ಮಗು ಮನಸ್ಸಲ್ಲಿ ಉತ್ತಮ ಭಾವನೆ ಅರಳುವುದು ಮುಖ್ಯ: ಎಂ.ಎಚ್‌. ನಾಯ್ಕ

| Published : Mar 30 2024, 12:51 AM IST

ಸಾರಾಂಶ

ಬಾಲ್ಯದ ಸವಿನೆನಪುಗಳನ್ನು ಮೆಲುಕು ಹಾಕುವುದರಿಂದ ಸಂತಸ ಹೆಚ್ಚಾಗಲು ಸಾಧ್ಯ.

ಸಿದ್ದಾಪುರ: ದೈಹಿಕ ಮಾನಸಿಕ ಬೆಳವಣಿಗೆಯ ಜತೆ ಭಾವನಾತ್ಮಕ ವಿಕಾಸದತ್ತ ಶಿಕ್ಷಕರು ಹಾಗೂ ಪಾಲಕರು ಹೆಚ್ಚು ಗಮನ ಕೊಡಬೇಕಾಗಿದೆ. ಮಗುವಿನ ಮನಸ್ಸಿನಲ್ಲಿ ಉತ್ತಮ ಭಾವನೆ ಅರಳುವುದು ಅತೀ ಮುಖ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ನಾಯ್ಕ ತಿಳಿಸಿದರು.

ಸ್ಥಳೀಯ ಬಾಲಭವನದಲ್ಲಿ ನಿವೃತ್ತ ನೌಕರರ ಸಂಘ ಮತ್ತು ಲಯನ್ಸ್‌ ಕ್ಲಬ್ ಸಹಯೋಗದಲ್ಲಿ ಮಕ್ಕಳ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಸಾಹಿತಿಗಳು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯ ಶಿಕ್ಷಕ ಜಿ.ಜಿ. ಹೆಗಡೆ ಬಾಳಗೋಡ ಮಾತನಾಡಿ, ಬಾಲ್ಯದ ಸವಿನೆನಪುಗಳನ್ನು ಮೆಲುಕು ಹಾಕುವುದರಿಂದ ಸಂತಸ ಹೆಚ್ಚಾಗಲು ಸಾಧ್ಯ ಎಂದರು. ಕೇಂದ್ರ ಸಾಹಿತ್ಯ ಅಕಾಡೆಮಿ ಬಾಲ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಮಕ್ಕಳ ಸಾಹಿತಿ ತಮ್ಮಣ್ಣ ಬೀಗಾರ ಮಾತನಾಡಿ, ಮಗು ಹುಟ್ಟುತ್ತಲೇ ವಿಶ್ವಮಾನವ ಆಗಿರುತ್ತದೆ. ಇದರ ಪೋಷಣೆಗೆ ಪೂರಕವಾದ ವಾತಾವರಣ ಸಿಗುವಂತೆ ಎಲ್ಲರೂ ಕಾಳಜಿ ವಹಿಸಬೇಕು. ಅವರಿಗೆ ಅಂತಹ ಪರಿಸರ ಒದಗಿಸುವಲ್ಲಿ ಇಂತಹ ಶಿಬಿರಗಳು ಸಹಾಯಕ ಎಂದರು.

ಅತಿಥಿ ಲಯನ್ಸ್‌ ಕ್ಲಬ್ ಅಧ್ಯಕ್ಷ ಆರ್.ಎಂ. ಪಾಟೀಲ್, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕ ಕೋಶಾಧ್ಯಕ್ಷ ಪ್ರಕಾಶ ಹೊಸೂರ, ಲಯನ್ಸ್‌ ಕ್ಲಬ್ ಮಾಜಿ ಅಧ್ಯಕ್ಷೆ ಶಾಮಲ ಹೆಗಡೆ ಹೂವಿನಮನೆ ಮಾತನಾಡಿದರು. ಪಾಲಕರ ಪರವಾಗಿ ಪುಷ್ಪಲತಾ ನಾಯ್ಕ, ಎಂ.ಟಿ. ಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.

ಲಯನ್ಸ್‌ ಕಾರ್ಯದರ್ಶಿ ಕುಮಾರ ಗೌಡರ್ ಮತ್ತು ನಿವೃತ್ತ ನೌಕರರ ಸಂಘದ ಉಪಾಧ್ಯಕ್ಷ ಎನ್.ವಿ. ಹೆಗಡೆ ಇದ್ದರು. ಅಧ್ಯಕ್ಷತೆ ವಹಿಸಿದ್ದ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಗೌಡರ್ ಮಾತನಾಡಿದರು. ಶಿಬಿರದ ಸಂಯೋಜನೆಯನ್ನು ಬಿಸಿಎಂ ತಾಲೂಕು ಅಧಿಕಾರಿ ಕೆ.ಕೆ. ಗಣಪತಿ ಹಾಗೂ ಸಹಯಕರಾದ ಅನಂತ ಮತ್ತು ವಿ.ಎಸ್. ಶೇಟ್ ಅವರು ಸಹಕರಿಸಿದರು. ಜಿ.ಎಂ. ಕುಮಟಕರ್ ನಿರೂಪಿಸಿದರು.