ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಹೊಲೆಯ ಸಮುದಾಯದ ಸಬಲೀಕರಣವು ಶಿಕ್ಷಣ, ಆರ್ಥಿಕ ಸ್ವಾವಲಂಬನೆ, ರಾಜಕೀಯ ಪ್ರಾತಿನಿಧ್ಯ ಮತ್ತು ಸಾಮಾಜಿಕ ಸಮಾನತೆಯಿಂದ ಮಾತ್ರ ಸಾಧ್ಯ. ಇದಾಗಬೇಕಾದರೆ ಮೊದಲು ಹೊಲೆಯರೆಲ್ಲಾ ಸಂಘಟಿತರಾಗಬೇಕು ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಕರೆ ನೀಡಿದರು.ನಗರದ ಕನ್ನಡ ಭವನದಲ್ಲಿ ಜಿಲ್ಲಾ ಬಲಗೈಜಾತಿಗಳ ಒಕ್ಕೂಟದ ವತಿಯಿಂದ ಏರ್ಪಡಿಸಿದ್ದ ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳ ಪದಗ್ರಹಣ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಇತಿಹಾಸದಲ್ಲಿ ಭೂಮಾಲಿಕರು, ಯೋಧರು ಆಗಿದ್ದ ನಮ್ಮ ಸಮುದಾಯವು ಬದಲಾದ ಕಾಲಘಟ್ಟದಲ್ಲಿ ತೀರಾ ನಿಕೃಷ್ಟವಾದ ಬದುಕನ್ನು ಬದುಕಲು ಪ್ರಾರಂಭಿಸಿದರು. ಬಾಬಾ ಸಾಹೇಬರ ಜನನದ ಕಾರಣವಾಗಿ ಇಂದು ನಾವು ಘನತೆಯ ಬದುಕನ್ನು ಬದುಕಲು ಸಾಧ್ಯವಾಗಿದೆ. ಅಂಬೇಡ್ಕರ್ ವಂಶಸ್ಥರಾದ ನಾವು ಅವರಂತೆ ಆಗಲು ಪ್ರಯತ್ನಿಸಬೇಕು. ಆಧುನಿಕ ಶಿಕ್ಷಣ, ಕೌಶಲ್ಯಾಭಿವೃದ್ದಿ, ಮೀಸಲಾತಿಯ ಸದ್ಬಳಕೆ ಮತ್ತು ಸಾಮಾಜಿಕ ತಾರತಮ್ಯದ ವಿರುದ್ಧ ಸಂಘಟಿತ ಹೋರಾಟದ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಲಿದೆ ಎಂದರು. ಸಮುದಾಯದ ಹೆಸರು ಹೇಳಲು ಭಯ ಬೇಡ. ಅವಕಾಶಗಳಿಂದ ವಂಚಿತರಾಗುವುದು ಬೇಡ. ನಾಚಿಕೆ ಅದು ಇದು ಎನ್ನದೆ ನಮಗಿರುವ ಸಮಾನ ಅವಕಾಶಗಳನ್ನು ಕೇಳಿ. ಏನಾದರೂ ಅಚಲವಾದ ಗುರಿ ಸಾಧಿಸಬೇಕೆಂಬ ಹಠವಿರಲಿ. ಉದ್ದಿಮೆಗೆಳನ್ನು ಸ್ಥಾಪಿಸಿ ಮುಂದೆ ಬಂದು ಉಧ್ಯಮಪತಿಗಳಾಗಿ, ಇದಕ್ಕೆ ಬೇಕಾದ ನೆರವನ್ನು ಸರ್ಕಾರದಿಂದ ಕೊಡಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಕರೆ ನೀಡಿದರು. ಒಳಮೀಸಲಾತಿಯ ಅಪಾಯದಿಂದ ಸಮುದಾಯವನ್ನು ಪಾರುಮಾಡಲು ಒಗ್ಗಟ್ಟಿನ ಹೋರಾಟ ಅಗತ್ಯ. ಈವರೆಗೆ ನಾವು ಕೇವಲ ಮತದಾರರಾಗಿ ನಾವು ಬಳಕೆಯಾಗಿದ್ದೇವೆ. ಭವಿಷ್ಯದಲ್ಲಿ ಹೀಗಾಗದಂತೆ ನಮ್ಮಲ್ಲಿಯೇ ನಾಯಕರಾಗಿ ಬೆಳೆಯುವ ಗುಣವನ್ನು ಬೆಳೆಸಿಕೊಳ್ಳಬೇಕು. ಸಂಘಟಿತ ಮಾಡಲಿಲ್ಲ ಎಂದರೆ ಭವಿಷ್ಯದಲ್ಲಿ ಕಷ್ಟ ಆಗಲಿದೆ. ಈ ಭಾಗದಲ್ಲಿ ಬಹಳ ಹಿಂದೆಯೇ ರಾಜಕೀಯದಲ್ಲಿ ಹೊಲೆಯ ಸಮುದಾಯದ ಪ್ರಾತಿನಿಧ್ಯ ತರಲು ಶ್ರಮಿಸಿದ್ದೇ ಆಗಲಿಲ್ಲ. ಆದ್ದರಿಂದ ನಾವು ಸಮಯ ಬಂದಾಗ ನಮ್ಮ ಅವಕಾಶಗಳನ್ನು ಕಿತ್ತುಕೊಳ್ಳ ಬೇಕು. ನಾನು ಜನರಲ್ ಸ್ಥಾನದಿಂದಲೇ ಗೆದ್ದು ಬಂದಿದ್ದೆ. ಈ ಮಟ್ಟಿಗಿನ ವಿಶ್ವಾಸವನ್ನು ಸಮಾಜದಲ್ಲಿ ಬೆಳೆಸಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಮುದಾಯಕ್ಕೆ ಬೇಕಾದ ಸೌಲಭ್ಯಗಳನ್ನು ಕೊಡಿಸಲು ನಾನು ಸೇರಿಂದಂತೆ ನನ್ನಂತಿರುವ ಜನಪ್ರತಿನಿಧಿಗಳು ಸಿದ್ಧ. ನಾವು ಭಯಪಡುವ ಅಗತ್ಯವಿಲ್ಲ. ಸಮುದಾಯದ ಹಿಂದೆ ಹೋದಾಗ ಟೀಕೆ ಟಿಪ್ಪಣಿ ಸಹಜ ಅದನ್ನು ಮರೆಯಿರಿ. ಸ್ವಂತ ಶಕ್ತಿಯ ಮೇಲೆ ನಿಂತುಕೊಳ್ಳಿ. ತಾಲೂಕಿಗೊಂದು ಸಂಘಟನೆ ಮಾಡಿ. ಕಾರ್ಯಕ್ರಮ ಸಣ್ಣದಾದರೂ ಪರವಾಗಿಲ್ಲ ಮಾಡಿ, ಸಮೃದ್ದಿ ಮಂಜುನಾಥ್, ಆನೇಕಲ್ ಶಿವಣ್ಣ, ನಾಗೇಶ್ ಹೀಗೆ ಎಲ್ಲಾ ರಾಜಕಾರಣಿಗಳು ಒಗ್ಗೂಡಲಿ.

ಒಳಮೀಸಲಾತಿ ಜಾರಿಯಿಂದಾಗಿ ಬಲಗೈ ಸಮುದಾಯಕ್ಕೆ ಏನೇನೂ ಅನುಕೂಲ ಆಗಿಲ್ಲ. ಸಮೀಕ್ಷೆಯಲ್ಲಿ ನಮ್ಮ ಸಂಖ್ಯಾಬಲ ಕಡಿಮೆ ಆಗಿದ್ದರಿಂದ ಅನಿವಾರ್ಯವಾಗಿ ಜಾರಿಗೆ ಒಪ್ಪಲಾಗಿದೆ. ರೋಸ್ಟರ್ ಬಿಂದುಗಳಲ್ಲಿ ನಮ್ಮನ್ನು 9ಕ್ಕೆ ಸೇರಿಸಿರುವುದರಿಂದ ಶಿಕ್ಷಣ ಮತ್ತು ಉದ್ಯೋಗದಲ್ಲಿ ಭಾರೀ ಅನ್ಯಾಯ ಆಗುತ್ತಿದೆ. ಪರಿಸ್ಥಿತಿ ಹೀಗೆ ಇದ್ದರೂ ನಾವು ಸಂಘಟಿತರಾಗಿ ಹೋರಾಡದೆ ಮಲಗಿದರೆ ನಮ್ಮ ಮಕ್ಕಳ ಭವಿಷ್ಯ ಹಾಳಾಗುತ್ತದೆ. ನನಗಿರುವ ಮಾಹಿತಿಯಂತೆ ಚಿಕ್ಕಬಳ್ಳಾಪುರದಲ್ಲಿ ನಮ್ಮ ಸಂಖ್ಯೆ ದೊಡ್ಡದಿದೆ. ಶಾಸಕರ ಬಳಿ ಹೋಗಿ ಬೇಕಾದ ಸೌಲಭ್ಯಗಳನ್ನು ಕೇಳಿ ಪಡೆಯೋಣ. ಸಂಖ್ಯೆ ಕಡಿಮೆ ಇದ್ದರೂ ಚಿಂತೆಯಿಲ್ಲ ಹಕ್ಕು ಕೇಳು ಹಿಂಜರಿಕೆ ಬೇಡ ಎಂದರು.

