ಸಾರಾಂಶ
ಹಲವು ದಶಕಗಳ ಹಿಂದೆ ಯಾವುದೇ ಕ್ರೀಡೆಯಲ್ಲೂ ಮಹಿಳೆಯರು ಸಕ್ರಿಯರಾಗಿ ಪಾಲ್ಗೊಳ್ಳುತ್ತಿರಲಿಲ್ಲ. ಆದರೆ ವಿವಿಗಳ ಪ್ರಾಧ್ಯಾಪಕರು, ಮಹಿಳಾ ಕಾಲೇಜಿನ ಉಪನ್ಯಾಸಕರು ತಮ್ಮ ವಿದ್ಯಾರ್ಥಿನಿಯರಿಗೆ ಹುರುಪು ತುಂಬಿ ಕ್ರೀಡೆಯಲ್ಲಿ ಭಾಗವಹಿಸುವಂತೆ ಮಾಡಿದರು. ಅಂದು ಅವರು ಮಾಡಿದ ಪ್ರಯತ್ನ ಫಲವಾಗಿ ಈಗ ಮಹಿಳೆಯರೂ ಎಲ್ಲಾ ಕ್ರೀಡೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಮೈಸೂರು
ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಕ್ರೀಡೆಯಲ್ಲಿ ಹೆಚ್ಚು ಹೆಚ್ಚು ಪಾಲ್ಗೊಳ್ಳುತ್ತಿರುವುದು ಸಂತೋಷದ ಬೆಳವಣಿಗೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ. ಶರಣಪ್ಪ ವಿ.ಹಲಸೆ ಹೇಳಿದರು.ಮಾನಸ ಗಂಗೋತ್ರಿಯ ಗ್ಲೇಡ್ಸ್ಮೈದಾನದಲ್ಲಿ ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗ ಆಯೋಜಿಸಿರುವ ದಕ್ಷಿಣ ವಲಯ ಅಂತರ ವಿವಿ ಮಹಿಳೆಯರ ಕ್ರಿಕೆಟ್ ಪಂದ್ಯಾವಳಿಗೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.
ಹಲವು ದಶಕಗಳ ಹಿಂದೆ ಯಾವುದೇ ಕ್ರೀಡೆಯಲ್ಲೂ ಮಹಿಳೆಯರು ಸಕ್ರಿಯರಾಗಿ ಪಾಲ್ಗೊಳ್ಳುತ್ತಿರಲಿಲ್ಲ. ಆದರೆ ವಿವಿಗಳ ಪ್ರಾಧ್ಯಾಪಕರು, ಮಹಿಳಾ ಕಾಲೇಜಿನ ಉಪನ್ಯಾಸಕರು ತಮ್ಮ ವಿದ್ಯಾರ್ಥಿನಿಯರಿಗೆ ಹುರುಪು ತುಂಬಿ ಕ್ರೀಡೆಯಲ್ಲಿ ಭಾಗವಹಿಸುವಂತೆ ಮಾಡಿದರು. ಅಂದು ಅವರು ಮಾಡಿದ ಪ್ರಯತ್ನ ಫಲವಾಗಿ ಈಗ ಮಹಿಳೆಯರೂ ಎಲ್ಲಾ ಕ್ರೀಡೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿದ್ದಾರೆ ಎಂದರು.ಕ್ರೀಡೆಯಲ್ಲಿ ಸೋಲು ಗೆಲುವು ಸಹಜ. ಎರಡನ್ನೂ ಸಮಾನವಾಗಿ ಸ್ವೀಕರಿಸಿದವರು ಮಾತ್ರ ನೈಜ ಕ್ರೀಡಾಪಟುಗಳು ಎನಿಸಿಕೊಳ್ಳುತ್ತಾರೆ. ಸೋತಾಗ ಎದೆಗುಂದದೆ ಅದನ್ನೇ ಅನುಭವವಾಗಿ ತೆಗೆದುಕೊಂಡು ಯಶಸ್ಸಿನ ಮೆಟ್ಟಿಲು ಮಾಡಿಕೊಳ್ಳಬೇಕು. ಎಲ್ಲಾ ಕ್ರೀಡಾಪಟುಗಳು ಕ್ರೀಡಾ ಸ್ಫೂರ್ತಿ ಮೆರೆಯಬೇಕು. ಕ್ರೀಡೆಯನ್ನು ಉಜ್ವಲಗೊಳಿಸಬೇಕು. ಭಾವೈಕ್ಯತೆ ಬೆಳೆಸಿಕೊಳ್ಳಬೇಕು ಎಂದರು.
