ಸಾರಾಂಶ
ಚಿತ್ರದುರ್ಗ: ದೇಶದ ಆಸ್ತಿಯಾಗಿರುವ ಮಕ್ಕಳನ್ನು ಜಾಗತಿಕ ಮಟ್ಟದಲ್ಲಿ ಒಳ್ಳೆಯ ಪ್ರಜೆಗಳನ್ನಾಗಿ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್ ಹೇಳಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಬೇಟಿ ಬಚಾವೋ, ಬೇಟಿ ಪಢಾವೋ ಶೀರ್ಷಿಕೆಯೊಂದಿಗೆ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಮಕ್ಕಳ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮಕ್ಕಳ ಬೆಳವಣಿಗೆಗೆ ಪೂರಕವಾಗಿ ಸಹಕಾರ, ರಕ್ಷಣೆ ಜತೆಗೆ ಉತ್ತಮ ಶಿಕ್ಷಣ ಕೊಡಿಸುವುದು ಹಾಗೂ ಜಾಗತಿಕ ಮಟ್ಟದಲ್ಲಿ ಉತ್ತಮ ವೇದಿಕೆ ಕಲ್ಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಬಾಲ್ಯವಿವಾಹ ಸೇರಿದಂತೆ ಅನೇಕ ಸಾಮಾಜಿಕ ಪಿಡುಗುಗಳಿಗೆ ಹಾಗೂ ಸಾಮಾಜಿಕ ಅನಿಷ್ಠಗಳಿಗೆ ಮಕ್ಕಳು ಪ್ರತಿರೋಧವನ್ನು ತೋರಿ, ತಮಗಾದ ಸಮಸ್ಯೆಗಳ ಕುರಿತು ಸಂಬಂಧಪಟ್ಟವರಿಗೆ ಸೂಕ್ತ ಮಾಹಿತಿ ನೀಡುವಂತಾಗಬೇಕು ಎಂದರು.ವಿದ್ಯಾರ್ಥಿ ಜೀವನ ಗೋಲ್ಡನ್ ಲೈಫ್. ಈ ವಿದ್ಯಾರ್ಥಿ ಜೀವನದಲ್ಲಿ ಪಠ್ಯ ಹಾಗೂ ಸೃಜನಶೀಲ ಪಠ್ಯೇತರ ಚಟುವಟಿಕೆಗಳ ಕಡೆ ಹೆಚ್ಚಿನ ಗಮನಹರಿಸಿ, ಉತ್ತಮ ಪ್ರಜೆಗಳಾಗಿ ಎಂದು ಸಲಹೆ ನೀಡಿದರು.ಜಿಪಂ ಉಪ ಕಾರ್ಯದರ್ಶಿ ಡಾ.ರಂಗಸ್ವಾಮಿ ಮಾತನಾಡಿ, ಮಕ್ಕಳು ತಮ್ಮ ಹಕ್ಕುಗಳು, ಸಮಸ್ಯೆಗಳು ಮತ್ತು ಗ್ರಾಮದ ಅಭಿವೃದ್ಧಿ ಕುರಿತು ಚರ್ಚಿಸಲು ಹಾಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಮಕ್ಕಳ ಗ್ರಾಮ ಸಭೆ ಆಯೋಜಿಸಲಾಗುತ್ತಿದೆ. ಶಿಕ್ಷಣದ ಪ್ರಗತಿ, ಬಿಸಿಯೂಟ, ಶೌಚಾಲಯ, ಶಾಲಾ ಸ್ವಚ್ಛತೆ, ಬಸ್ ವ್ಯವಸ್ಥೆ ಸೇರಿದಂತೆ ಮಕ್ಕಳು ಗ್ರಾಮ ಸಭೆಯಲ್ಲಿ ಈ ಎಲ್ಲಾ ಸಮಸ್ಯೆಗಳನ್ನು ಚರ್ಚಿಸಿ, ಅವುಗಳನ್ನು ಬಗೆಹರಿಸಲು ಅಗತ್ಯ ಕ್ರಮಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಮಕ್ಕಳ ಗ್ರಾಮ ಸಭೆಯು ಮಕ್ಕಳ ಶಕ್ತಿ ಇದ್ದಂತೆ ಎಂದರು.ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಪಿ.ಶೀಲಾ ಮಾತನಾಡಿ, ಮಕ್ಕಳು ಒಂದು ರೀತಿಯಲ್ಲಿ ಚೈತನ್ಯದ ಚಿಲುಮೆ ಇದ್ದಂತೆ. ಮಕ್ಕಳನ್ನು ನೋಡಿದಾಗ ಶಾಂತಿ, ನೆಮ್ಮದಿ, ಸಮಾಧಾನವಾಗಲಿದ್ದು, ಮಕ್ಕಳಿಗೆ ಆಂತರಿಕ ಶಿಕ್ಷಣ ಹಾಗೂ ಬಾಹ್ಯ ಶಿಕ್ಷಣ ಅತಿ ಮುಖ್ಯವಾಗಿ ಬೇಕಾಗಿದೆ ಎಂದರು. ಇದೇ ವೇಳೆ ಚಳ್ಳಕೆರೆ ತಾಲೂಕಿನ ರೆಡ್ಡಿಹಳ್ಳಿ ಸ್ವಪ್ನ, ಮೊಳಕಾಲ್ಮುರಿನ ಗಂಗಮ್ಮ ಅವರಿಗೆ ಹಾಗೂ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿಯರಿಗೆ ಸನ್ಮಾನ ಮಾಡಲಾಯಿತು.
ಮಕ್ಕಳ ಮಾಸಾಚರಣೆ ಅಂಗವಾಗಿ 6 ತಾಲೂಕಿನ ವಿವಿಧ ಪ್ರೌಢಶಾಲೆಗಳಲ್ಲಿ ಪ್ರಬಂಧ ಮತ್ತು ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು.ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಎಚ್.ವಿಜಯಕುಮಾರ್, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ತಿಮ್ಮಯ್ಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಡಿ.ಮಂಜುನಾಥ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಗಂಗಪ್ಪ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕೆ.ಪ್ರೇಮಮೂರ್ತಿ ಇತರರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))