ಸಾರಾಂಶ
ಶೃಂಗೇರಿ ಕಾಳಿಕಾಂಬಾ ರಸ್ತೆಯಲ್ಲಿ ನೂತನ ಆರ್ಯ ಈಡಿಗೆ ಸಭಾಭವನ ಉದ್ಘಾಟನೆ
ಕನ್ನಡಪ್ರಭ ವಾರ್ತೆ, ಶೃಂಗೇರಿಸಮಾಜದಲ್ಲಿ ಬದುಕುತ್ತಿರುವ ಪ್ರತಿಯೊಬ್ಬ ವ್ಯಕ್ತಿಯ ಮೇಲೆ ಸಮಾಜದ ಋಣವಿದೆ. ಸಮಾಜ ತನಗೇನು ನೀಡಿದೆ ಎನ್ನುವುದು ಮುಖ್ಯವಲ್ಲ. ಸಮಾಜಕ್ಕೆ ನಾನೇನು ನೀಡಬಲ್ಲೆ ಎಂಬುದು ಮುಖ್ಯ. ಆದ್ದರಿಂದ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಜೊತೆಗೆ ಸಮಾಜದ ಋಣಸಂದಾಯ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಗೌರಿಗದ್ದೆ ಸ್ವರ್ಣ ಪೀಠಿಕಾಪುರ ಆಶ್ರಮದ ಶ್ರೀ ಅವಧೂತ ವಿನಯ ಗುರೂಜಿ ಹೇಳಿದರು.
ಪಟ್ಟಣದ ಕಾಳಿಕಾಂಬಾ ರಸ್ತೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿದ್ದ ಆರ್ಯ ಈಡಿಗೆ ಸಭಾಭವನ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಶಿಕ್ಷಣದಿಂದ ಸಂಸ್ಕಾರ ಸಿಗುತ್ತದೆ. ಸಂಘಟನೆಯಿಂದ ಶಿಕ್ಷಣ. ಬ್ರಹ್ಮಶ್ರೀ ನಾರಾಯಣ ಗುರುಗಳು ಶಿಕ್ಷಣ, ಸಂಘಟನೆಗೆ ಪ್ರಾಮುಖ್ಯತೆ ನೀಡಿದ್ದರು. ಶಿಕ್ಷಣ, ಸಂಘಟನೆಯಿಂದ ಮಾತ್ರ ಸಮುದಾಯ, ಸಮಾಜದ ಉದ್ಧಾರ ಸಾಧ್ಯ ಎಂದು ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟು ಮಾಡಿದರು ಎಂದರು.ಸಮಾಜದಲ್ಲಿ ತಾಂಡವಾಡುತ್ತಿದ್ದ ಅಸ್ಪೃಷ್ಯತೆ, ಜಾತೀಯತೆ, ಮೂಡನಂಬಿಕೆಗಳನ್ನು ತೊಲಗಿಸಿ ಸಮಾನತೆ, ವೈಚಾರಿಕ ಕ್ರಾಂತಿಯನ್ನುಂಟು ಮಾಡಿದರು.ಮನಸಿದ್ದವನಿಗೆ ಒಳ್ಳೇ ಜ್ಞಾನ ಸಿಗುತ್ತದೆ. ಓದಿಗಿಂತ ಅನುಭವಿಯಾದವನಿಗೆ ಜ್ಞಾನ ಜಾಸ್ತಿ. ಒಳ್ಳೆಯದನ್ನು ನೋಡಿ ಒಳ್ಳೆ ಕೆಲಸ ಮಾಡಬೇಕು ಎಂದು ಸಲಹೆ ಮಾಡಿದರು.
