ಸುಗಮ ಪರೀಕ್ಷೆ ನಡೆಸುವುದು ಎಲ್ಲರ ಜವಾಬ್ದಾರಿ: ಡಿಡಿಪಿಐ

| Published : Jun 27 2024, 01:01 AM IST

ಸುಗಮ ಪರೀಕ್ಷೆ ನಡೆಸುವುದು ಎಲ್ಲರ ಜವಾಬ್ದಾರಿ: ಡಿಡಿಪಿಐ
Share this Article
  • FB
  • TW
  • Linkdin
  • Email

ಸಾರಾಂಶ

ಕಾಲಮಿತಿಯಲ್ಲಿ ನಿಯಮಾನುಸಾರ ಎಲ್ಲ ವ್ಯವಸ್ಥೆ ಮಾಡಿಕೊಂಡು, ಸುಗಮ ಪರೀಕ್ಷೆಗೆ ಅವಕಾಶ ಕಲ್ಪಿಸಬೇಕು.

ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ಹಿನ್ನೆಲೆ ಪೂರ್ವಭಾವಿ ಸಭೆ । ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ: ಶ್ರೀಶೈಲ ಬಿರಾದಾರ

ಕನ್ನಡಪ್ರಭ ವಾರ್ತೆ ಕೊಪ್ಪಳ

ಜೂ. 30ರಂದು ಜಿಲ್ಲೆಯಲ್ಲಿ ನಡೆಯಲಿರುವ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಯಾವುದೇ ರೀತಿಯ ಅಕ್ರಮಕ್ಕೆ ಅವಕಾಶವಿಲ್ಲದಂತೆ ಎಚ್ಚರಿಕೆಯಿಂದ ಸುಗಮ ಪರೀಕ್ಷೆ ನಡೆಸುವುದು ಎಲ್ಲ ಪರೀಕ್ಷಾಧಿಕಾರಿಗಳು, ಸಿಬ್ಬಂದಿ ಸೇರಿದಂತೆ ನಮ್ಮೆಲ್ಲರ ಜವಾಬ್ದಾರಿ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಶ್ರೀಶೈಲ ಬಿರಾದಾರ ಹೇಳಿದರು.ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ಹಿನ್ನೆಲೆ ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು, ಸ್ಥಾನಿಕ ಜಾಗೃತದಳ, ಮಾರ್ಗಾಧಿಕಾರಿಗಳು, ವೀಕ್ಷಕರು ಹಾಗೂ ಇತರೆ ಪರೀಕ್ಷಾ ನಿಯೋಜಿತ ಸಿಬ್ಬಂದಿ ಪರೀಕ್ಷಾ ದಿನದಂದು ನಿಗದಿತ ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು. ಕಾಲಮಿತಿಯಲ್ಲಿ ನಿಯಮಾನುಸಾರ ಎಲ್ಲ ವ್ಯವಸ್ಥೆ ಮಾಡಿಕೊಂಡು, ಸುಗಮ ಪರೀಕ್ಷೆಗೆ ಅವಕಾಶ ಕಲ್ಪಿಸಬೇಕು. ಈಗಾಗಲೇ ನೀಡಿರುವ ನಾಮಿನಲ್ ರೋಲ್‌ನಲ್ಲಿ ಇರುವಂತೆ ಪರೀಕ್ಷಾ ಕೇಂದ್ರದಲ್ಲಿ ಆಸನ ವ್ಯವಸ್ಥೆ ಮಾಡಬೇಕು. ಪರೀಕ್ಷಾ ಕೇಂದ್ರದ ಎಲ್ಲ ಕೊಠಡಿಗಳಲ್ಲಿ ಸಿಸಿ ಕ್ಯಾಮೆರಾ ಕಡ್ಡಾಯವಾಗಿ ಅಳವಡಿಸಬೇಕು. ಉಪ ನಿರ್ದೇಶಕರ ಕಾರ್ಯಾಲಯದಲ್ಲಿ ವೆಬ್ ಕಾಸ್ಟಿಂಗ್ ಮೂಲಕ ಪರೀಕ್ಷೆಯ ನೇರ ಪ್ರಸಾರ ಇರುವುದರಿಂದ ಅಧಿಕಾರಿಗಳು ಬಹಳ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ಜೂ. 30ರಂದು ಎರಡು ಅಧಿವೇಶನಗಳಲ್ಲಿ ಕೆಟಿಇಟಿ ಪರೀಕ್ಷೆ ನಡೆಯಲಿದೆ. ನಗರ ಹಾಗೂ ಸುತ್ತ 5 ಕಿಮೀ ವ್ಯಾಪ್ತಿಯ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಬೆಳಗಿನ ಅವಧಿಗೆ 15 ಪರೀಕ್ಷಾ ಕೇಂದ್ರಗಳಲ್ಲಿ 4217 ಅಭ್ಯರ್ಥಿಗಳು ಹಾಗೂ ಮಧ್ಯಾಹ್ನದ ಅವಧಿಯಲ್ಲಿ 29 ಪರೀಕ್ಷಾ ಕೇಂದ್ರಗಳಲ್ಲಿ 7277 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಅಂದು ಪರೀಕ್ಷಾ ಕೇಂದ್ರದ ಸುತ್ತಲು ನಿಷೇಧಾಜ್ಞೆ ಜಾರಿ ಮಾಡಲಾಗುವುದು. ಪರೀಕ್ಷಾ ಕೇಂದ್ರದೊಳಗೆ ಅಭ್ಯರ್ಥಿಗಳು ವಾಚ್ ಸೇರಿದಂತೆ ಯಾವುದೇ ರೀತಿಯ ಎಲೆಕ್ಟ್ರಾನಿಕ್ ವಸ್ತು ತರುವಂತಿಲ್ಲ. ಈ ಬಗ್ಗೆ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಎಚ್ಚರಿಕೆಯಿಂದ ತಪಾಸಣೆಗೆ ಕ್ರಮ ಕೈಗೊಂಡು, ಅಭ್ಯರ್ಥಿಗಳಿಗೆ ಸೂಕ್ತ ತಿಳುವಳಿಕೆ ನೀಡಬೇಕು. ಎಲ್ಲ ಕೇಂದ್ರಗಳಲ್ಲಿ ಕಡ್ಡಾಯವಾಗಿ ಶುದ್ಧ ಕುಡಿಯುವ ನೀರು, ಶೌಚಾಲಯ, ಸೂಕ್ತ ಗಾಳಿ ಬೆಳಕು, ಆಸನದ ವ್ಯವಸ್ಥೆ ಮಾಡಬೇಕು. ಅಭ್ಯರ್ಥಿಗಳಿಗೆ ಯಾವುದೇ ರೀತಿಯ ತೊಂದರೆ ಆಗಬಾರದು. ಆರೋಗ್ಯ ಇಲಾಖೆಯಿಂದ ತುರ್ತು ಪರಿಸ್ಥಿತಿ ನಿರ್ವಹಣೆಗೆ ವೈದ್ಯಕೀಯ ಸಿಬ್ಬಂದಿ ನಿಯೋಜಿಸಬೇಕು. ಪೊಲೀಸ್ ಇಲಾಖೆಯಿಂದ ಅಗತ್ಯ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಬೇಕು ಎಂದು ತಿಳಿಸಿದರು.

