ಸಂವಿಧಾನ ಉಳಿದಿದೆ ಎಂದ್ರೆ ಪ್ರಧಾನಿ ಮೋದಿ ಸರ್ಕಾರದಿಂದ

| Published : Dec 01 2024, 01:32 AM IST

ಸಾರಾಂಶ

ಬಿಜೆಪಿಯನ್ನು ಮತ್ತು ಪಕ್ಷದ ಮುಖಂಡರನ್ನು ಯಾವುದೇ ಆಧಾರಗಳಿಲ್ಲದೇ ಸಂವಿಧಾನ ವಿರೋಧಿಗಳೆಂದು ಕಾಂಗ್ರೆಸ್ ಪಕ್ಷದವರು ಅಪಪ್ರಚಾರದಲ್ಲಿ ತೊಡಗಿದ್ದಾರೆ. ಪ್ರಸ್ತುತದಲ್ಲಿ ಸಂವಿಧಾನಕ್ಕೆ ಏನಾದರೂ ಗೌರವ ಉಳಿದಿದ್ದರೇ ಅದು ಬಿಜೆಪಿಯ ಮೋದಿ ಸರ್ಕಾರದಿಂದ ಮಾತ್ರ ಎಂದು ಬಿಜೆಪಿ ವಕ್ತಾರ ವಿಕಾಸ್ ಪುತ್ತೂರು ತಿಳಿಸಿದರು. ಮೋದಿಯವರು ಪ್ರಧಾನಿ ಆಗುವ ಮೊದಲೇ ಗುಜರಾತಿನಲ್ಲಿ ಮುಖ್ಯಮಂತ್ರಿಯಾದ ವೇಳೆ ಆನೆ ಅಂಬಾರಿ ಮೇಲೆ ಸಂವಿಧಾನವನ್ನಿಟ್ಟು ಮೆರವಣಿಗೆ ಮಾಡಿದ್ದರು. ನವೆಂಬರ್ ೨೬ರೆಂದರೇ ಶ್ರೇಷ್ಠವಾದ ದಿನವಾಗಿದೆ. ಅಧಿಕೃತ ಭಾರತದ ಸಂವಿಧಾನವಾಗಿ ೧೯೫೦ರ ಜನವರಿ ೨೬ಕ್ಕೆ ಆಗಿದೆ.

ಕನ್ನಡಪ್ರಭ ವಾರ್ತೆ ಹಾಸನ

ಬಿಜೆಪಿಯನ್ನು ಮತ್ತು ಪಕ್ಷದ ಮುಖಂಡರನ್ನು ಯಾವುದೇ ಆಧಾರಗಳಿಲ್ಲದೇ ಸಂವಿಧಾನ ವಿರೋಧಿಗಳೆಂದು ಕಾಂಗ್ರೆಸ್ ಪಕ್ಷದವರು ಅಪಪ್ರಚಾರದಲ್ಲಿ ತೊಡಗಿದ್ದಾರೆ. ಪ್ರಸ್ತುತದಲ್ಲಿ ಸಂವಿಧಾನಕ್ಕೆ ಏನಾದರೂ ಗೌರವ ಉಳಿದಿದ್ದರೇ ಅದು ಬಿಜೆಪಿಯ ಮೋದಿ ಸರ್ಕಾರದಿಂದ ಮಾತ್ರ ಎಂದು ಬಿಜೆಪಿ ವಕ್ತಾರ ವಿಕಾಸ್ ಪುತ್ತೂರು ತಿಳಿಸಿದರು.