ವ್ಯಕ್ತಿಗೆ ಗಿಂತ ವ್ಯಕ್ತಿತ್ವಕ್ಕೆ ಬೆಲೆ. ರಾಜಕಾರಣ ಕೇವಲ ಆರೋಪಗಳೇ ಆಗಬಾರದು. ಕೆಲಸ, ಅಭಿವೃದ್ಧಿಯ ರಾಜಕಾರಣ ವಾಗಬೇಕು. ರಾಜಧರ್ಮದ ಆಚರಣೆ, ಪಾಲನೆ ಅಗತ್ಯ. ಹೆಣ್ಣು ಮಕ್ಕಳಿಗೆ ಶಿಕ್ಷಣ ಸಿಗಬೇಕು. ಸಮುದಾಯದ ಕೆಲಸ ಮಾಡಬೇಕು.ಬ್ರಹ್ಮಶ್ರೀಗಳು ದೇವಸ್ಥಾನಗಳನ್ನು ಸಾಮಾಜಿಕ,ಶೈಕ್ಷಣಿಕ ಕ್ರಾಂತಿಗೆ ಬಳಸಿದರು.ನಾರಾಯಣ ಗುರುಗಳ ತದ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಸೋಲೂರು ಆರ್ಯಈಡಿಗ ಮಹಾಸಂಸ್ಥಾನ ಪೀಠದ ಶ್ರೀ ವಿಖ್ಯಾತ ನಂದ ಸ್ವಾಮೀಜಿ ಆಶೀರ್ವಚನ ನೀಡಿ ಬ್ರಹ್ಮಶ್ರೀ ನಾರಾಯಣ ಗುರುಗಳು ಮಾನವ ಕುಲಕ್ಕೆ ಮಹಾನ್ ಸಂದೇಶ ನೀಡಿದರು. ಶಿಕ್ಷಣ,ಸಂಘಟನೆ,ಆರ್ಥಿಕ ಶಕ್ತಿಗಳ ಮೂಲಕ ಸಮಾಜ ಪರಿವರ್ತನೆ ಮಾಡಿದರು. ಭೂಮಿಯಲ್ಲಿ ನಾಲ್ಕು ವಿಧಗಳಿದ್ದು ಮೊದಲ ವಿಧದಲ್ಲಿ ಮನುಷ್ಯ ಭಕ್ತಿ, ಭಜನೆಯಿಂದ ಬದುಕುತ್ತಿದ್ದ, ಎರಡನೇ ವಿಧದಲ್ಲಿ ಯುದ್ಧಗಳನ್ನು ಮಾಡುತ್ತಿದ್ದ, ಮೂರನೇ ವಿಧದಲ್ಲಿ ಮನುಷ್ಯ ಊಟಕ್ಕಾಗಿ ಜೀತ ಮಾಡಿ ಬದುಕುತ್ತಿದ್ದ, ನಾಲ್ಕನೆಯ ವಿಧ ಕಲಿಯುಗದಲ್ಲಿ ಕಲಿತವರಿಗೆ ಮಾತ್ರ ಯುಗ. ಇಲ್ಲಿ ಶಿಕ್ಷಣ ಮುಂದಿನ ಜಗತ್ತನ್ನು ನಿರ್ದರಿಸುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಶಿಕ್ಷಣ ಪಡೆಯಬೇಕು ಎಂದು ತಿಳಿಸಿದರು.
ಆರ್ಯ ಈಡಿಗ ಸಮುದಾಯ ಸಮಾಜಕ್ಕೆ ಮಹತ್ತರ ಕೊಡುಗೆ ನೀಡಿದೆ. ಬಂಗಾರಪ್ಪನವರು ಸಿಎಂ ಆಗಿ ಜನಪರ ಯೋಜನೆ ಗಳನ್ನು ತಂದರು. ಡಾ.ರಾಜ್ ಕುಮಾರ್ ಕಲಾರಂಗದಲ್ಲಿ ಉನ್ನತ ಸಾಧನೆ ಮಾಡಿದರು. ಪುನೀತ್ ರಾಜ್ ಕುಮಾರ್ ಸಮಾಜಿಕ ಸೇವೆ ಮಾಡಿದ್ದರು. ಸಮುದಾಯದ ಏಳಿಗೆ ಜೊತೆ ಸಮಾಜದ ಅಭಿವೃದ್ದಿ ಮಾಡಬೇಕು. ಒಗ್ಗಟ್ಟಿನಿಂದ ಮಾತ್ರ ಸಾಧನೆ ಸಾಧ್ಯ. ಯುದ್ದಗಳನ್ನು ಮಾಡಿ ಸಾಮ್ರಾಜ್ಯ ಆಳಿದ ರಾಜ ಮಹಾರಾಜರು ಮಣ್ಣಲ್ಲಿ ಮಣ್ಣಾಗಿ ಹೋದರು. ಆದರೆ ಅವರ ನಿರ್ಮಾಣ ಕಾರ್ಯಗಳೆಲ್ಲ ಇಂದಿಗೂ ಶಾಶ್ವತವಾಗಿವೆ. ಸೇವೆ ಅಮರ, ಹಣ ಸಂಪತ್ತು ನಶ್ವರ. ಶಿಕ್ಷಣ ಪಡೆದು ಉತ್ತಮ ವ್ಯಕ್ತಿ ಗಳಾಗಿ ಸಮಾಜ ರೂಪಿಸಬೇಕು ಎಂದರು.