ಶಿಕ್ಷಣ ಕೊಟ್ಟ ಗುರುಗಳ ಸ್ಮರಿಸುವುದು ಎಲ್ಲರ ಕರ್ತವ್ಯ

| Published : Jul 22 2024, 01:19 AM IST

ಸಾರಾಂಶ

ಮಾಗಡಿ: ಪಟ್ಟಣದ ರಾಮಮಂದಿರದಲ್ಲಿ ಮಾತಾ ಗಾಯತ್ರಿ ವಿಪ್ರ ವೃಂದ ಮಹಿಳಾ ಸಂಘ ಹಮ್ಮಿಕೊಂಡಿದ್ದ ಗುರುಪೌರ್ಣಿಮೆ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಶಂಕರಾಚಾರ್ಯರ ಭಾವಚಿತ್ರಕ್ಕೆ ವಿಶೇಷ ಪೂಜೆ ಹಾಗೂ ರಾಮನಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು.

ಮಾಗಡಿ: ಪಟ್ಟಣದ ರಾಮಮಂದಿರದಲ್ಲಿ ಮಾತಾ ಗಾಯತ್ರಿ ವಿಪ್ರ ವೃಂದ ಮಹಿಳಾ ಸಂಘ ಹಮ್ಮಿಕೊಂಡಿದ್ದ ಗುರುಪೌರ್ಣಿಮೆ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಶಂಕರಾಚಾರ್ಯರ ಭಾವಚಿತ್ರಕ್ಕೆ ವಿಶೇಷ ಪೂಜೆ ಹಾಗೂ ರಾಮನಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು.

ಗುರುಪೌರ್ಣಿಮೆ ಪ್ರಯುಕ್ತ ಮಾತಾ ಗಾಯತ್ರಿ ವಿಪ್ರ ವೃಂದ ಸಂಘದ ವತಿಯಿಂದ ಪ್ರತಿಭಾ ಕೇಂದ್ರದ ಅಧ್ಯಕ್ಷ ಪಾನ್ಯಂ ನಟರಾಜ್, ಹಿರಿಯರಾದ ಪದ್ಮಾವತಮ್ಮ, ರಾಮ ಮಂದಿರ ಟ್ರಸ್ಟ್ ಅಧ್ಯಕ್ಷ ವಕೀಲ ಹಿರಣ್ಣಯ್ಯ, ನಿವೃತ್ತ ಶಿಕ್ಷಕರಾದ ರಾಮಚಂದ್ರಯ್ಯ ಹಾಗೂ ಜಿಲ್ಲಾ ಬ್ರಾಹ್ಮಣ ಒಕ್ಕೂಟದ ಅಧ್ಯಕ್ಷ ರಾಘವೇಂದ್ರಮಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಪಾನ್ಯಂ ನಟರಾಜು ಮಾತನಾಡಿ, ನಮಗೆ ಮಾರ್ಗದರ್ಶನ ನೀಡಿದ ಗುರುಗಳನ್ನು ಸ್ಮರಿಸಿ ಅವರಿಗೆ ಗುರುವಂದನೆ ನೀಡುವುದು ಪ್ರತಿಯೊಬ್ಬರ ಕರ್ತವ್ಯ. ಮಾತಾ ಗಾಯತ್ರಿ ವಿಪ್ರವೃಂದದಿಂದ ಗುರುಗಳನ್ನು ಸ್ಮರಿಸುತ್ತಿರುವುದು ಉತ್ತಮ ಕೆಲಸ. ರಾಮಮಂದಿರ ನಿರ್ಮಾಣಕ್ಕೆ ದಾನಿಗಳ ಸಹಕಾರವಿದ್ದು 88 ವರ್ಷಗಳ ನೆನಪನ್ನು ನಾವು ಕಾಣುತ್ತಿದ್ದೇವೆ. ರಾಮಮಂದಿರ ಮತ್ತಷ್ಟು ಅಭಿವೃದ್ಧಿಯಾಗಿ ಸಾಕಷ್ಟು ಧಾರ್ಮಿಕ ಕಾರ್ಯಕ್ರಮಗಳು ಹೆಚ್ಚುನಡೆಯಲಿ ಎಂದು ಹಾರೈಸಿದರು.

