ಹಿರಿಯರನ್ನು ಗೌರವದಿಂದ ಕಾಣುವುದು ಎಲ್ಲರ ಜವಾಬ್ದಾರಿ: ವಿನಯ್ ಪಾಟೀಲ್

| Published : Nov 08 2025, 01:15 AM IST

ಹಿರಿಯರನ್ನು ಗೌರವದಿಂದ ಕಾಣುವುದು ಎಲ್ಲರ ಜವಾಬ್ದಾರಿ: ವಿನಯ್ ಪಾಟೀಲ್
Share this Article
  • FB
  • TW
  • Linkdin
  • Email

ಸಾರಾಂಶ

ಹಿರಿಯ ನಾಗರಿಕರನ್ನು ಗೌರವದಿಂದ ಕಾಣುವುದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿ. ತಂದೆ-ತಾಯಿ, ಗುರು-ಹಿರಿಯರನ್ನು ಗೌರವಿಸುವ ಮನೋಭಾವವನ್ನು ಮಕ್ಕಳಲ್ಲಿ ಬಾಲ್ಯದಿಂದಲೇ ಬೆಳೆಸಬೇಕು. ಆಗ ಹಿರಿಯರ ರಕ್ಷಣೆ ಮಕ್ಕಳಿಂದಲೇ ಆಗುತ್ತದೆ ಎಂದು ವಕೀಲರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ವಿನಯ್ ಪಾಟೀಲ್ ಹೇಳಿದರು.

ಕನ್ನಡಪ್ರಭ ವಾರ್ತೆ ಸೊರಬ

ಹಿರಿಯ ನಾಗರಿಕರನ್ನು ಗೌರವದಿಂದ ಕಾಣುವುದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿ. ತಂದೆ-ತಾಯಿ, ಗುರು-ಹಿರಿಯರನ್ನು ಗೌರವಿಸುವ ಮನೋಭಾವವನ್ನು ಮಕ್ಕಳಲ್ಲಿ ಬಾಲ್ಯದಿಂದಲೇ ಬೆಳೆಸಬೇಕು. ಆಗ ಹಿರಿಯರ ರಕ್ಷಣೆ ಮಕ್ಕಳಿಂದಲೇ ಆಗುತ್ತದೆ ಎಂದು ವಕೀಲರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ವಿನಯ್ ಪಾಟೀಲ್ ಹೇಳಿದರು.

ಪಟ್ಟಣದ ಶ್ರೀ ಶಕ್ತಿ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಕೀಲರ ಸಂಘ, ಹಿರಿಯ ನಾಗರಿಕರ ವಿವಿಧ ವೇದಿಕೆ/ಸಂಸ್ಥೆಗಳು, ನಿವೃತ್ತ ಸರ್ಕಾರಿ ನೌಕರರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಹಿರಿಯ ನಾಗರಿಕರು ಸಾಂಸ್ಕೃತಿಕ ಮತ್ತು ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ ಇತರರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡು ಜೀವನೋತ್ಸಾಹ ಹೆಚ್ಚಿಸಿಕೊಳ್ಳಲು ಸಾಧ್ಯ. ವಯಸ್ಸು ಕೇವಲ ದೇಹಕ್ಕೆ ಮಾತ್ರ, ಮನಸ್ಸಿಗಲ್ಲ ಎಂಬ ಚಿಂತನೆಯೊಂದಿಗೆ ಯಾವುದೇ ಅಂಜಿಕೆ ಇಲ್ಲದೇ ಮುಕ್ತವಾಗಿ ಭಾಗವಹಿಸಬೇಕು ಎಂದರು.

