ಸಾರಾಂಶ
ಚಿತ್ರದುರ್ಗ: ದೇಶದ ನಾಗರಿಕರು ನೆಮ್ಮದಿಯಿಂದ ಜೀವಿಸಲು ಪೊಲೀಸರು ತಮ್ಮ ಪ್ರಾಣ ಪಣಕಿಟ್ಟು ಕರ್ತವ್ಯ ನಿರ್ವಹಿಸುತ್ತಾರೆ. ಅವರ ತ್ಯಾಗ ಹಾಗೂ ಬಲಿದಾನ ಸ್ಮರಿಸುವುದು ಎಲ್ಲರ ಕರ್ತವ್ಯ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.
ಚಿತ್ರದುರ್ಗ: ದೇಶದ ನಾಗರಿಕರು ನೆಮ್ಮದಿಯಿಂದ ಜೀವಿಸಲು ಪೊಲೀಸರು ತಮ್ಮ ಪ್ರಾಣ ಪಣಕಿಟ್ಟು ಕರ್ತವ್ಯ ನಿರ್ವಹಿಸುತ್ತಾರೆ. ಅವರ ತ್ಯಾಗ ಹಾಗೂ ಬಲಿದಾನ ಸ್ಮರಿಸುವುದು ಎಲ್ಲರ ಕರ್ತವ್ಯ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.
ನಗರದ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆ ಆವರಣದಲ್ಲಿ ಸೋಮವಾರ ಜಿಲ್ಲಾ ಪೊಲೀಸ್ ಇಲಾಖೆಯಿಂದ ಆಯೋಜಿಸಲಾಗಿದ್ದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಹುತಾತ್ಮರ ಸ್ಮಾರಕಕ್ಕೆ ಗೌರವ ಸಲ್ಲಿಸಿ ಮಾತನಾಡಿದ ಅವರು, 1959 ಅಕ್ಟೋಬರ್ 21 ರಂದು ಲಡಾಕ್‍ನ ಇಂಡೋ ಟಿಬೇಟಿಯನ್ ಗಡಿಯಲ್ಲಿ ಗಸ್ತು ತಿರುಗುತ್ತಿದ್ದ ಸಿಆರ್‌ಪಿಎಫ್ ಪಡೆಯ ಮೇಲೆ ಚೈನಾ ಸೇನೆ ಆಕ್ರಮಣ ನಡೆಸಿತು. ಸಮುದ್ರ ಮಟ್ಟದಿಂದ ಸುಮಾರು 18 ಸಾವಿರ ಅಡಿ ಎತ್ತರದಲ್ಲಿ ಜರುಗಿದ ಈ ಯುದ್ಧದಲ್ಲಿ, ತೀವ್ರ ಚಳಿ ಹಾಗೂ ಕಠಿಣ ಪರಿಸ್ಥಿತಿಯಲ್ಲಿ ಧೈರ್ಯದಿಂದ ಹೋರಾಟ ನಡೆಸಿದ ಸಿಆರ್‌ಪಿಎಫ್ ಪಡೆಯ10 ಜನ ಪೊಲೀಸರು ಹುತಾತ್ಮರಾದರು. ಇವರ ಸ್ಮರಣಾರ್ಥ ಪ್ರತಿ ವರ್ಷ ಹುತಾತ್ಮ ದಿನರಣೆ ಆಚರಿಸಲಾಗುತ್ತಿದೆ. ಇದುವರೆಗೂ ದೇಶಾದ್ಯಂತ 40 ಸಾವಿರಕ್ಕೂ ಹೆಚ್ಚು ಪೊಲೀಸರು ಹುತಾತ್ಮರಾಗಿದ್ದಾರೆ ಎಂದು ತಿಳಿಸಿದರು.ಬೇಂದ್ರೆ ಕವನದ ಸಾಲು “ಎನ್ನ ಪಾಡೆನಗಿರಲಿ, ಅದರ ಹಾಡನ್ನಷ್ಟೆ ನೀಡುವೆನು ರಸಿಕ ನಿನಗೆ; ಕಲ್ಲುಸಕ್ಕರೆಯಂಥ ನಿನ್ನೆದೆಯು ಕರಗಿದರೆ ಆ ಸವಿಯ ಹಣಿಸು ನನಗೆ " ಎನ್ನುವಂತೆ ಎಂತಹದೇ ಸಂದರ್ಭದಲ್ಲಿ ಪೊಲೀಸರು ಅವರ ಎಲ್ಲಾ ಕಷ್ಟ ಕಾರ್ಪಣ್ಯ ಮರೆತು ಜನರ ರಕ್ಷಣೆ ಮಾಡುತ್ತಾರೆ ಎಂದು ವೆಂಕಟೇಶ್ ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ದೇಶದಾದ್ಯಂತ ಹುತಾತ್ಮರಾದ 216 ಪೊಲೀಸ್ ಹಾಗೂ ಸಿಬ್ಬಂದಿ ಹೆಸರು ಈ ಸಂದರ್ಭದಲ್ಲಿ ವಾಚಿಸಿದರು.ಇದಕ್ಕೂ ಮುನ್ನ ಮುಖ್ಯ ಅತಿಥಿಗಳು ಸೇರಿ ಇತರೆ ಗಣ್ಯರು ಹುತಾತ್ಮರ ಸ್ಮಾರಕಕ್ಕೆ ಹೂಗುಚ್ಛ ಇರಿಸಿ ಗೌರವ ಸಮರ್ಪಿಸಿದರು. ಹುತ್ಮಾತರ ಗೌರವಾರ್ಥ 3 ಸುತ್ತಿನ ವಾಲಿ ಫೈರಿಂಗ್ ಮಾಡುವುದರ ಜೊತೆಗೆ ಪೊಲೀಸ್ ವಾದ್ಯ ವೃಂದದಿಂದ ರಾಷ್ಟ್ರಗೀತೆ ನುಡಿಸಲಾಯಿತು. 2 ನಿಮಿಷಗಳ ಮೌನಾಚರಣೆ ಮಾಡಲಾಯಿತು.
2023ರ ಸೆಪ್ಟೆಂಬರ್ 1ರಿಂದ 2024ರ ಆಗಸ್ಟ್ 30ರವರೆಗೆ ದೇಶಾದ್ಯಂತ 216 ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಈ ಅವಧಿಯಲ್ಲಿ ಕರ್ನಾಟಕದ 5 ಪೊಲೀಸ್ ಸಿಬ್ಬಂದಿ ಕರ್ತವ್ಯದ ವೇಳೆ ಹುತಾತ್ಮರಾಗಿದ್ದು, ಅವರನ್ನು ಸ್ಮರಿಸಲಾಯಿತು. ಕಾರ್ಯಕ್ರಮದಲ್ಲಿ ಕರ್ತವ್ಯ ನಿರತ ಪೊಲೀಸ್ ಅಧಿಕಾರಿಗಳು, ನಿವೃತ್ತ ಪೊಲೀಸ್ ಸಿಬ್ಬಂದಿ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.