ಮಕ್ಕಳು ತಮ್ಮ ತಂದೆ-ತಾಯಿಗಳನ್ನು ಪ್ರೀತಿಯಿಂದ ನೋಡಿಕೊಂಡಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ

ಯಲಬುರ್ಗಾ: ಹೆತ್ತವರೇ ನಿಜವಾದ ದೇವರು. ಅವರನ್ನು ಪ್ರತಿಯೊಬ್ಬರೂ ಪ್ರೀತಿ, ಗೌರವದಿಂದ ಕಾಣಬೇಕು ಎಂದು ಇನ್ನರ್‌ ವೀಲ್‌ ಕ್ಲಬ್ ಅಧ್ಯಕ್ಷೆ ಚನ್ನಮ್ಮ ಪಾಟೀಲ್ ಹೇಳಿದರು.

ತಾಲೂಕಿನ ದಮ್ಮೂರು ಗ್ರಾಮದ ಶ್ರೀ ಭೀಮಾಂಬಿಕಾದೇವಿ ಮಠದಲ್ಲಿ ಹಮ್ಮಿಕೊಂಡಿದ್ದ ೩೮೬ನೇ ಶಿವಾನುಭವ ಗೋಷ್ಠಿಯಲ್ಲಿ ಮಾತೃ ದೇವೋ ಭವ ಚಿಂತನಾಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು. ಮಕ್ಕಳು ತಮ್ಮ ತಂದೆ-ತಾಯಿಗಳನ್ನು ಪ್ರೀತಿಯಿಂದ ನೋಡಿಕೊಂಡಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ. ಹೆತ್ತವರನ್ನು ಮುಪ್ಪಿನ ವಯಸ್ಸಿನಲ್ಲಿ ಸರಿಯಾಗಿ ಜೋಪಾನ ಮಾಡಬೇಕು. ಅದಕ್ಕಿಂತ ದೊಡ್ಡ ಪುಣ್ಯ ಮತ್ತೊಂದಿಲ್ಲ. ತಂದೆ- ತಾಯಿಗಳು ಮಕ್ಕಳಿಗೆ ಜನ್ಮ ಕೊಡುವ‌ ಜತೆಗೆ ಸಂಸ್ಕಾರ-ಸಂಸ್ಕೃತಿ ನೀಡಿ ಬೆಳೆಸುತ್ತಾರೆ. ಅವರಿಬ್ಬರ ಸೇವೆ ಅಪಾರವಾಗಿದೆ ಎಂದರು.

ಕ್ಲಬ್‌ನ ಮಾಜಿ ಅಧ್ಯಕ್ಷೆ ಶಕುಂತಲಾದೇವಿ ಮಾಲಿಪಾಟೀಲ್ ಮಾತನಾಡಿದರು. ಮಠದ ಒಡೆಯ ಹನುಮಂತಪ್ಪಜ್ಜ ಧರ್ಮರಮಠ, ಶರಣಯ್ಯ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ಭೀಮಾಂಬಿಕಾದೇವಿ ಶಿವಾನುಭವ ಸೇವಾ ಸಮಿತಿ ಅಧ್ಯಕ್ಷ ಶರಣಬಸಪ್ಪ ದಾನಕೈ ಅಧ್ಯಕ್ಷತೆ ವಹಿಸಿದ್ದರು.

ಪ್ರಮುಖರಾದ ಮಹೇಶ ಕಟಗೇರಿ, ಭೀಮಣ್ಣ ಹವಳಿ, ಈರಪ್ಪ ರೇವಣಕಿ, ಡಿ. ಮೌನೇಶ ಬಡಿಗೇರ, ಬಸವರಾಜ ಪ್ರಭಣ್ಣನವರ, ಹುಲಗಪ್ಪ ಬಂಡಿವಡ್ಡರ್, ಮಾಬುಸಾಬ್ ವಾಲಿಕಾರ, ಎಚ್.ಪಿ. ವಾಲಿಕಾರ, ಈರಣ್ಣ ಕಟಗೇರಿ, ಭೀಮಣ್ಣ ಚಿಕ್ಕಗೌಡ್ರ, ಬಸವರಾಜ ಮೇಲಸಕ್ರಿ, ಗುರುಮೂರ್ತಿ ಬಡಿಗೇರ, ಈಶಪ್ಪ ಪ್ರಭಣ್ಣನವರ, ಸಂಕ್ರಪ್ಪ ಬಡಿಗೇರ್, ಕಳಕಪ್ಪ ಹಡಪದ ಸಂಗೀತ ಸೇವೆ ನೀಡಿದರು.