ಶಾಸಕ ಟಿ.ಡಿ.ರಾಜೇಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಈಡಿಗ ಸಮುದಾಯ ಶ್ರಮಿಕ ಸಮುದಾಯ. ಸಮಾಜಕ್ಕೆ ಮಹತ್ತರ ಕೊಡುಗೆ ನೀಡಿದೆ. ಸಮುದಾಯದವರು ಶಿಕ್ಷಣ, ಸಂಘಟನೆಯಿಂದ ಮಾತ್ರ ಅಭಿವೃದ್ಧಿ ಹೊಂದಬೇಕು. ಶೃಂಗೇರಿ ಯಲ್ಲಿ ಈಡಿಗ ಸಮುದಾಯ ಉತ್ತಮ ಸಾಮಾಜಿಕ, ಶೈಕ್ಷಣಿಕ ಸೇರಿದಂತೆ ಉತ್ತಮ ಕೆಲಸಗಳನ್ನು ಮಾಡುತ್ತಿದೆ ಎಂದರು.
ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ ಸಮುದಾಯದ ಮುಖಂಡರು ಸರ್ವರನ್ನು ಮುನ್ನಡೆಸಿಕೊಂಡು ಹೋಗಬೇಕು. ಸಮಾಜಕ್ಕೆ ಮಾರ್ಗಸೂಚಿಯಾಗಬೇಕು. ಗಾಂಧೀಜಿ ನಾರಾಯಣ ಗುರುಗಳ ಆಶ್ರಮಕ್ಕೆ ಭೇಟಿ ನೀಡಿದ್ದರು. ಇವರು ನಾರಾಯಣ ಗುರುಗಳನ್ನು ಜಗತ್ತಿನ ಆಧುನಿಕ ಬ್ರಹ್ಮ ಎಂದು ಕರೆದರು. ಜಾತಿ, ಮತ, ಪಂಥ, ಮೇಲು, ಕೀಳು ಎಲ್ಲದಕ್ಕಿಂತ ಒಂದೇ ಕುಲ, ಒಂದೇ ಜಾತಿ, ಒಂದೇ ತತ್ವ ಎಂದು ಸಾರಿದರು. ಸಮಾಜ ತಿದ್ದುವ ಕೆಲಸ ಸಂಘಟನೆಗಳ ಜವಾಬ್ದಾರಿಯಾಗಬೇಕು ಎಂದರು.ಮಾಜಿ ಸಚಿವ ಡಿ.ಎನ್.ಜೀವರಾಜ್, ನಿಟ್ಟೂರು ಶ್ರೀ ನಾರಾಯಣ ಗುರು ಮಹಾಸಂಸ್ಥಾನ ಪೀಠದ ಶ್ರೀ ರೇಣುಕಾನಂದ ಸ್ವಾಮೀಜಿ,ಅಮ್ಮ ಪೌಂಡೇಷನ್ ನ ಸುಧಾಕರ ಶೆಟ್ಟಿ, ಸದಾಶಿವ ಮಾತನಾಡಿದರು. ತಾಲೂಕು ಆರ್ಯ ಈಡಿಗ ಸಂಘದ ಅಧ್ಯಕ್ಷ ಎ.ಆರ್. ನಾರಾಯಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಎಂ.ಆರ್,ಪೂರ್ಣೇಶ್,ಪ್ರವೀಣ ಪೂಜಾರಿ, ಎಚ್.ಎಂ.ಸತೀಶ್, ಭಾಸ್ಕರ ಪೂಜಾರಿ ಮತ್ತಿತರರು ಇದ್ದರು.
20 ಶ್ರೀ ಚಿತ್ರ 1-ಶೃಂಗೇರಿ ಪಟ್ಟಣದ ಕಾಳಿಕಾಂಬಾ ರಸ್ತೆಯಲ್ಲಿರುವ ನೂತನ ಆರ್ಯ ಈಡಿಗ ಸಭಾಭವನವನ್ನು ಶಾಸಕ ಟಿ.ಡಿ.ರಾಜೇಗೌಡ ಉದ್ಘಾಟಿಸಿದರು.