ಸಂಸ್ಥಾಪಕ ಅಧ್ಯಕ್ಷ ಏಡುಕೊಂಡಲ ಶ್ರೀನಿವಾಸ್ ಮಾತನಾಡಿ, ಸಂಘನೆಯಿಲ್ಲದೆ ಸೊರಗಿದೆ. ಹೀಗಾಗಿಯೇ ಬಲಗೈಜಾತಿಗಳ ಒಕ್ಕೂಟ ಮಾಡಲಾಗಿದೆ. ಇದಕ್ಕೆ ತಾಲೂಕಿಗೆ 11 ಮಂದಿಯ ಸಮಿತಿ ಮಾಡಲಾಗಿದೆ. ಜನಾಂಗದ ಕಡುಬಡವರಿಗೆ ನೆರವಾಗುವ ಉದ್ದೇಶದಿಂದ ಸಂಘಟನೆ ಮಾಡಲಾಗಿದೆ. ಉಚಿತ ಕಲ್ಯಾಣ ಮಂಟಪ ಕಟ್ಟುವ ಚಿಂತನೆ ಇದೇ. ಉನ್ನತ ಶಿಕ್ಷಣಕ್ಕೆ ನೆರವು ನೀಡುವ ಉದ್ದೇಶ ಇದೆ. ಇಂತಹ ಒಳ್ಳೆಯ ಕೆಲಸಗಳಿಗೆ ಮುಂದಾದರೆ ಕಾಲೆಳೆಯುವ ಸನ್ನಿವೇಶ ಸೃಷ್ಟಿಸುವುದನ್ನು ಬಿಡಿ. ಸಮುದಾಯಕ್ಕಾಗಿ ನಾನು ಅನುದಾನ ತಂದಿದ್ದು ಅದರ ವಿತರಣೆಗೆ ನೀವೆಲ್ಲಾ ಕೈಜೋಡಿಸಿ. ಸಮುದಾಯವನ್ನು ಎಂದಿಗೂ ಒಡೆಯಲಾರೆ, ಸ್ವಾರ್ಥಕ್ಕಾಗಿ ಬಳಸಲಾರೆ, ತಪ್ಪು ಮಾಡಿದರೆ ತಿದ್ದಿ. ಒಳಮೀಸಲಾತಿಯಿಂದಾಗಿ ನಮ್ಮ ಹಕ್ಕನ್ನು ಪಡೆಯಲು ಹೋರಾಟ ರೂಪಿಸಲಾಗುವುದು ಎಂದರು.ಕಾರ್ಯಕ್ರಮದಲ್ಲಿ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಲಾಯಿತು, ಗಣ್ಯರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಮುಖಂಡರಾದ ಕೃಷ್ಣಪ್ಪ, ಬಿ.ಎಚ್.ನರಸಿಂಹಪ್ಪ, ರಾಮಕೃಷ್ಣಪ್ಪ, ಗಂಗಾಧರ್, ನರಸಿಂಹಮೂರ್ತಿ, ವಿ.ಕೃಷ್ಣಪ್ಪ, ನರಸಿಂಹಮೂರ್ತಿ, ಪಿ.ತ್ಯಾಗರಾಜ್, ಆಂಜನೇಯ,ರವಿಕಿರಣ್ , ಹರೀಶ್, ಮುರಳೀಧರ್, ಹರೀಶ್ ಕೆ.ಎನ್. ಗಂಗಾಧರಪ್ಪ, ನಾರಾಯಣಪ್ಪ, ವೆಂಕಟರೆಡ್ಡಿ, ಚಿನ್ನಪ್ಪ, ವೆಂಕಟೇಶ್, ನಾರಾಯಣಸ್ವಾಮಿ, ಮುನಿರಾಜು, ಕಳವಾರ ಶ್ರೀಧರ್, ವೆಂಕಟಕೃಷ್ಣ, ಗೌರೀಶ್, ಎಚ್ಎಸ್ ನಾಗರಾಜ್, ರಾಮಚಂದ್ರಪ್ಪ, ಎಂ.ಸಿ.ಚಿಕ್ಕನರಸಿಂಹಪ್ಪ, ವೈ.ಶಂಕರಪ್ಪ, ತುಳಸಿಕೃಷ್ಣ, ಚಂದ್ರು ಮತ್ತಿತರರು ಇದ್ದರು.


ಸಿಕೆಬಿ-1 ನಗರದ ಕನ್ನಡ ಭವನದಲ್ಲಿ ಜಿಲ್ಲಾ ಬಲಗೈಜಾತಿಗಳ ಒಕ್ಕೂಟದ ವತಿಯಿಂದ ಏರ್ಪಡಿಸಿದ್ದ ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳ ಪದಗ್ರಹಣ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಪ್ರತಿಜ್ಞಾವಿಧಿ ಬೋಧಿಸಿದರು.