ಜಿಲ್ಲಾ ಬ್ರಾಹ್ಮಣ ಒಕ್ಕೂಟದ ಅಧ್ಯಕ್ಷ ರಾಘವೇಂದ್ರಮಯ್ಯ ಮಾತನಾಡಿ, ನಾವು ಮೊದಲು ಸಂಘಟಿತರಾಗಿದ್ದಾಗ ಮಾತ್ರ ಅಭಿವೃದ್ಧಿ ಕಾಣಲು ಸಾಧ್ಯ. ನಾವು ಸದಸ್ಯತ್ವ ಪಡೆಯಬೇಕು ಚನ್ನಪಟ್ಟಣ ತಾಲೂಕಿನಲ್ಲಿ ವಿಪ್ರ ಬಾಂಧವರ ಜನಗಣತಿ ಮಾಡಿದ್ದು ಇದೇ ರೀತಿ ರಾಮನಗರ ಜಿಲ್ಲೆಯಲ್ಲೂ ವಿಪ್ರ ಬಾಂಧವರ ಜನಗಣತಿ ಆಗುವ ಮೂಲಕ ರಾಜ್ಯಕ್ಕೆ ಮಾದರಿಯಾಗಬೇಕಿದೆ. ಮಾಗಡಿಯಲ್ಲಿ ಮುಂದಿನ ಬಾರಿ ವಿಪ್ರ ಸಮಾಜದ ಪ್ರತಿನಿಧಿಯಾಗಿ ಪುರಸಭಾ ಸದಸ್ಯರು ಆಯ್ಕೆಯಾಗಬೇಕು ಎಂದರು.

ಹಿರಿಯ ವಕೀಲ ಹಿರಣ್ಣಯ್ಯ ಮಾತನಾಡಿ, ಶಂಕರ ಮಠದ ಶ್ರೀಗಳು ಮಾಗಡಿಗೆ ಬಂದು ಧಾರ್ಮಿಕ ಕಾರ್ಯಗಳು ಹೆಚ್ಚಾಗಿ ನಡೆಯುತ್ತಿದ್ದು, ರಾಮಮಂದಿರದಲ್ಲಿ ವಾರದಲ್ಲಿ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಚಟುವಟಿಕೆ ನಡೆಯುತ್ತಿದೆ. ಈ ಮೂಲಕ ಮಾಗಡಿ ತಾಲೂಕಿನಲ್ಲಿ ಚೆನ್ನಾಗಿ ಮಳೆ ಬೆಳೆಯಾಗಿ ಸಮೃದ್ಧಿಯಾಗಿ ಇರುವಂತೆ ರಾಮನು ಕರುಣಿಸಲಿ ಎಂದು ತಿಳಿಸಿದರು.

ಕಾರ್ಯಕ್ರಮದ ಉಸ್ತುವಾರಿಯನ್ನು ಗಾಯತ್ರಿ ವಿಪ್ರ ಮಹಿಳಾ ಸಂಘದ ಅಧ್ಯಕ್ಷ ಪದ್ಮ ಜಗನ್ನಾಥ್ ವಹಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ವಿಪ್ರ ಸಮಾಜದ ಮುಖಂಡರಾದ ವೆಂಕಟೇಶ್ ಮೂರ್ತಿ, ಲಕ್ಷ್ಮೀನಾರಾಯಣ್, ಪದ್ಮ ವೆಂಕಟೇಶ್, ಕವಿತಾ ಶ್ರೀಧರ್ ಮೂರ್ತಿ, ರಾಮಚಂದ್ರ ಸೇರಿದಂತೆ ಮಹಿಳಾ ಸಂಘದ ಸದಸ್ಯರು, ಮುಖಂಡರು ಭಾಗವಹಿಸಿದ್ದರು.