ಸಾರಾಂಶ
- ಸರ್ಕಾರಿ ಅಧಿಕಾರಿ- ಸಿಬ್ಬಂದಿ ಮೇಲೆ ದರ್ಪ ಬೇಡ: ರಾಜಣ್ಣ ಗೋವಿನಹಾಳ್ ಸಲಹೆ - - - ಕನ್ನಡಪ್ರಭ ವಾರ್ತೆ ಹರಿಹರ ಶಾಸಕ ಬಿ.ಪಿ. ಹರೀಶ್ ಸರ್ಕಾರಿ ಸಭೆಗಳಲ್ಲಿ ಮಾತನಾಡುವಾಗ ಶಾಂತಿ ಮತ್ತು ಸೌಜನ್ಯತೆಯ ವರ್ತನೆ ರೂಢಿಸಿಕೊಳ್ಳಬೇಕು ಎಂದು ತಾಲೂಕು ಪಂಚಾಯಿತಿ ಪ್ರಗತಿ ಪರಿಶೀಲನಾ ಸಮಿತಿ ಸದಸ್ಯ ಗೋವಿನಹಾಳ್ ರಾಜಣ್ಣ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಚೆಗೆ ನಡೆದ ತಾಪಂ ಪ್ರಗತಿಪರಿಶೀಲನಾ ಸಭೆಯಲ್ಲಿ ಶಾಸಕರು ತುಂಬಾ ಆವೇಶಭರಿತರಾಗಿ ಮಾತನಾಡಿದ್ದಾರೆ. ಜನಪ್ರತಿನಿಧಿಯಾದ ಅವರು ತಮ್ಮ ವರ್ತನೆ ಸ್ವಲ್ಪ ಬದಲಿಸಿಕೊಳ್ಳುವಂತೆ ಮನವಿ ಮಾಡಿದರು.ಸರ್ಕಾರಿ ಸಿಬ್ಬಂದಿ, ಅಧಿಕಾರಿಗಳೊಂದಿಗೆ ದರ್ಪದಿಂದ ಮಾತನಾಡುವುದನ್ನು ಕಡಿಮೆ ಮಾಡಿಕೊಳ್ಳಬೇಕು. ಎಲ್ಲರಿಗೂ ಅವರದ್ದೇ ಆದ ಘನತೆ, ಗೌರವ ಇರುತ್ತದೆ. ೨೦೧೩ರಲ್ಲಿ ಕೆಜೆಪಿಗೆ ಹೋಗಿ ಚುನಾವಣೆ ಎದುರಿಸಿ ಪರಾಭವ ಹೊಂದಿದ್ದಾರೆ. ಆ ಸಮಯದಲ್ಲಿ ಮಲೇಬೆನ್ನೂರು ಭಾಗದಲ್ಲಿ ಅಲ್ಪಸಂಖ್ಯಾತರ ಮನೆ ಮನೆಗೆ ತೆರಳಿ ಮತಯಾಚಿಸಿದ್ದನ್ನು ಅವರು ಮರೆತಿದ್ದಾರೆ ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್.ಬಿ. ಹನುಮಂತಪ್ಪ ಮಾತನಾಡಿ, ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಿಬ್ಬಂದಿಗೆ ನೀವು ಪಾಕಿಸ್ತಾನಕ್ಕೆ ಹೋಗಿ, ಇದು ಪಾಕಿಸ್ತಾನ ಅಲ್ಲ ಹರಿಹರ ಎಂದು ಹೇಳುವುದು ಜಿಲ್ಲಾ ಮಂತ್ರಿ ಹೇಳಿದಂತೆ ಕೇಳುವುದಾದರೆ ಅವರ ಮನೆಗೆ ಹೋಗಿ ಕಸ ಗುಡಿಸಿ ಎನ್ನುವುದು ಸಮಂಜಸ ಅಲ್ಲ. ಕೆಲವೊಮ್ಮೆ ಶಾಸಕರು ಅಲ್ಪಸಂಖ್ಯಾತರಿಗೆ ಮತ್ತು ಸಣ್ಣಪುಟ್ಟ ಜಾತಿ ವ್ಯಕ್ತಿಗಳಿಗೆ ಏಕವಚನದಲ್ಲಿ ಸಂಬೋಧಿಸುವುದು ಗೌರವ ಕೊಡದೆ ದರ್ಪ ದಿಂದ ಮಾತನಾಡುವುದು ಇತ್ತೀಚಿಗೆ ಹೆಚ್ಚಾಗುತ್ತಿದೆ. ಇಂತಹ ವರ್ತನೆಗಳನ್ನು ಕಾಂಗ್ರೆಸ್ ಖಂಡಿಸುತ್ತದೆ ಎಂದರು.
ತಾಪಂ ಪ್ರಗತಿ ಪರಿಶೀಲನಾ ಸಮಿತಿ ಸದಸ್ಯ ಬಿ.ಬಿ.ಮಲ್ಲೇಶ್, ಈಗಾಗಲೇ ಈ ವಿಚಾರವಾಗಿ ಪಕ್ಷದಿಂದ ಜಿಪಂ ಸಿಇಒಗೆ ದೂರು ಸಲ್ಲಿಸಲಾಗಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಸದಸ್ಯ ಹಾಗೂ ಅಂಜುಮನ್ ಕಮಿಟಿ ಸದಸ್ಯ ಎಂ.ಎಸ್. ಬಾಬುಲಾಲ್, ನಗರಸಭೆ ಸದಸ್ಯ ಸೈಯದ್ ಅಬ್ದುಲ್ ಅಲೀಂ, ದಾದಾಪೀರ್ ಭಾನುವಳ್ಳಿ, ಮಲೇಬೆನ್ನೂರಿನ ಸೈಯದ್ ಜಾಕೀರ್, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಆರ್. ವಿಜಯಕುಮಾರ್ ಇತರರು ಇದ್ದರು.
- - -ಕೋಟ್ ಈ ಹಿಂದೆ ಜಿ.ಎಂ. ಸಿದ್ದೇಶ್ವರ್ ಲೋಕಸಭಾ ಸದಸ್ಯರಿದ್ದಾಗ ಹಲವಾರು ಸಭೆಗಳಿಗೆ ಅವರನ್ನು ಆಹ್ವಾನಿಸಲಾಗಿತ್ತು. ಆಗ ಇಲ್ಲದ ಶಿಷ್ಟಾಚಾರ ಈಗ ಏಕೆ? ಶಾಮನೂರು ಕುಟುಂಬಕ್ಕೆ ಬೈಯುವುದು, ಹಗುರವಾಗಿ ಮಾತನಾಡುವುದು ಮುಂದುವರಿದರೆ ಮುಂದಿನ ದಿನಗಳಲ್ಲಿ ಪಕ್ಷ ಹೋರಾಟ ನಡೆಸುವುದು
- ಎಂ.ಬಿ. ಅಬಿದಾಲಿ, ಅಧ್ಯಕ್ಷ, ಬ್ಲಾಕ್ ಕಾಂಗ್ರೆಸ್, ಮಲೇಬೆನ್ನೂರು- - - -೨೪ಎಚ್‌ಆರ್‌ಆರ್೦೧:
ಹರಿಹರದಲ್ಲಿ ಕಾಂಗ್ರೆಸ್ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.