ಪರೀಕ್ಷೆ ಆರಂಭ ಹಾಗೂ ಮುಕ್ತಾಯದ ನಂತರ ಉತ್ತರ ಪತ್ರಿಕೆಗಳ ಬಂಡಲ್ ಮಾಡುವ ಕ್ರಮ, ಪ್ರತಿ ಅಭ್ಯರ್ಥಿಯ ಒಎಂಆರ್ ಪರಿಶೀಲಿಸುವುದು, ಅಂಗವಿಕಲ ಅಭ್ಯರ್ಥಿಗಳಿಗೆ ಕಲ್ಪಿಸಬೇಕಾದ ಸೌಲಭ್ಯಗಳ ಕುರಿತು ಉಪನಿರ್ದೇಶಕರು ಪರೀಕ್ಷಾ ಅಧಿಕಾರಿಗಳಿಗೆ ತಿಳಿಸಿದರು. ಮುಂಚಿತವಾಗಿ ಹಾಗೂ ಕಡ್ಡಾಯವಾಗಿ ಎಲ್ಲ ಮುಖ್ಯ ಅಧೀಕ್ಷಕರು ನಿಮಗೆ ನಿಯೋಜಿಸಿದ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ, ಮೂಲಭೂತ ಸೌಕರ್ಯ ಸೇರಿದಂತೆ ಎಲ್ಲ ಅಗತ್ಯ ತಯಾರಿ ನಡೆಸಿದ ಬಗ್ಗೆ ಪರಿಶೀಲಿಸಿ, ಖಾತ್ರಿ ಪಡಿಸಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಜಿಪಂ ಸಹಾಯಕ ಕಾರ್ಯದರ್ಶಿ ಶಿವಪ್ಪ ಸುಬೇದಾರ, ಮುಖ್ಯೋಪಾಧ್ಯಾಯ ನೀಲಕಂಠಪ್ಪ ಕಂಬಳಿ, ಪರೀಕ್ಷಾ ನಿಯೋಜಿತ ಮುಖ್ಯ ಅಧೀಕ್ಷಕರು, ಮಾರ್ಗಾಧಿಕಾರಿಗಳು, ಸಿಬ್ಬಂದಿ, ಖಜಾನೆ ಇಲಾಖೆ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.