ನಗರದ ಶ್ರೀ ಶಂಕರ ಮಠದ ಸಭಾಂಗಣದಲ್ಲಿ ಶನಿವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ದಿನದ ಅಂಗವಾಗಿ ಸಿಟಿಜನ್ ಫಾರ್ ಸೋಷಿಯಲ್ ಜಸ್ಟಿಸ್ ಸಂವಿಧಾನ ಸನ್ಮಾನ ಅಭಿಯಾನದ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಗಾರರಾಗಿ ಮಾತನಾಡಿದ ಅವರು, ಡಾ. ಬಿ.ಆರ್. ಅಂಬೇಡ್ಕರ್ ಅವರು ಸುದೀರ್ಘವಾದ ಅಧ್ಯಯನದ ನಂತರ ೧೯೪೯ ನವೆಂಬರ್ ೨೬ರಂದು ಸಂವಿಧಾನವನ್ನು ಡಾ. ರಾಜೇಂದ್ರ ಪ್ರಸಾದ್ ಅವರಿಗೆ ಸಮರ್ಪಣೆ ಮಾಡುತ್ತಾರೆ. ನಾವು ಪ್ರತಿ ವರ್ಷ ಸಂವಿಧಾನದ ದಿನಾಚರಣೆಯನ್ನು ನವೆಂಬರ್ ತಿಂಗಳು ಯಾವುದೇ ರೀತಿಯ ಗೌರವ ಇಲ್ಲದ ಹಾಗೆ ಆಚರಣೆ ಮಾಡುತ್ತಿರುವುದನ್ನು ನೋಡುತ್ತಾ ಬರುತ್ತಿದ್ದೇವೆ. ಭಾರತದ ಸಂವಿಧಾನವನ್ನು ಸಮರ್ಪಣೆ ಮಾಡಿದಂತಹ ದಿವಸವನ್ನು ನಾವು ಸಂಭ್ರಮಿಸುವಂತಹ ವ್ಯವಸ್ಥೆ ಭಾರತದಲ್ಲಿ ಇರಲಿಲ್ಲ. ದೇಶದ ಪ್ರಧಾನಿ ಮೋದಿ ಅವರನ್ನು ಸಂವಿಧಾನದ ವಿರೋಧಿ ಎಂದು ಬಿಂಬಿಸುತ್ತಾರೆ. ಆದರೆ ಇಂದು ಸಂವಿಧಾನಕ್ಕೆ ಗೌರವ ಉಳಿದಿದ್ದರೇ ಅದು ಮೋದಿಯ ಸರ್ಕಾರ ಬಿಜೆಪಿ ಎಂದು ನಾವು ಒತ್ತಿ ಒತ್ತಿ ಹೇಳಬೇಕಾಗಿದೆ ಎಂದರು.

ಸಾಕ್ಷಿಭೂತವಾಗಿ ಮೋದಿಯವರು ಪ್ರಧಾನಿ ಆಗುವ ಮೊದಲೇ ಗುಜರಾತಿನಲ್ಲಿ ಮುಖ್ಯಮಂತ್ರಿಯಾದ ವೇಳೆ ಆನೆ ಅಂಬಾರಿ ಮೇಲೆ ಸಂವಿಧಾನವನ್ನಿಟ್ಟು ಮೆರವಣಿಗೆ ಮಾಡಿದ್ದರು. ನವೆಂಬರ್ ೨೬ರೆಂದರೇ ಶ್ರೇಷ್ಠವಾದ ದಿನವಾಗಿದೆ. ಅಧಿಕೃತ ಭಾರತದ ಸಂವಿಧಾನವಾಗಿ ೧೯೫೦ರ ಜನವರಿ ೨೬ಕ್ಕೆ ಆಗಿದೆ. ಈ ಎರಡು ತಿಂಗಳ ಕಾಲಾವಧಿಯಲ್ಲಿ ನಾವು ಸಂವಿಧಾನದ ಒಟ್ಟು ಜಾಗೃತಿ ಮಾಡುವುದೇ ಈ ಅಭಿಯಾನ ಎಂದು ಕಿವಿಮಾತು ಹೇಳಿದರು.

