದರೆ ಆ ದೇಶಗಳಲ್ಲಿ ಸ್ವಚ್ಛತೆ, ನೈರ್ಮಲ್ಯ, ಆರೋಗ್ಯ, ಪರಿಸರ ಕಾಳಜಿಯಂತಹ ವಿಷಯಗಳಿಗೆ ಬಹಳ ಮಹತ್ವವನ್ನು ನೀಡುತ್ತಾರೆ. ಆದರೆ ನಮ್ಮ ಜನತೆ ಸದಾ ಸ್ವಚ್ಛತೆಗೆ ವಿರುದ್ಧವಾಗಿಯೇ ನಡೆದುಕೊಳ್ಳುತ್ತ ಬಂದಿದ್ದಾರೆ. ಎಲ್ಲಿ ನಿಂತಿರುತ್ತಾರೋ ಅಲ್ಲಿಯೇ ಉಗುಳುವುದು, ತಿಂಡಿ ತಿನಿಸುಗಳ ಪಾಕೆಟ್ ಗಳನ್ನು ಬೇಕಾಬಿಟ್ಟಿ ಬಿಸಾಕುವುದು, ಅತೀ ಹೆಚ್ಚು ಪ್ಲಾಸ್ಟಿಕ್ ಗಳನ್ನು ಬಳಸುತ್ತಿರುವುದು ಇವೆಲ್ಲವೂ ಕೂಡ ನಮ್ಮ ವಿನಾಶಕ್ಕೆ ನಾವೇ ದಾರಿ ಮಾಡಿಕೊಟ್ಟಂತೆ ಆಗುತ್ತದೆ. ಹಾಗಾಗಿ ನಗರದ ಜನತೆ ಇನ್ನು ಮುಂದೆ ಆದರೂ ಸರ್ಕಾರದ ಜೊತೆ ಹಾಗೂ ನಗರಸಭೆ, ತಾಲೂಕು ಪಂಚಾಯಿತಿ, ತಾಲೂಕು ಆಡಳಿತದ ಜೊತೆಗೆ ಕೈಜೋಡಿಸಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಸ್ವಚ್ಛತೆ ಇದ್ದಲ್ಲಿ ಆರೋಗ್ಯವೂ ಇರುತ್ತದೆ ಎಂಬುದನ್ನು ಎಲ್ಲರೂ ಅರಿಯಬೇಕು ಎಂದರು.

ಈ ವೇಳೆ ತಾಲೂಕು ಸಾಕ್ಷರತಾ ಸಂಯೋಜಕ ಸಿ.ಶಿವಾನಂದ್, ಕಲಾವಿದರಾದ ಕೂನಿಕೆರೆ ಮಾರುತೇಶ, ಆಶಾ, ಸುಮ, ಚನ್ನಬಸಪ್ಪ, ಯಲ್ಲಪ್ಪ, ಪರಶುರಾಮ್ ಮುಂತಾದವರು ಹಾಜರಿದ್ದರು.