ಹಿರಿಯ ನಾಗರಿಕರ ರಕ್ಷಣೆಗಾಗಿ ಸರ್ಕಾರ ಹಲವಾರು ಕಾಯ್ದೆ ಹಾಗೂ ಕಾನೂನುಗಳನ್ನು ಜಾರಿಗೆ ತಂದಿದೆ. ಹಿರಿಯ ನಾಗರಿಕರು ಇವುಗಳ ಬಗ್ಗೆ ಮಾಹಿತಿಗಳನ್ನು ಹೊಂದುವುದರೊಂದಿಗೆ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ನ್ಯಾಯವಾದಿ ಅಮೃತ ಮಾತನಾಡಿ, ಪೋಷಕರು ಮತ್ತು ಹಿರಿಯ ನಾಗರಿಕರಿಗೆ ಅವರ ಜೀವನ ನಿರ್ವಹಣೆ ಮತ್ತು ಯೋಗಕ್ಷೇಮಕ್ಕೆ ಇನ್ನೂ ಹೆಚ್ಚಿನ ಪರಿಣಾಮಕಾರಿ ಅವಕಾಶ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಪಾಲಕರ ಪೋಷಣೆ, ಸಂರಕ್ಷಣೆ ಹಾಗೂ ಹಿರಿಯ ನಾಗರಿಕರ ರಕ್ಷಣೆ ಕಾಯ್ದೆ-೨೦೦೭ನ್ನು ಜಾರಿ ಗೊಳಿಸಿದ್ದು, ೨೦೦೮ರ ಎ. ೧ ರಿಂದ ರಾಜ್ಯದಲ್ಲಿ ಅದನ್ನು ಜಾರಿಗೊಳಿಸಿ ಅಧಿಸೂಚನೆ ಹೊರಡಿಸಲಾಗಿದೆ ಎಂದು ತಿಳಿಸಿದರು.

ಸಮಾಜದಲ್ಲಿ ಕಿರಿಯರಿಂದ ಸಮಸ್ಯೆಗೆ ಸಿಲುಕಿದ ಹಿರಿಯ ನಾಗರಿಕರ ರಕ್ಷಣೆಗಾಗಿ ಪಾಲಕರ ಪೋಷಣೆ, ಸಂರಕ್ಷಣೆ ಹಾಗೂ ಹಿರಿಯ ನಾಗರಿಕರ ರಕ್ಷಣಾ ಕಾಯ್ದೆಯಲ್ಲಿನ ಅವಕಾಶದಂತೆ ಪ್ರತಿ ಕಂದಾಯ ಉಪವಿಭಾಗದಲ್ಲಿ ಒಂದು ನಿರ್ವಹಣಾ ನ್ಯಾಯಮಂಡಳಿಯನ್ನು ಸ್ಥಾಪಿಸಲಾಗಿದ್ದು, ಈ ನ್ಯಾಯಮಂಡಳಿಗಳಲ್ಲಿ ಜೀವನ ನಿರ್ವಹಣೆಗಾಗಿ ತೊಂದರೆಗೊಳಗಾದ ಹಿರಿಯರು ಜೀವನಾಂಶವನ್ನು ಪಡೆಯಬಹುದಾಗಿದೆ ಎಂದರು.

ಜಿಲ್ಲಾ ಅಂಗವಿಕಲರ ಕಲ್ಯಾಣ ಹಾಗೂ ಹಿರಿಯ ಸಬಲೀಕರಣ ಇಲಾಖೆ ಅಧಿಕಾರಿ ಸುವರ್ಣ ವಿ. ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಮುಖ್ಯ ಶಿಕ್ಷಕ ವಿ.ಬಿ. ಜಾವೂರ್ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ವಕೀಲ ಸಂಭಾವಿ, ನವಚೇತನ ಬುದ್ಧಿಮಾಂದ್ಯ ಮಕ್ಕಳ ಸಂಸ್ಥೆಯ ಕಾರ್ಯದರ್ಶಿ ರಾಮಪ್ಪ ಚೌಡಿಕೊಪ್ಪ, ಸಂಸ್ಥೆಯ ಮುಖ್ಯ ಶಿಕ್ಷಕ ಎಸ್. ರವೀಂದ್ರ, ಶಿಕ್ಷಕಿಯವರಾದ ಮಂಗಳ ಪೂಜಾರ್, ಪಲ್ಲವಿ, ಕೆ.ಬಿ. ಪುಟ್ಟರಾಜು, ಎಂಆರ್‌ಡಬ್ಲ್ಯೂ ಭರತ್, ಹಿರಿಯ ನಾಗರಿಕರ ಸಮಾಲೋಚಕ ರವೀಂದ್ರ ವಿ.ಆರ್.ಡಬ್ಲ್ಯೂ ರಾಬರ್ಟ್ ಶಿವಮೊಗ್ಗ ಮೊದಲಾದವರು ಹಾಜರಿದ್ದರು.