ವಾಸ್ತವದಲ್ಲಿ ನಾವು ಗಮನಿಸಿದರೆ ಸಂವಿಧಾನ ಬದಲಾವಣೆ ಎನ್ನುವಂತದ್ದು ಆಗಿದ್ದರೇ ಮತ್ತು ಅಪಪ್ರಚಾರ ಆಗಿದ್ದರೇ ಅದು ಕಾಂಗ್ರೆಸ್ ಅವಧಿಯಲ್ಲಿ ಎಂದು ದೂರಿದರು. ಭಾರತದ ಪ್ರಥಮ ಸರ್ಕಾರ ಹಾಗೂ ಮೊದಲ ಚುನಾವಣೆ ನಡೆದಿದ್ದು ೧೯೫೨ರಲ್ಲಿ. ಜವಹರಲಾಲ್ ನೆಹರೂ ಅವರು ಅಧಿಕೃತ ಅಭ್ಯರ್ಥಿಯಾಗಿ ಆಯ್ಕೆಗೊಂಡರು. ಸಂವಿಧಾನದ ಮೊದಲ ತಿದ್ದುಪಡಿ ಆಯಿತು. ಇಂದು ದುಷ್ಟ ಶಕ್ತಿಗಳು ಸಂವಿಧಾನವನ್ನು ಆಕ್ರಮಣ ಮಾಡುವ ಕಾಲಘಟ್ಟ ಬಂದಿದೆ ಎಂದು ಅಂಬೇಡ್ಕರ್‌ ಅವರು ಹೇಳಿದ್ದಾರೆ. ಕಾಂಗ್ರೆಸ್‌ನಿಂದ ಯಾವ ರೀತಿ ಸಂವಿಧಾನದ ಮೇಲೆ ಆಕ್ರಮಣವಾಗಿತ್ತು? ಇದನ್ನ ನಾವು ಅರ್ಥ ಮಾಡಿಕೊಂಡಾಗ ತಿಳಿಯುತ್ತದೆ. ಸಂವಿಧಾನದ ಮೇಲೆ ಜವಾಹರಲಾಲ್ ನೆಹರೂನಿಂದ ಆಕ್ರಮಣ ನಡೆದು ಇಂದಿರಾ ಗಾಂಧಿ ಮುಂದುವರಿಸಿದರು. ಇನ್ನು ತುರ್ತು ಪರಿಸ್ಥಿತಿಯನ್ನು ಈ ದೇಶದ ಮೇಲೆ ಹೇರಿದರು. ಸಂವಿಧಾನ ಏನಾದರೂ ಬದಲಾವಣೆ ಮಾಡಿದ್ದರೇ ಅದು ಇಂದಿರಾ ಗಾಂಧಿಯಿಂದ ಎಂದು ಗಂಭೀರವಾಗಿ ಆರೋಪಿಸಿದಲ್ಲದೇ ಸಂವಿಧಾನದ ಬದಲಾವಣೆಗೆ ಸಾಕ್ಷಿಭೂತವಾಗಿದೆ ಎಂದು ಹಿಂದಿನ ಘಟನೆಯನ್ನು ಮೆಲುಕು ಹಾಕಿದರು. ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಸಿದ್ದೇಶ್ ನಾಗೇಂದ್ರ, ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷ ಪ್ರಫುಲ್ಲಾ ಮಲ್ಲಾಡಿ, ಎಸ್.ಸಿ. ಮೋರ್ಚಾ ಜಿಲ್ಲಾಧ್ಯಕ್ಷ ಎಸ್.ಡಿ. ಚಂದ್ರು, ಆಲೂರಿನ ಬಿಜೆಪಿ ಹಿರಿಯ ಕಾರ್ಯಕರ್ತ ರಮೇಶ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಮೀತ್ ಶೆಟ್ಟಿ, ಹುಡಾ ಮಾಜಿ ಅಧ್ಯಕ್ಷ ನವೀಲೆ ಅಣ್ಣಪ್ಪ, ಪ್ರಸನ್ನ ಕುಮಾರ್, ಸಂಚಾಲಕ ರಾಜಕುಮಾರ್, ಡಿ.ವೈ. ಗೋಪಾಲ್, ದೇವರಾಜೇಗೌಡ ಇತರರು ಉಪಸ್ಥಿತರಿದ್ದರು.