ಮೈವಿವಿ ಹಣಕಾಸು ಅಧಿಕಾರಿ ಕೆ.ಎಸ್. ರೇಖಾ ಮಾತನಾಡಿ, ಮಹಿಳಾ ಕ್ರಿಕೆಟ್ ಇತ್ತೀಚೆಗೆ ಹೆಚ್ಚು ಜನಪ್ರಿಯವಾಗುತ್ತಿದ್ದರೂ, ಪ್ರೋತ್ಸಾಹ, ಜಾಹೀರಾತು ಎಲ್ಲದರಲ್ಲಿಯೂ ಪುರುಷರಿಗೆ ಸಿಂಹಪಾಲು ದೊರೆಯುತ್ತಿದೆ. ಇದರಿಂದಾಗಿ ಮಹಿಳಾ ವಿಭಾಗವು ಗೌಣವಾಗುತ್ತಿದೆ. ಇಂತಹ ವಾತಾವರಣ ಹೋಗಬೇಕು. ಮಹಿಳಾ ವಿಭಾಗಕ್ಕೂ ಹೆಚ್ಚು- ಹೆಚ್ಚು ಪ್ರೋತ್ಸಾಹ ಬಂದರೆ ಇನ್ನೂ ಹೆಚ್ಚಿನ ಬೆಳವಣಿಗೆ ಸಾಧ್ಯ ಎಂದರು.ಇನ್ನೂ ಎಂಟು- ಹತ್ತು ವರ್ಷದಲ್ಲಾದರೂ ಇಬ್ಬರಿಗೂ ಸಮಾನ ಅವಕಾಶದ ವಾತಾವರಣ ನಿರ್ಮಾಣವಾಗಲಿ ಎಂದು ಅವರು ಆಶಯ ವ್ಯಕ್ತಪಡಿಸಿದರು.
ಇಲ್ಲಿ ಭಾಗವಹಿಸಿರುವ ಕ್ರೀಡಾಪಟುಗಳು ಮುಂದೆ ಸ್ಮೃತಿ ಮಂದಾನ, ರಾಜೇಶ್ವರಿ ಗಾಯಕ್ವಾಡ್, ಮಿಥಾಲಿ ರಾಜ್ ಅವರಂತೆ ದೇಶವನ್ನು ಪ್ರತಿನಿಧಿಸುವ ಅವಕಾಶ ಪಡೆದುಕೊಳ್ಳಬಹುದು. ಆದ್ದರಿಂದ ಎಲ್ಲರೂ ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸಬೇಕು. ಕ್ರೀಡೆಯ ಪ್ರಾಮುಖ್ಯತೆ ಎತ್ತಿ ಹಿಡಿಯಬೇಕು ಎಂದರು.ಕ್ರಿಕೆಟ್ಪಂದ್ಯಾವಳಿಯು ಮಾನಸ ಗಂಗೋತ್ರಿಯ ಗ್ಲೇಡ್ಸ್ಮೈದಾನ, ಎಸ್.ಜೆ.ಸಿ.ಇ ಕ್ಯಾಂಪಸ್ ಮೈದಾನ, ಮಹಾರಾಜ ಕಾಲೇಜು ಮೈದಾನ, ಕಾಫಿಬೋರ್ಡ್ ಮೈದಾನ, ವಿಲೇಜ್ ಹಾಸ್ಟೆಲ್ ಮೈದಾನಗಳಲ್ಲಿ ನಡೆಯಲಿವೆ.
ನಿರ್ಗಮಿತ ಕುಲಸಚಿವೆ ವಿ.ಆರ್. ಶೈಲಜಾ, ಡಿಸಿಪಿ ಎಂ. ಮುತ್ತುರಾಜ್, ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಸಿ. ವೆಂಕಟೇಶ್, ಸಹಾಯಕ ನಿರ್ದೇಶಕ ಡಾ.ಪಿ. ಕೃಷ್ಣಯ್ಯ, ಸಿಂಡಿಕೆಟ್ ಸದಸ್ಯ ಮಹದೇಶ್ಮೊದಲಾದವರು ಇದ್ದರು.